ಬಂಪರ್: ಗೋವಾದಲ್ಲಿ ಪ್ರತಿ ತಿಂಗಳು ಮಹಿಳೆಯರ ಬ್ಯಾಂಕ್ ಖಾತೆಗೆ 5,000 ರೂ.!
ಪಣಜಿ, ಡಿಸೆಂಬರ್ 11: ಗೋವಾ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವು ಮಹಿಳೆಯರಿಗಾಗಿ ಗೃಹ ಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿದೆ. ಆ ಮೂಲಕ ರಾಜ್ಯದಲ್ಲಿ ಅಸ್ತಿತ್ವ ಸಾಧಿಸಲು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಪ್ಲ್ಯಾನ್ ಮಾಡಿದ್ದಾರೆ.
ರಾಜ್ಯದ ಮತದಾರರ ಮನಸು ಗೆಲ್ಲಲು ಭಾರತೀಯ ಜನತಾ ಪಕ್ಷ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷದ ಜೊತೆ ತೃಣಮೂಲ ಕಾಂಗ್ರೆಸ್ ಪಕ್ಷವೂ ಪೈಪೋಟಿಗೆ ನಿಂತಿವೆ. ಇದರ ಮಧ್ಯೆ ಟಿಎಂಸಿ ಘೋಷಿಸಿದ ಯೋಜನೆಯು ಸಖತ್ ಸುದ್ದಿಯಾಗುತ್ತಿದೆ.
ಗೋವಾದಲ್ಲಿ ಟಿಎಂಸಿ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿಯೊಂದು ಮನೆಯ ಮಹಿಳೆಗೆ ಪ್ರತಿ ತಿಂಗಳು 5,000 ರೂಪಾಯಿ ಸಹಾಯ ಧನ ನೀಡುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ರಾಜ್ಯದ 3.5 ಲಕ್ಷ ಮಹಿಳೆಯರ ಅನುಕೂಲಕ್ಕಾಗಿ ಗೃಹ ಲಕ್ಷ್ಮಿ ಯೋಜನೆಯನ್ನು ಪರಿಚಯಿಸಿದ್ದಾರೆ.

ಮಹಿಳೆಯರ ಖಾತೆಗೆ ವರ್ಷಕ್ಕೆ 60 ಸಾವಿರ ರೂಪಾಯಿ ಜಮೆ
ಗೃಹ ಲಕ್ಮಿ ಯೋಜನೆ ಪ್ರಕಾರ, ರಾಜ್ಯದ ಪ್ರತಿಯೊಂದು ಮನೆಯ ಮಹಿಳೆಗೆ ಪ್ರತಿ ತಿಂಗಳು 5,000 ರೂಪಾತಿ ಹಣವನ್ನು ಜಮಾ ಮಾಡಲಾಗುತ್ತದೆ. ರಾಜ್ಯದ 3.5 ಲಕ್ಷ ಕುಟುಂಬಗಳ ಮಹಿಳೆಯರಿಗೆ ಈ ಸಹಾಯ ಧನ ನೀಡಲಾಗುತ್ತಿದ್ದು, ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ತಿಂಗಳು ತಿಂಗಳು ಹಣವನ್ನು ಜಮೆ ಮಾಡಲಾಗುತ್ತದೆ. ಒಂದು ವರ್ಷದಲ್ಲಿ ಒಟ್ಟು 60,000 ರೂಪಾಯಿ ಹಣವನ್ನು ಜಮೆ ಮಾಡಲಾಗುವುದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಇದು ಗೋವಾದ ಎಲ್ಲಾ 3.5 ಲಕ್ಷ ಕುಟುಂಬಗಳಿಗೆ ಭರವಸೆ ನೀಡಿದ ಮಾಸಿಕ ಆದಾಯ ಬೆಂಬಲದ ಯೋಜನೆಯಾಗಿದೆ ಎಂದು ಟಿಎಂಸಿ ಹೇಳಿದೆ.

