ಗೋವಾ; ಶಾಸಕ ಸ್ಥಾನಕ್ಕೆ ಸಂಸ್ಕೃತಿ ಖಾತೆ ಸಚಿವ ರಾಜೀನಾಮೆ
ಪಣಜಿ, ಜನವರಿ 11; ಗೋವಾದ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಸಂಸ್ಕೃತಿ ಖಾತೆ ಸಚಿವರಾಗಿದ್ದ ಗೋವಿಂದ ಗಾವಡೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಫೆಬ್ರವರಿ 14ರಂದು ಗೋವಾ ವಿಧಾನಸಭೆ ಚುನಾವಣೆ ನಡೆಯಲಿದೆ.
ಪ್ರೀಯೋಲ್ ಕ್ಷೇತ್ರದ ಪಕ್ಷೇತರ ಶಾಸಕರಾಗಿದ್ದ ಗೋವಿಂದ ಗಾವಡೆ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂಪುಟದಲ್ಲಿ ಸಂಸ್ಕೃತಿ ಸಚಿವರಾಗಿದ್ದರು. ಸಂಪುಟದಲ್ಲಿ ಏಕೈಕ ಪಕ್ಷೇತರ ಶಾಸಕ ಗೋವಿಂದ ಗಾವಡೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಗೋವಿಂದ ಗಾವಡೆ ಬಿಜೆಪಿ ಸೇರಲಿದ್ದು, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಿಂದ ಕಣಕ್ಕಿಳಿಯಲಿದ್ದಾರೆ. 2017ರಲ್ಲಿ ಬಿಜೆಪಿ ಸರ್ಕಾರ ರಚನೆಗೊಂಡಾಗ ಬೆಂಬಲ ನೀಡಿದ್ದ ಗೋವಿಂದ ಗಾವಡೆಗೆ ಸಚಿವ ಸ್ಥಾನವನ್ನು ನೀಡಲಾಗಿತ್ತು.

ದಿ. ಮನೋಹರ್ ಪರಿಕ್ಕರ್ ಮುಖ್ಯಮಂತ್ರಿಯಾಗಿದ್ದಾಗಲೂ ಗೋವಿಂದ ಗಾವಡೆ ಸಂಪುಟದಲ್ಲಿದ್ದರು. ಪ್ರಮೋದ್ ಸಾವಂತ್ ಸಂಪುಟ ಪುನಾರಚನೆ ಮಾಡಿದರು ಗೋವಿಂದ ಗಾವಡೆ ಸಂಪುಟದಲ್ಲಿ ಮುಂದುವರೆದಿದ್ದರು.
ಮಂಗಳವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ಗೋವಿಂದ ಗಾವಡೆ, "ಪಕ್ಷ ಸೇರುವಂತೆ ಬಿಜೆಪಿ ನೀಡಿದ ಆಹ್ವಾನವನ್ನು ಗೌರವಿಸುತ್ತೇನೆ. ನಾನು ಅವರ ಜೊತೆ ಕಳೆದ ವರ್ಷಗಳಿಂದ ಇದ್ದೇನೆ ಮತ್ತು ಅವರ ಜೊತೆ ಕೆಲಸ ಮಾಡಿದ್ದೇನೆ" ಎಂದು ಹೇಳಿದರು.
'ಪಕ್ಷೇತರ ಶಾಸಕನಾಗಿ ಅನೇಕ ಕಷ್ಟಗಳನ್ನು ನೋಡಿದ್ದೇನೆ. ರಾಜಕೀಯ ಪಕ್ಷದಲ್ಲಿದ್ದರೆ ಸಂಘಟನೆ ಸದಾ ಜೊತೆಗಿರುತ್ತದೆ" ಎಂದು ಗೋವಿಂದ ಗಾವಡೆ ತಿಳಿಸಿದರು.
"ಬುಧವಾರ ಬಿಜೆಪಿ ಸೇರುತ್ತೇನೆ. ಪಕ್ಷ ಸೇರಲು ನನಗೆ ಆಸಕ್ತಿ ಇದೆ. ನನ್ನ ಕ್ಷೇತ್ರದಲ್ಲಿ ಜನರು ಬಿಜೆಪಿ ಬಿಟ್ಟು ಬೇರೆ ಪಕ್ಷಗಳಿಂದ ಬೆಂಬಲ ನೀಡುವುದಿಲ್ಲ" ಎಂದು ಗೋವಿಂದ ಗಾವಡೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ತಿಂಗಳು ಕಾಂಗ್ರೆಸ್ ತೊರೆದು ಶಾಸಕ ರವಿ ನಾಯಕ್, ಗೋವಾ ಫಾರ್ವರ್ಡ್ ಪಕ್ಷದ ಜಯೇಶ್ ಸಲಗಾಂವ್‌ಕರ್ ಮತ್ತು ಪಕ್ಷೇತರ ಶಾಸಕ ರೋಹನ್ ಖಾವುಂಟೆ ಬಿಜೆಪಿ ಸೇರಿದ್ದರು. ಈಗ ಮತ್ತೊಬ್ಬ ಪಕ್ಷೇತರ ಶಾಸಕ ಗೋವಿಂದ ಗಾವಡೆ ಬಿಜೆಪಿ ಸೇರುತ್ತಿದ್ದಾರೆ.
