2024ರಲ್ಲಿ ಪ್ರಧಾನಿ ಸ್ಥಾನಕ್ಕಾಗಿ ಮೋದಿ ವಿರುದ್ಧ ನಿತೀಶ್ ಸ್ಪರ್ಧೆ!
ಪಾಟ್ನಾ, ನವೆಂಬರ್.01: ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಎನ್ ಡಿಎ ಮೈತ್ರಿಕೂಟ ತೊರೆದು ಹೋಗಲಿರುವ ಸಿಎಂ ನಿತೀಶ್ ಕುಮಾರ್ ಅವರು 2024ರ ಲೋಕಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ವಿರುದ್ಧ ಪ್ರಧಾನಮಂತ್ರಿ ಸ್ಥಾನಕ್ಕೆ ಪ್ರತಿಸ್ಪರ್ಧಿ ಆಗುವ ಸಾಧ್ಯತೆಯಿದೆ ಎಂದು ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಆರೋಪಿಸಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆ ಬಳಿಕ ಕಾಂಗ್ರೆಸ್-ಆರ್ ಜೆಡಿಯ ಮಹಾಘಟಬಂಧನ್ ಜೊತೆಗೆ ಸಿಎಂ ನಿತೀಶ್ ಕುಮಾರ್ ಕೈಜೋಡಿಸಲಿದ್ದಾರೆ. ಮಹಾಮೈತ್ರಿಕೂಟದ ಜೊತೆಗೆ ಸೇರಿಕೊಂಡು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಗುರುತಿಸಿಕೊಳ್ಳುವುದಕ್ಕೆ ಹಾತೊರೆಯುತ್ತಿದ್ದಾರೆ. ಆದರೆ ಎಲ್ ಜೆಪಿ ಮಾತ್ರ ಬಿಜೆಪಿಯ ಮಿತ್ರಪಕ್ಷವಾಗಿ ನಿಷ್ಠೆಯಿಂದ ಇರಲಿದೆ ಎಂದು ಚಿರಾಗ್ ಪಾಸ್ವಾನ್ ಪುನರುಚ್ಛರಿಸಿದರು.
ಮುಖ್ಯಮಂತ್ರಿ ನಿತೀಶ್ ಕುಮಾರ್ ರನ್ನು "ಪಲ್ಟಿರಾಮ್" ಎಂದು ಸಂಬೋಧಿಸಿದ ಚಿರಾಗ್ ಪಾಸ್ವಾನ್, ಅವರು ಅಧಿಕಾರಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಾರೆ ಎಂದು ದೂರಿದರು. ಆರ್ ಜೆಡಿ ಜೊತೆಗೆ ಅಧಿಕಾರಕ್ಕಾಗಿ ಕೈಜೋಡಿಸಿದ್ದ ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದರು. ಅದಾಗಿ ಕೆಲವೇ ತಿಂಗಳಿನಲ್ಲಿ ಲಾಲೂ ಪ್ರಸಾದ್ ಯಾದವ್ ಅವರ ಜೊತೆಗೆ ಮುನಿಸಿಕೊಂಡು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡರು ಎಂದು ಪಾಸ್ವಾನ್ ಹೇಳಿದರು.

ನರೇಂದ್ರ ಮೋದಿಗೆ ಪ್ರತಿಸ್ಪರ್ಧಿಯಾಗುವ ಬಯಕೆ:
ಗುಜರಾತ್ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಅವರನ್ನು ಮೊದಲ ಬಾರಿಗೆ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಗುರುತಿಸಿದ ಸಂದರ್ಭದಲ್ಲಿ ನಿತೀಶ್ ಕುಮಾರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕಟುವಾದ ಪದಗಳಿಂದ ಬಿಜೆಪಿಯ ತೀರ್ಮಾನವನ್ನು ಖಂಡಿಸಿದ್ದು, ನರೇಂದ್ರ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿದ್ದರು. ಇದೀಗ ಬಿಜೆಪಿಯ ಜೊತೆಗಿರುವ ಸಿಎಂ ನಿತೀಶ್ ಕುಮಾರ್, 2024ರ ಲೋಕಸಭಾ ಚುನಾವಣೆಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಳ್ಳುವುದಕ್ಕೆ ಯೋಜನೆ ಹಾಕಿಕೊಂಡಿದ್ದಾರೆ. ಈ ಹಿಂದೆ ಕೂಡ ಅದಕ್ಕಾಗಿ ಮಹಾಮೈತ್ರಿಕೂಟದ ಜೊತೆಗೆ ಹೋಗಿದ್ದು, ತೀವ್ರ ಮುಖಭಂಗ ಅನುಭವಿಸಿದ್ದರು ಎಂದು ಪಾಸ್ವಾನ್ ನೆನಪಿಸಿದರು.












Click it and Unblock the Notifications