ಟಿಎಂಸಿ ಪರಿಚಯಿಸಿದ ಗೃಹ ಲಕ್ಷ್ಮಿ ಯೋಜನೆ ವೆಚ್ಚ ಎಷ್ಟು?
ಗೋವಾದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವು ಪರಿಚಯಿಸಲು ಮುಂದಾಗಿರುವ ಗೃಹ ಲಕ್ಷ್ಮಿ ಯೋಜನೆಗಾಗಿ ಸರ್ಕಾರವು ಸುಮಾರು 1,500 ರಿಂದ 2,000 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡುತ್ತದೆ. ಇದು ಪಕ್ಷದ ಪ್ರಕಾರ ರಾಜ್ಯ ಬಜೆಟ್‌ನ ಶೇಕಡಾ 6 ರಿಂದ 8 ರಷ್ಟುಾಗುತ್ತದೆ. ಈ ರೀತಿ ಯೋಜನೆಗಳ ಮೂಲಕ ಗೋವಾದಲ್ಲಿ ಅಸ್ತಿತ್ವ ಕಂಡುಕೊಳ್ಳುವುದಕ್ಕೆ ತೃಣಮೂಲ ಕಾಂಗ್ರೆಸ್ ಪಕ್ಷವು ಕಸರತ್ತು ನಡೆಸುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಯೋಜನೆ ಜಾರಿ
ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಈ ಗೃಹ ಲಕ್ಷ್ಮಿ ಯೋಜನೆ ಅನ್ನು ಜಾರಿಗೊಳಿಸಲಾಗಿದೆ. ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ 2021ರ ವಿಧಾನಸಭಾ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೀಡಿದ ಭರವಸೆಗಳಲ್ಲಿ "ಲಖೀರ್ ಭಂಡಾರ್ ಯೋಜನೆ"ಯೂ ಒಂದಾಗಿತ್ತು. ಯೋಜನೆಯ ಪ್ರಕಾರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಫಲಾನುಭವಿಗಳು ತಿಂಗಳಿಗೆ ತಲಾ 1,000 ರೂಪಾಯಿ ಹಾಗೂ ಸಾಮಾನ್ಯ ವರ್ಗದ ಮಹಿಳೆಯರು ಪ್ರತಿ ತಿಂಗಳು 500 ರೂಪಾಯಿಗಳನ್ನು ಸಹಾಯಧನವನ್ನಾಗಿ ಪಡೆದುಕೊಳ್ಳುತ್ತಿದ್ದಾರೆ.

ಎಎಪಿ ಅಧಿಕಾರಕ್ಕೆ ಬಂದರೆ ಮಹಿಳೆಯರ ಖಾತೆಗೆ 1,೦000 ರೂ.
ಗೋವಾದಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರ ರಚನೆಯಾದರೆ ಎಲ್ಲಾ ಮಹಿಳೆಯರಿಗೂ ತಿಂಗಳಿಗೆ ಒಂದು ಸಾವಿರ ರೂಪಾಯಿ ಸಹಾಯಧನವನ್ನು ನೀಡಲಾಗುತ್ತದೆ," ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ, ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದಾರೆ. ಇತ್ತೀಚಿಗೆ ನವೇಲಿಮ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, "ಮಹಿಳೆಯರಿಗೆ ಗೋವಾದಲ್ಲಿ ಗೃಹ ಆಧಾರ್ ಪ್ರಯೋಜನವನ್ನು ತಿಂಗಳಿಗೆ 1500 ರೂ.ನಿಂದ 2500 ರೂ.ಗೆ ಹೆಚ್ಚಿಸಲಾಗುವುದು. 18 ವರ್ಷ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೆ ತಿಂಗಳಿಗೆ 1000 ರೂ. ನೀಡಲಾಗುವುದು," ಎಂದು ಹೇಳಿದ್ದರು.












Click it and Unblock the Notifications