Breaking News: ಗೋವಾದ 40 ಕ್ಷೇತ್ರಗಳಿಗೆ ಒಂದು ಹಂತದಲ್ಲಿ ಚುನಾವಣೆ
ಪಣಜಿ, ಜನವರಿ 8: ಭಾರತದ ಪುಟ್ಟ ರಾಜ್ಯ ಎನಿಸಿರುವ ಗೋವಾದಲ್ಲಿ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟಿಸಲಾಗಿದೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುಶೀಲ್ ಚಂದ್ರ, ಪಂಚರಾಜ್ಯಗಳ ಚುನಾವಣೆ, ನಾಮಪತ್ರ ಸಲ್ಲಿಕೆ, ನಾಮಪತ್ರ ಮರುಪರಿಶೀಲನೆ, ನಾಮಪತ್ರ ವಾಪಸ್, ಮತದಾನ ಹಾಗೂ ಫಲಿತಾಂಶದ ದಿನಾಂಕವನ್ನು ಪ್ರಕಟಿಸಿದ್ದಾರೆ.
ಪಂಚರಾಜ್ಯಗಳ ಪೈಕಿ ಗೋವಾದ 40 ವಿಧಾನಸಭೆ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಸಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುಶೀಲ್ ಚಂದ್ರ ತಿಳಿಸಿದ್ದಾರೆ. ಒಟ್ಟು ಐದು ರಾಜ್ಯಗಳಿಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 10ರಂದು ಅಂತಿಮ ಫಲಿತಾಂಶ ಹೊರಬೀಳಲಿದೆ.
"ಕೊರೊನಾವೈರಸ್ ಹೊಸ ರೂಪಾಂತರಿ ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವುದರ ಮಧ್ಯೆ ಭಾರತೀಯ ಚುನಾವಣಾ ಆಯೋಗವು ಕೇಂದ್ರ ಆರೋಗ್ಯ ಕಾರ್ಯದರ್ಶಿ ಮತ್ತು ಗೃಹ ಕಾರ್ಯದರ್ಶಿ, ತಜ್ಞರು ಮತ್ತು ರಾಜ್ಯಗಳ ಆರೋಗ್ಯ ಕಾರ್ಯದರ್ಶಿಗಳ ಜೊತೆ ಸಭೆಗಳನ್ನು ನಡೆಸಿತು. ಈ ವೇಳೆ ರಾಜ್ಯಗಳಲ್ಲಿ ವಾಸ್ತವ ಪರಿಸ್ಥಿತಿ ತಿಳಿದುಕೊಂಡ ನಂತರ ಸುರಕ್ಷತಾ ಮಾನದಂಡಗಳೊಂದಿಗೆ ಚುನಾವಣೆ ಘೋಷಿಸಲು ನಿರ್ಧರಿಸಿತು," ಎಂದಿದ್ದಾರೆ.

ಗೋವಾದ 40 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ:
ಪಂಚರಾಜ್ಯಗಳಿಗೆ ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಗೋವಾದ 40 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಜನವರಿ 21ರಂದು ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುವುದು. ಜನವರಿ 28ರಂದು ಎಲ್ಲ ಪಕ್ಷಗಳ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಲಿದೆ. ಜನವರಿ 29ರಂದು ನಾಮಪತ್ರ ಮರುಪರಿಶೀಲನೆ ನಡೆಯಲಿದ್ದು, ಜನವರಿ 31 ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನವಾಗಿರುತ್ತದೆ. ಫೆಬ್ರವರಿ 14ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಪಂಚರಾಜ್ಯಗಳ ಚುನಾವಣಾ ಭವಿಷ್ಯ ಹೊರ ಬೀಳಲಿದೆ.












Click it and Unblock the Notifications