2019ರ ಜುಲೈನಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂಪುಟ ಪುನಾರಚನೆ ಮಾಡಿದ್ದರು. ಆಗ ನಾಲ್ವರು ಸಚಿವರನ್ನು ಕೈ ಬಿಟ್ಟು, ಹೊಸದಾಗಿ ನಾಲ್ವರಿಗೆ ಸಂಪುಟದಲ್ಲಿ ಅವಕಾಶ ನೀಡಿದ್ದರು.
ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ 10 ಶಾಸಕರ ಪೈಕಿ 3 ಜನರು ಸಂಪುಟ ಸೇರಿದ್ದರು. ಆಗ ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಹುದ್ದೆಗೆ ರಾಜೀನಾಮೆ ನೀಡಿದ್ದ ಮೈಕಲ್ ಲೋಬೊ ಸಹ ಸಂಪುಟ ಸೇರಿದ್ದರು. ಸೋಮವಾರ ಮೈಕಲ್ ಲೋಬೊ ಶಾಸಕ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿ ಸಹ ತೊರೆದಿದ್ದಾರೆ.
ಆದರೆ ಸಂಪುಟ ಪುನಾರಚನೆಗೊಂಡರೂ ಪಕ್ಷೇತರ ಶಾಸಕರಾದ ಗೋವಿಂದ ಗಾವಡೆ ಸಂಪುಟದಲ್ಲಿಯೇ ಉಳಿದಿದ್ದರು. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂಪುಟದಲ್ಲಿ ಉಳಿದ ಏಕೈಕ ಪಕ್ಷೇತರ ಶಾಸಕರು ಎಂಬ ಹೆಗ್ಗಳಿಕೆ ಗೋವಿಂದ ಗಾವಡೆ ಅವರದ್ದಾಗಿತ್ತು.
2017ರ ಚುನಾವಣೆಯಲ್ಲಿ ಬಿಜೆಪಿ 13 ಸ್ಥಾನಗಳಲ್ಲಿ ಮಾತ್ರ ಜಯಗಳಿಸಿತ್ತು. ಆಗ ಮನೋಹರ್ ಪಾರಿಕ್ಕರ್ ಮುಖ್ಯಮಂತ್ರಿ ಆಗುವುದಾದರೆ ಬೆಂಬಲ ನೀಡುವುದಾಗಿ ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‌ಪಿ) ಹೇಳಿತ್ತು. ಕೇಂದ್ರ ರಕ್ಷಣಾ ಸಚಿವರಾಗಿದ್ದ ಮನೋಹರ್ ಪಾರಿಕ್ಕರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯ ರಾಜಕೀಯಕ್ಕೆ ವಾಪಸ್ ಆಗಿ ಮುಖ್ಯಮಂತ್ರಿಯಾಗಿದ್ದರು.
ಹಲವಾರು ಕಾಂಗ್ರೆಸ್ ನಾಯಕರು, ಶಾಸಕರು ಗೋವಾದಲ್ಲಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಆದರೆ ಸೋಮವಾರ ಸಚಿವ ಮತ್ತು ಶಾಸಕ ಸ್ಥಾನಕ್ಕೆ ಮೈಕಲ್ ಲೋಬೊ ಮತ್ತು ಬಿಜೆಪಿ ಶಾಸಕ ಪ್ರವೀಣ್ ಜಾಂತ್ಯೆ ರಾಜೀನಾಮೆ ನೀಡಿದ್ದರು, ಪಕ್ಷ ತೊರೆದಿದ್ದರು.
40 ಸದಸ್ಯ ಬಲದ ಗೋವಾ ವಿಧಾನಸಭೆಗೆ ಫೆಬ್ರವರಿ 14ರಂದು ಚುನಾವಣೆ ನಡೆಯಲಿದೆ. ಮಾರ್ಚ್ 10ರಂದು ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications