ಬಿಹಾರ: ಅಂತಿಮ ಹಂತದ ಚುನಾವಣೆ, ಘಟನಾಘಟಿಗಳ ಭವಿಷ್ಯ ನಿರ್ಧಾರ
ಪಾಟ್ನಾ, ನ. 6: ಬಿಹಾರದಲ್ಲಿ ಅಂತಿಮ ಹಂತದ ಚುನಾವಣೆಯಲ್ಲಿ ಘಟಾನುಘಟಿಗಳ ಭವಿಷ್ಯ ನಿರ್ಧಾರವಾಗಲಿದೆ. ಮೂರನೇ ಹಂತದಲ್ಲಿ ಉತ್ತರ ಬಿಹಾರ ಹಾಗೂ ಸೀಮಾಂಚಲ ಜಿಲ್ಲೆಗಳಲ್ಲಿ ಮತದಾನಕ್ಕೆ ಸಕಲ ಸಿದ್ಧತೆಯಾಗಿದೆ.
ನವೆಂಬರ್ 07ರಂದು ಮೂರನೇ ಹಂತದಲ್ಲಿ 78 ಕ್ಷೇತ್ರಗಳಿಗೆ 19 ಜಿಲ್ಲೆಗಳಲ್ಲಿ ಅಂದಾಜು 33,500 ಮತಗಟ್ಟೆಗಳಲ್ಲಿ ಬೆಳಗ್ಗೆ 7ರಿಂದ ಮತದಾನ ಪ್ರಕಿಯೆ ಆರಂಭವಾಗಲಿದೆ. 243 ಸದಸ್ಯ ಬಲದ ವಿಧಾನಸಭೆಗೆ ಮೂರು ಹಂತದಲ್ಲಿ ಚುನಾವಣೆ ನಡೆಸಲಾಗಿದ್ದು, ನವೆಂಬರ್10ರಂದು ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶವು ಹೊರ ಬೀಳಲಿದೆ.
ಅಂತಿಮ ಹಂತದಲ್ಲಿ ಹಿರಿಯ ರಾಜಕಾರಣಿ ಶರದ್ ಯಾದವ್ ಅವರ ಪುತ್ರಿ ಬಿಹಾರಿಗಂಜ್ ಕಾಂಗ್ರೆಸ್ ಅಭ್ಯರ್ಥಿ ಸುಭಾಷಿಣಿ ಸೇರಿದಂತೆ ನಿತೀಶ್ ಕುಮಾರ್ ಸಚಿವ ಸಂಪುಟದ ಸುರೇಶ್ ಶರ್ಮ, ಪ್ರಮೋದ್ ಕುಮಾರ್ ಸೇರಿದಂತೆ 8 ಸಚಿವರು, ಸ್ಪೀಕರ್ ವಿಜಯ್ ಕುಮಾರ್ ಚೌಧರಿ ಭವಿಷ್ಯ ನಿರ್ಧಾರವಾಗಲಿದೆ.

ಅರಾರಿಯಾ, ಸಹರ್ಸಾ ಜಿಲ್ಲೆಗಳಲ್ಲಿ ಪ್ರಧಾನಿ ಮೋದಿ ಅವರು ಎನ್ಡಿಎ ಅಭ್ಯರ್ಥಿಗಳ ಪರ ಸುಮಾರು 12 ಸಮಾವೇಶಗಳಲ್ಲಿ ಪಾಲ್ಗೊಂಡಿದ್ದರು. ಮಹಾಘಟಬಂಧನ್ ಅಭ್ಯರ್ಥಿಗಳ ಪರ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಚಾರ ನಡೆಸಿದ್ದಲ್ಲದೆ ಇವಿಎಂ ಬಗ್ಗೆ ಸಂಶಯ ವ್ಯಕ್ತಪಡಿಸಿ, ಇದು ಇವಿಎಂ ಅಲ್ಲ ಮೋದಿ ವೋಟಿಂಗ್ ಮಷಿನ್ (ಎಂವಿಎಂ) ಎಂದು ಮತ್ತೊಮ್ಮೆ ಇವಿಎಂ ಬಗ್ಗೆ ಅನುಮಾನ ಹುಟ್ಟುಹಾಕಿದರು. ನಿತೀಶ್ ಕುಮಾರ್ ಅವರು ಸಮಾವೇಶಕ್ಕೆ ತೆರಳುವಾಗ ಈರುಳ್ಳಿ, ಕಲ್ಲೆಸೆತದ ಘಟನೆ ನಡೆಯಿತು. ಸರಣಿ ಸಮಾವೇಶಗಳ ಮೂಲಕ ತೇಜಸ್ವಿ ಯಾದವ್ ಗಮನ ಸೆಳೆದರು.
ಮುಸ್ಲಿಂ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಅರಾರಿಯಾ, ಸೀಮಾಂಚಲ್ ಪ್ರದೇಶಗಳಲ್ಲಿ ಎಐಎಂಐಎಂ ಒವೈಸಿ, ಆರ್ ಎಲ್ ಎಸ್ ಪಿ ಅಧ್ಯಕ್ಷ ಉಪೇಂದ್ರ ಕುಶ್ವಾಹ ಅವರ ಮೈತ್ರಿಕೂಟ ಕೂಡಾ ಹೆಚ್ಚಿನ ಸ್ಥಾನಗಳ ನಿರೀಕ್ಷೆಯಲ್ಲಿದೆ.












Click it and Unblock the Notifications