ಗೋವಾ ಚುನಾವಣೆ; ಅಂತಿಮವಾಗಿ ಕಣದಲ್ಲಿ 301 ಅಭ್ಯರ್ಥಿಗಳು
ಪಣಜಿ, ಫೆಬ್ರವರಿ 01; ಗೋವಾ ವಿಧಾನಸಭೆ ಚುನಾವಣೆ ಚಿತ್ರಣ ಅಂತಿಮಗೊಂಡಿದೆ. 40 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 14ರಂದು ಚುನಾವಣೆ ನಡೆಯಲಿದ್ದು, ಕಣದಲ್ಲಿ 301 ಅಭ್ಯರ್ಥಿಗಳಿದ್ದಾರೆ.
ವಿಧಾನಸಭೆ ಚುನಾವಣೆಗೆ ನಾಮಪತ್ರಗಳನ್ನು ವಾಪಸ್ ಪಡೆಯಲು ಜನವರಿ 31 ಕೊನೆಯ ದಿನವಾಗಿತ್ತು. ಅಂತಿಮವಾಗಿ 301 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು, 2017ರ ವಿಧಾನಸಭೆ ಚುನಾವಣೆಗಿಂತ 50 ಅಭ್ಯರ್ಥಿಗಳು ಹೆಚ್ಚಾಗಿ ಸ್ಪರ್ಧೆಯಲ್ಲಿ ಉಳಿದಿದ್ದಾರೆ.
ಸಿಯೋಲಿಮ್ ಕ್ಷೇತ್ರದಲ್ಲಿ ಅತಿ ಹೆಚ್ಚು ಎಂದರೆ 13 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಬಿಕೋಲಿಮ್, ಪೊರ್ವರಿಮ್, ಸೆ. ಕ್ರೂಜ್, ಮಾರ್ಗೋವಾ, ಬೆನೌಲಿಮ್ ಕ್ಷೇತ್ರಗಳಲ್ಲಿ ಅತಿ ಕಡಿಮೆ ಎಂದರೆ 5 ಅಭ್ಯರ್ಥಿಗಳಿದ್ದಾರೆ.

2017ರ ಚುನಾವಣೆಯಲ್ಲಿ ರಾಜ್ಯದಲ್ಲಿ 11,11,692 ಮತದಾರರು ಇದ್ದರು. ಈ ಬಾರಿ 11,64,522 ಮತದಾರರು ಇದ್ದಾರೆ. ಫೆಬ್ರವರಿ 14ರಂದು ಮತದಾನ ನಡೆಯಲಿದ್ದು, ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಶಿವಸೇನೆ ಅಭ್ಯರ್ಥಿ ವಾಪಸ್; ಸೋಮವಾರ ನಾಮಪತ್ರ ವಾಪಸ್ ಪಡೆದವರಲ್ಲಿ ಪಣಜಿ ಕ್ಷೇತ್ರ ಶಿವಸೇನೆ ಅಭ್ಯರ್ಥಿ ಶೈಲೇಂದ್ರ ವೆಲಿಂಗ್ಕರ್ ಪ್ರಮುಖರು. ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ, ದಿ. ಮನೋಹರ್ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್‌ಗೆ ಬೆಂಬಲ ಘೋಷಣೆ ಮಾಡಿರುವ ಶಿವಸೇನೆ ತನ್ನ ಅಭ್ಯರ್ಥಿ ವಾಪಸ್ ಪಡೆದಿದೆ.
ಶಿವಸೇನೆ ನಾಯಕ ಸಂಜಯ್ ರಾವತ್ ಟ್ವೀಟ್ ಮೂಲಕ ಈ ಕುರಿತು ಮಾಹಿತಿ ನೀಡಿದ್ದು, "ನಾವು ನಮ್ಮ ಮಾತು ಉಳಿಸಿಕೊಂಡಿದ್ದೇವೆ. ಪಣಜಿ ಕ್ಷೇತ್ರದ ಪಕ್ಷದ ಅಭ್ಯರ್ಥಿ ಶೈಲೇಂದ್ರ ವೆಲಿಂಗ್ಕರ್ ನಾಮಪತ್ರ ವಾಪಸ್ ಪಡೆದಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲ ಶಿವಸೇನೆಯ ಎಲ್ಲಾ ನಾಯಕರು, ಕಾರ್ಯಕರ್ತರು ಚುನಾವಣೆಯಲ್ಲಿ ಉತ್ಪಲ್ ಪರಿಕ್ಕರ್‌ಗೆ ಸಂಪೂರ್ಣ ಬೆಂಬಲ ನೀಡಲಿದ್ದಾರೆ" ಎಂದು ಹೇಳಿದ್ದಾರೆ.
