ಪಣಜಿ ಉಪ ಚುನಾವಣೆ : ಪರಿಕ್ಕರ್ ಪುತ್ರನಿಗಿಲ್ಲ ಬಿಜೆಪಿ ಟಿಕೆಟ್
ಪಣಜಿ, ಏಪ್ರಿಲ್ 28 : ಪಣಜಿ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡಿದೆ. ಗೋವಾ ಮುಖ್ಯಮಂತ್ರಿಯಾಗಿದ್ದ ದಿ.ಮನೋಹರ್ ಪರಿಕ್ಕರ್ ಪುತ್ರನಿಗೆ ಟಿಕೆಟ್ ನೀಡಿಲ್ಲ.
ಮನೋಹರ್ ಪರಿಕ್ಕರ್ ನಿಧನದಿಂದ ತೆರವಾದ ಪಣಜಿ ವಿಧಾನಸಭಾ ಕ್ಷೇತ್ರಕ್ಕೆ ಮೇ 19ರಂದು ಉಪ ಚುನಾವಣೆ ನಡೆಯಲಿದೆ. ಬಿಜೆಪಿ ಭಾನುವಾರ ಸಿದ್ಧಾರ್ಥ್ ಕುಂಕಲೇನಕರ್ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.
ದಿ.ಮನೋಹರ್ ಪರಿಕ್ಕರ್ ಪುತ್ರ ಉತ್ಪಾಲ್ ಪರಿಕ್ಕರ್ ಅವರಿಗೆ ಟಿಕೆಟ್ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು. ಸಿದ್ಧಾರ್ಥ್ ಕುಂಕಲೇನಕರ್ ಎರಡು ಬಾರಿ ಪಣಜಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಈಗ ಪುನಃ ಅವರಿಗೆ ಟಿಕೆಟ್ ನೀಡಲಾಗಿದೆ.

ಸಿದ್ಧಾರ್ಥ್ ಕುಂಕಲೇನಕರ್ ಅವರು 2017ರ ಮೇ 10ರಂದು ಮನೋಹರ್ ಪರಿಕ್ಕರ್ ವಿಧಾನಸಭೆಗೆ ಆಯ್ಕೆಯಾಗಲು ಅವಕಾಶ ನೀಡುವುದಕ್ಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದ್ದರಿಂದ ಈಗ ಉಪ ಚುನಾವಣೆಯಲ್ಲಿಯೂ ಅವರಿಗೆ ಟಿಕೆಟ್ ನೀಡಲಾಗಿದೆ.
ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಅವರು ಗೋವಾ ರಾಜಕಾರಣಕ್ಕೆ ವಾಪಸ್ ಬಂದು ಗೋವಾ ಮುಖ್ಯಮಂತ್ರಿಯಾಗಿದ್ದರು. 2018ರ ಮಾರ್ಚ್ 17ರಂದು ಅವರು ವಿಧಿವಶರಾಗಿದ್ದರು.












Click it and Unblock the Notifications