ಅಲ್ಪಸಂಖ್ಯಾತರ ಪ್ರಾಬಲ್ಯ ಇರುವ ಸೀಮಾಂಚಲದಲ್ಲಿಯೂ ಎನ್‌ಡಿಎ ಮುನ್ನಡೆ
ಪಟ್ನಾ, ನವೆಂಬರ್ 10: ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಮಂಗಳವಾರ ನಡೆಯುತ್ತಿದ್ದು, ಎಕ್ಸಿಟ್ ಪೋಲ್ ಸಮೀಕ್ಷೆಗಳಿಗೆ ವಿರುದ್ಧವಾಗಿ ಎನ್‌ಡಿಎ ಮುನ್ನಡೆ ಪಡೆದುಕೊಂಡಿದೆ. ಅದರಲ್ಲಿಯೂ ಬಿಜೆಪಿಗೆ ಸೈದ್ಧಾಂತಿಕ ವಿರೋಧ ಹೆಚ್ಚಿರುವ ಅಲ್ಪಸಂಖ್ಯಾತರೇ ಅಧಿಕ ಸಂಖ್ಯೆಯಲ್ಲಿ ಇರುವ ಸೀಮಾಂಚಲ ಪ್ರದೇಶಗಳಲ್ಲಿಯೂ ಎನ್‌ಡಿಎ ಮುನ್ನಡೆ ಸಾಧಿಸಿರುವುದು ಅಚ್ಚರಿ ಮೂಡಿಸಿದೆ. ಇಲ್ಲಿ ತಮ್ಮ ಅಭ್ಯರ್ಥಿಗಳನ್ನು ಇಳಿಸುವ ಮೂಲಕ ಎಐಎಂಐಎಂನ ಅಸಾದುದ್ದೀನ್ ಓವೈಸಿ ಎನ್‌ಡಿಎ ಮುನ್ನಡೆಗೆ ನೆರವಾಗಿದ್ದಾರೆ.
Recommended Video
ಸೀಮಾಂಚಲ ಪ್ರದೇಶದ ನಾಲ್ಕು ಹಾಗೂ ಕೋಸಿಯ ಮೂರು ಜಿಲ್ಲೆಗಳಲ್ಲಿನ 37 ಸೀಟುಗಳಲ್ಲಿ ಆಡಳಿತಾರೂಢ ಎನ್‌ಡಿಎ ಎದುರಾಳಿ ಮಹಾಘಟಬಂಧನಕ್ಕಿಂತ ಕೊಂಚ ಮುನ್ನಡೆ ಸಾಧಿಸಿದೆ. ಕೋಸಿಯಲ್ಲಿ ಜೆಡಿಯು ಮುನ್ನಡೆ ಪಡೆದಿದ್ದರೆ, ಸೀಮಾಂಚಲದಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ.
ಕೋಸಿಯ ಸುಪೌಲ್, ಸಹರ್ಸಾ ಮತ್ತು ಮಾಧೇಪುರ ಜಿಲ್ಲೆಗಳಲ್ಲಿ 13 ವಿಧಾನಸಭೆ ಕ್ಷೇತ್ರಗಳಿದ್ದರೆ, ಸೀಮಾಂಚಲದ ಪೂರ್ನಿಯಾ, ಕಟಿಹಾರ್, ಮಾಧೇಪುರ ಮತ್ತು ಅರಾರಿಯಾ ಜಿಲ್ಲೆಗಳಲ್ಲಿ 24 ವಿಧಾನಸಭೆ ಕ್ಷೇತ್ರಗಳಿವೆ.

ಮಾಧೇಪುರದಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಮಾಧೇಪುರ, ಸಿಂಘೇಶ್ವರ್ ಮತ್ತು ಸುಪೌಲ್‌ನಲ್ಲಿ ಮುನ್ನಡೆ ಸಾಧಿಸಿದೆ. ಸೀಮಾಂಚಲದಲ್ಲಿ ಧಂದಾಹ ಮತ್ತು ರುಪೌಲಿ ಕ್ಷೇತ್ರಗಳಲ್ಲಿ ಜೆಡಿಯು ಮುನ್ನಡೆ ಪಡೆದುಕೊಂಡಿದೆ. ಪೂರ್ನಿಯಾ, ಪ್ರಾಣ್ಪುರ, ಕಟಿಹಾರ್ ಮತ್ತು ಸಿಕ್ತಿಯಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.
ಕೋಸಿಯಲ್ಲಿ ಜೆಡಿಯು 10 ಅಭ್ಯರ್ಥಿಗಳನ್ನು, ಬಿಜೆಪಿ ಎರಡು ಮತ್ತು ವಿಐಪಿ ಒಂದು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಸೀಮಾಂಚಲದಲ್ಲಿ ಜೆಡಿಯು 11, ಬಿಜೆಪಿ 10, ವಿಐಪಿ 2 ಮತ್ತು ಎಚ್‌ಎಎಂ-ಎಸ್ ಒಂದು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದವು.
ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಇಲ್ಲಿ ಆರ್‌ಜೆಡಿ, ಕಾಂಗ್ರೆಸ್ ಹಾಗೂ ಎಡಪಕ್ಷಗಳನ್ನು ಒಳಗೊಂಡ ಮಹಾಘಟಬಂಧನಕ್ಕೆ ಹೆಚ್ಚಿನ ಅವಕಾಶವಿತ್ತು. ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ 14 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ಮಹಾಘಟಬಂಧನಕ್ಕೆ ಹಿನ್ನಡೆಯುಂಟುಮಾಡಿದೆ. ಅಲ್ಪಸಂಖ್ಯಾತ ಮತಗಳು ಹರಿದುಹಂಚಿಹೋಗಿರುವುದರಿಂದ ಎನ್‌ಡಿಎ ಮೈತ್ರಿಕೂಟಕ್ಕೆ ಇಲ್ಲಿ ಲಾಭ ಸಿಕ್ಕಿದೆ.












Click it and Unblock the Notifications