ಹಲವು ಹೊಸ ಪಕ್ಷಗಳು; ಬಿಜೆಪಿ, ಕಾಂಗ್ರೆಸ್, ಎಂಜಿಪಿ, ಜಿಎಫ್‌ಪಿ, ಎಎಪಿ, ಶಿವಸೇನೆ, ಎನ್‌ಸಿಪಿ ಜೊತೆಗೆ ಟಿಎಂಸಿ, ಆರ್‌ಜಿಪಿ, ಜೈ ಮಹಾ ಭಾರತ್ ಪಾರ್ಟಿ, ಜಿಎಸ್‌ಬಿ, ಸಮಾಜವಾದಿ ಬ್ರಿಗೇಡ್ ಸೇರಿದಂತೆ ವಿವಿಧ ಪಕ್ಷಗಳು ಗೋವಾ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ಕೋವಿಡ್ ಪರಿಸ್ಥಿತಿ ನಡುವೆಯೂ ಅಭ್ಯರ್ಥಿಗಳು ಮನೆ-ಮನೆ ಪ್ರಚಾರ ಕೈಗೊಂಡಿದ್ದಾರೆ. ಚುನಾವಣಾ ಆಯೋಗ ಬೈಕ್ ಜಾಥಾ, ರೋಡ್ ಶೋ, ಸೈಕಲ್ ಜಾಥಾ ಮುಂತಾದ ಪ್ರಚಾರಗಳ ಮೇಲಿನ ನಿರ್ಬಂಧವನ್ನು ಫೆಬ್ರವರಿ 14ರ ತನಕ ನಿಷೇಧಿಸಿ ಆದೇಶ ಹೊರಡಿಸಿದೆ.
ಚುನಾವಣಾ ಆಯೋಗ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು 1000 ಜನರನ್ನು ಸೇರಿಸಿ ಅಥವ ಮೈದಾನದ ಶೇ 50ರಷ್ಟು ಆಸನ ಭರ್ತಿ ಮಾಡಿ ಸಮಾವೇಶ ನಡೆಸಲು ಅನುಮತಿ ನೀಡಿದೆ. ಅಲ್ಲದೇ ಮನೆ-ಮನೆ ಪ್ರಚಾರಕ್ಕೆ 20 ಜನರು ತೆರಳಬಹುದು ಎಂದು ಹೇಳಿದೆ.
ಗೋವಾ ರಾಜ್ಯದ ಮುಖ್ಯ ಚುನಾವಣಾ ಆಯುಕ್ತ ಕುನಾಲ್ ಮಾತನಾಡಿ, "ಆಯೋಗ ಸಮಾವೇಶಗಳನ್ನು ಒಳಾಂಗಣ ಮತ್ತು ಹೊರಾಂಗಣದಲ್ಲಿ ನಡೆಸಲು 490 ಸ್ಥಳಗಳನ್ನು ಗುರುತಿಸಿದೆ" ಎಂದು ಹೇಳಿದ್ದಾರೆ.
ರಾಜ್ಯದ ಒಟ್ಟು ಮತದಾರರು 11,64,522 ಆಗಿದೆ. ಇವರಲ್ಲಿ 9590 ವಿಕಲ ಚೇತನರು, 2,997 ಜನರ 80 ವರ್ಷ ಮೇಲ್ಪಟ್ಟವರು, 41 ತೃತೀಯ ಲಿಂಗಿಗಳು ಸೇರಿದ್ದಾರೆ. ಮತದಾನಕ್ಕಾಗಿ ಒಟ್ಟು 676 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗುತ್ತದೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಇದುವರೆಗೂ ರಾಜ್ಯದಲ್ಲಿ 6 ಕೋಟಿ ಮೌಲ್ಯದ ಹಣ, 2 ಕೋಟಿ ಮೌಲ್ಯದ ಮದ್ಯ, 1 ಕೋಟಿ ಮೌಲ್ಯದ ಡ್ರಗ್ಸ್, 2 ಐಷಾರಾಮಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.












Click it and Unblock the Notifications