ಕೇಜ್ರಿವಾಲ್ ಕೊರೊನಾ ಸೂಪರ್‌ಸ್ಪ್ರೆಡರ್ ಎಂದ ಕಪಿಲ್ ಮಿಶ್ರಾ
ನವದೆಹಲಿ, ಜನವರಿ 04: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೊರೊನಾ ಸೂಪರ್ ಸ್ಪ್ರೆಡರ್ ಎಂದು ಬಿಜೆಪಿ ನಾಯಕ ಕಪಿನ್ ಮಿಶ್ರಾ ವ್ಯಂಗ್ಯವಾಡಿದ್ದಾರೆ.
ಅರವಿಂದ್ ಕೇಜ್ರಿವಾಲ್‌ಗೆ ಕೊರೊನಾ ಸೋಂಕು ತಗುಲಿದ್ದು, ಸೌಮ್ಯ ಲಕ್ಷಣಗಳಿವೆ ಎಂದು ಹೇಳಿಕೊಂಡಿದ್ದಾರೆ, ಈ ವಿಚಾರವಾಗಿ ಮಾತನಾಡಿರುವ ಕಪಿಲ್ ಮಿಶ್ರಾ ಕೇಜ್ರಿವಾಲ್ ಸೂಪರ್ ಸ್ಪ್ರೆಡರ್ ಎಂದು ಹೇಳಿದ್ದಾರೆ.
ಕಪಿಲ್ ಮಿಶ್ರಾ ಆಮ್ ಆದ್ಮಿ ಪಕ್ಷದ ಮಾಜಿ ಸದಸ್ಯರಾಗಿದ್ದಾರೆ, ಪಂಚರಾಜ್ಯ ಚುನಾವಣೆ ಚುನಾವಣೆ ಸನ್ನಿಹಿತವಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಮೆರವಣಿಗೆಗಳನ್ನು ನಡೆಸಿ ಕೊರೊನಾ ಸೋಂಕನ್ನು ಹರಡುತ್ತಿದ್ದಾರೆ ಎಂದು ದೂರಿದರು.

ಪಟಿಯಾಲಾ, ಲಕ್ನೋ, ಗೋವಾದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿದ್ದು, ಇದಕ್ಕೆಲ್ಲಾ ಹೊಣೆ ಯಾರು? ಎಂದು ಪ್ರಶ್ನಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಸೋಮವಾರ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಚುನಾವಣಾ ಮೆರವಣಿಗೆಯನ್ನು ಹಮ್ಮಿಕೊಂಡಿದ್ದರು.
ಚಂಡೀಗಢದ ಮುನ್ಸಿಪಲ್ ಕಾರ್ಪೊರೇಷನ್‌ನ 35 ವಾರ್ಡ್‌ಗಳ ಪೈಕಿ 14ರಲ್ಲಿ ಆಪ್ ಗೆಲುವು ಸಾಧಿಸಿತ್ತು. ದೆಹಲಿಯಲ್ಲಿ ಕೋವಿಡ್‌ನಿಂದ ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ ಎರಡು ದಿನಗಳ ಬಳಿಕ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಕೊರೊನಾ ಸೋಂಕು ದೃಢಪಟ್ಟಿದೆ. ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಮಧ್ಯೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.
ದೆಹಲಿಯಲ್ಲಿ ಕೋವಿಡ್ 19 ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆಯಾದರೂ ಯಾರೂ ಭಯಪಡುವ ಅಗತ್ಯವಿಲ್ಲ. ಕೋವಿಡ್ ಪ್ರಕರಣಗಳೆಲ್ಲ ಸೌಮ್ಯ ಮತ್ತು ಗಂಭೀರ ಲಕ್ಷಣರಹಿತವಾಗಿವೆ ಎಂದು ಕೇಜ್ರಿವಾಲ್ ಸ್ಪಷ್ಟಪಡಿಸಿದ್ದರು.
ಇದಾದ ಎರಡು ದಿನಗಳ ಬಳಿಕ ಅಂದ್ರೆ ಇಂದು ಮುಂಜಾನೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಸೋಂಕು ತಗುಲಿರುವುದರ ಬಗ್ಗೆ ಟ್ವೀಟ್ ಮಾಡಿದ್ದಾರೆ. ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆ ನಾನು ಮನೆಯಲ್ಲಿ ಪರೀಕ್ಷೆ ಮಾಡಿಕೊಂಡಿದ್ದೇನೆ. ಪರೀಕ್ಷೆಯಲ್ಲಿ ಕೊರೊನಾ ಸೋಂಕು ಹರಡಿರುವುದು ದೃಢಪಟ್ಟಿದೆ ಎಂದು ಟ್ವೀಟ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನು ಕಳೆದ ಹಲವು ದಿನಗಳಿಂದ ನನ್ನ ಸಂಪರ್ಕಿತರು ಮೊದಲು ಕ್ವಾರೆಂಟೈನ್ಗೊಳಪಟ್ಟು ಸ್ವಯಂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಹೆಚ್ಚುತ್ತಿರುವ ಪ್ರಕರಣಗಳ ಹಿನ್ನೆಲೆ ಕಳೆದ ವಾರ ರಾಷ್ಟ್ರ ರಾಜಧಾನಿಯಲ್ಲಿ ಹಳದಿ ಎಚ್ಚರಿಕೆ ನೀಡಲಾಗಿತ್ತು. ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಮಂಗಳವಾರ ಹೊರಡಿಸಿದ ಆದೇಶಗಳ ಪ್ರಕಾರ, ಶಾಲೆಗಳು, ಕಾಲೇಜುಗಳು, ಚಿತ್ರಮಂದಿರಗಳು ಮತ್ತು ಜಿಮ್‌ಗಳು ಮುಚ್ಚಲ್ಪಡಲಿವೆ. ಮಾರುಕಟ್ಟೆಗಳು ಮತ್ತು ಶಾಪಿಂಗ್ ಮಾಲ್‌ಗಳು ಬೆಸ-ಸಮ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತವೆ.
ಇದಲ್ಲದೇ, ಓಮಿಕ್ರಾನ್ ರೂಪಾಂತರದ ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಲೇ ಇರುವುದರಿಂದ ರಾಜಧಾನಿಯಲ್ಲಿ ರಾತ್ರಿ ಕರ್ಫ್ಯೂ ಅನ್ನು ರಾತ್ರಿ 10 ರಿಂದ ಬೆಳಗ್ಗೆ 5 ರವರೆಗೆ ವಿಸ್ತರಿಸಲಾಗಿದೆ.












Click it and Unblock the Notifications