ಎಲ್‌ಎಸಿಯಲ್ಲಿ ಏಕಪಕ್ಷೀಯ ಬದಲಾವಣೆಯನ್ನು ನಾವು ಒಪ್ಪುವುದಿಲ್ಲ: ಜೈಶಂಕರ್
ನವದೆಹಲಿ, ಫೆಬ್ರವರಿ 24: ಎಲ್‌ಎಸಿಯಲ್ಲಿ ಯಾವುದೇ ರೀತಿಯ ಏಕಪಕ್ಷೀಯ ಬದಲಾವಣೆಯನ್ನು ನಾವು ಒಪ್ಪುವುದಿಲ್ಲ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಇಂಡೋ - ಪೆಸಿಫಿಕ್ ಭಾಗದಲ್ಲಿ ಸ್ವಾತಂತ್ರ್ಯ ಮತ್ತು ಭದ್ರತೆಯನ್ನು ಬಲಪಡಿಸುವ ಗುರಿಯನ್ನು ಕ್ವಾಡ್ ರಾಷ್ಟ್ರಗಳು ಹೊಂದಿವೆ. ಈ ಸಮಾನ ಮನಸ್ಸಿನ ರಾಷ್ಟ್ರಗಳು (ಭಾರತ, ಆಸ್ಟ್ರೇಲಿಯಾ, ಯುನೈಟೆಡ್ ಸ್ಟೇಟ್ಸ್ ಮತ್ತು ಜಪಾನ್) ಸುರಕ್ಷಿತ, ಸ್ವತಂತ್ರ ಇಂಡೋಪೆಸಿಫಿಕ್ ಭಾಗಕ್ಕಾಗಿ ಪ್ರಯತ್ನಿಸುತ್ತವೆ ಎಂದು ಜೈಶಂಕರ್ ಹೇಳಿದ್ದಾರೆ.
ಚೀನಾ ಯಾವಾಗಲೂ ಕ್ವಾಡ್ ಒಕ್ಕೂಟವನ್ನು ಅನುಮಾನ ದೃಷ್ಟಿಯಿಂದ ನೋಡುತ್ತದೆ ಮತ್ತು ಕ್ವಾಡ್ ಸದಸ್ಯರನ್ನು ಚೀನಾ ವಿರೋಧಿಸುತ್ತದೆ ಮತ್ತು ಇಂಡೋ-ಪೆಸಿಫಿಕ್ ಪರಿಸರಕ್ಕೆ ಕ್ವಾಡ್ ಹಾನಿ ಮಾಡುತ್ತದೆ ಎಂದು ಆರೋಪಿಸುತ್ತಿದೆ ಎಂದು ಜೈಶಂಕರ್ ಹೇಳಿದರು.

ಕ್ವಾಡ್‌ನ ಮಹತ್ವದ ಕುರಿತು ಮಾತನಾಡಿದ ಡಾ.ಜೈಶಂಕರ್, 'ಕ್ವಾಡ್‌ನ ಮೂಲವು 2004ರ ವರ್ಷದಷ್ಟು ಹಳೆಯದು. ಸುನಾಮಿ ಸಂಭವಿಸಿದ ನಂತರ ಕ್ವಾಡ್ ದೇಶಗಳು ಸಂಘಟಿತವಾಗಿ ಪರಸ್ಪರ ಸಹಕಾರ ನೀಡಿದವು. ಪ್ರಾದೇಶಿಕ ಮತ್ತು ಜಾಗತಿಕ ಸವಾಲುಗಳಲ್ಲಿ ಕ್ವಾಡ್ ಸಹಾಯ ಮಾಡುತ್ತದೆ' ಎಂದಿದ್ದಾರೆ.
ಚೀನಾ ಮತ್ತು ಭಾರತದ ನಡುವಿನ ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ) ವಿಚಾರದಲ್ಲಿ ಯಥಾಸ್ಥಿತಿ ಮುಂದುವರೆಯಲಿದ್ದು, ಏಕಪಕ್ಷೀಯವಾಗಿ ಯಾವುದೇ ಬದಲಾವಣೆ ಮಾಡಲು ಭಾರತ ಒಪ್ಪುವುದಿಲ್ಲ ಎಂದು ವಿದೇಶಾಂಗ ಸಚಿವ ಡಾ. ಎಸ್.ಜೈಶಂಕರ್ ಸ್ಪಷ್ಟನೆ ನೀಡಿದ್ದಾರೆ
ಪ್ಯಾರಿಸ್‌ನಲ್ಲಿರುವ ಫ್ರೆಂಚ್ ಇನ್‌ಸ್ಟಿಟ್ಯೂಟ್ ಆಫ್ ಇಂಟರ್‌ನ್ಯಾಶನಲ್ ರಿಲೇಶನ್ಸ್ (ಐಎಫ್‌ಆರ್‌ಐ) ಉದ್ದೇಶಿಸಿ ಮಾತನಾಡಿದ ಡಾ.ಎಸ್ ಜೈಶಂಕರ್ ನಾವು ಇದೇ ವಿಚಾರವಾಗಿ ಕಮಾಂಡರ್ಗಳಿಂದ 13 ಸುತ್ತಿನ ಮಾತುಕತೆ ನಡೆಸಿದ್ದೇವೆ. ಚೀನಾ ಮತ್ತು ಭಾರತ ನಡುವಿನ ಗಡಿ ವಿಚಾರದಲ್ಲಿ ಕೆಲವೊಂದು ಘರ್ಷಣೆ ಉಂಟುಮಾಡುವ ಸಮಸ್ಯೆಗಳನ್ನು ಪರಿಹರಿಸಬೇಕಿದೆ ಎಂದು ಜೈಶಂಕರ್ ಅಭಿಪ್ರಾಯಪಟ್ಟರು.
