ಬಿಹಾರ: ದಿಘಾ ಮತಗಟ್ಟೆಯಲ್ಲಿ ರಾಜ್ಯಪಾಲ ಫಾಗು ಚೌವ್ಹಾಣ್ ಮತದಾನ
ಪಾಟ್ನಾ, ನವೆಂಬರ್.03: ಬಿಹಾರದಲ್ಲಿ 94 ವಿಧಾನಸಭಾ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಚುರುಕಿನ ಮತದಾನ ನಡೆಯುತ್ತಿದೆ. ಬೆಳ್ಳಂಬೆಳಗ್ಗೆ ಪಾಟ್ನಾದ ದಿಘಾ ಸರ್ಕಾರಿ ಶಾಲೆಯ ಮತಗಟ್ಟೆಗೆ ತೆರಳಿದ ರಾಜ್ಯಪಾಲ ಫಾಗು ಚೌವ್ಹಾಣ್ ತಮ್ಮ ಹಕ್ಕು ಚಲಾಯಿಸಿದರು.
ಎರಡನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಫಾಗು ಚೌವ್ಹಾಣ್ ಮನವಿ ಮಾಡಿಕೊಂಡರು.
ಕಳೆದ ಬಾರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮತದಾನ ಮಾಡಬೇಕು. ಈ ಬಾರಿ ಎರಡನೇ ಹಂತದ ಚುನಾವಣೆಯಲ್ಲಿ ದಾಖಲೆಯ ಮಟ್ಟದ ಮತದಾನ ನಡೆಯಲಿದೆ ಎಂದು ರಾಜ್ಯಪಾಲ ಫಾಗು ಚೌವ್ಹಾಣ್ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಎರಡನೇ ಹಂತದ ಮತದಾನ:
ಎರಡನೇ ಹಂತದಲ್ಲಿ 17 ಜಿಲ್ಲೆಗಳ 94 ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. 2.85 ಕೋಟಿ ಜನ ಮತದಾರರು ಈ ಬಾರಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಬಿಹಾರ ಎರಡನೇ ಹಂತದ ಚುನಾವಣೆಯ ಕಣದಲ್ಲಿ 1463 ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ಈ ಪೈಕಿ 1316 ಪುರುಷ ಅಭ್ಯರ್ಥಿಗಳಾಗಿದ್ದರೆ, 146 ಮಹಿಳಾ ಅಭ್ಯರ್ಥಿಗಳಾಗಿದ್ದು, ಒಬ್ಬ ತೃತೀಯ ಲಿಂಗಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
2ನೇ ಹಂತದಲ್ಲಿ ಒಟ್ಟು 2,85,50,285 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು, 1,50,33,034 ಪುರುಷರು ಮತ್ತು 1,35,16,271 ಮಹಿಳಾ ಮತದಾರರು ಹಾಗೂ 980 ತೃತೀಯ ಲಿಂಗದ ಮತದಾರರು ಮತದಾನ ಮಾಡಲಿದ್ದಾರೆ. ಮೂರನೇ ಹಂತದಲ್ಲಿ 15 ಜಿಲ್ಲೆಗಳ 78 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ನವೆಂಬರ್.10ರಂದು ಎಲ್ಲ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶವು ಹೊರ ಬೀಳಲಿದೆ.
ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆಯೇ ಮೊದಲ ಹಂತದಲ್ಲಿ ದಾಖಲೆ ಮಟ್ಟದಲ್ಲಿ ಮತದಾನ ನಡೆದಿತ್ತು. ಅಕ್ಟೋಬರ್.28ರಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ ಶೇ.55.69ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.












Click it and Unblock the Notifications