ಒಂದು ದೊಡ್ಡ ರಾಷ್ಟ್ರದ ಸೇನೆ ಮತ್ತು ಸರಕಾರವು ಲಿಖಿತ ಒಪ್ಪಂದಕ್ಕೆ ಕಿಮ್ಮತ್ತು ಕೊಡದೆಯೇ ತನ್ನಷ್ಟಕ್ಕೆ ತಾನು ಏಕಪಕ್ಷೀಯ ಕ್ರಮಗಳನ್ನು ಮುಂದುವರಿಸಿದರೆ ಎಲ್‌ಎಸಿಯಲ್ಲಿ ಪ್ರಸ್ತುತ ಇರುವಂಥ ಬಿಕ್ಕಟ್ಟು ಮುಂದುವರಿಯುತ್ತಲೇ ಇರಲಿದೆ. ಚೀನಾದ ಈ ನಡೆ ಆಕ್ಷೇಪಾರ್ಹ. ಅಂತಾರಾಷ್ಟ್ರೀಯ ಸಮುದಾಯಕ್ಕೆ ಕೂಡ ಚೀನಾದ ಈ ಕುತಂತ್ರವು ಆತಂಕಕಾರಿ,'' ಎಂದು ಜೈಶಂಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಲ್‌ಎಸಿಯಲ್ಲಿ ಚೀನಾದ ಅತಿಕ್ರಮಣ ನೀತಿ ಹಾಗೂ ಸಂಧಾನ ಒಪ್ಪಂದಗಳ ಉಲ್ಲಂಘನೆ ವಿರುದ್ಧ ಅಮೆರಿಕ ಕೂಡ ಕಿಡಿಕಾರಿದೆ. ಅಮೆರಿಕದ ಇಂಡೋ-ಪೆಸಿಫಿಕ್ ಕಾರ್ಯತಂತ್ರದ ವರದಿಯನ್ನು ಶ್ವೇತಭವನವು ಬಿಡುಗಡೆ ಮಾಡಿದ್ದು, ಭಾರತಕ್ಕೆ ಗಡಿಯಲ್ಲಿ ಎದುರಾಗಿರುವ ಪ್ರಮುಖ ಸವಾಲುಗಳಿಗೆ ಚೀನಾವೇ ಕಾರಣ ಎಂದು ಆರೋಪಿಸಿದೆ.
ದಕ್ಷಿಣ ಏಷ್ಯಾ ಪ್ರಾಂತ್ಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಅಮೆರಿಕ ಸರಕಾರ ಬಯಸುತ್ತದೆ. ಭಾರತವು ಕೂಡ ಸಮಾನ ಮನಸ್ಕ ಮಿತ್ರರಾಷ್ಟ್ರವಾಗಿದೆ. ಕ್ವಾಡ್‌ನ ಚಾಲನಾ ಶಕ್ತಿ ಕೂಡ ಹೌದು. ಆರೋಗ್ಯ , ಬಾಹ್ಯಾಕಾಶ, ಸೈಬರ್ ಕ್ಷೇತ್ರಗಳಲ್ಲಿ ಭಾರತದೊಂದಿಗೆ ಜತೆಯಾಗಿ ಕೆಲಸ ಮಾಡಲು ಅಮೆರಿಕ ಮುಂದಾಗಿದೆ.
ಆದರೆ, ನಮ್ಮದೇ ರೀತಿಯಲ್ಲಿ ಪ್ರಜಾಪ್ರಭುತ್ವದ ಆಡಳಿತ ಹೊಂದಿರುವ ಭಾರತಕ್ಕೆ ನೆರೆಯ ಚೀನಾದಿಂದ ಹಲವು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ ಎಂದು ಚೀನಾ ಪ್ರಧಾನಿ ಕ್ಸಿ ಜಿನ್‌ಪಿಂಗ್ ಆಡಳಿತದ ವಿರುದ್ಧ ಅಸಮಾಧಾನ ಹೊರಹಾಕಲಾಗಿದೆ.












Click it and Unblock the Notifications