ಇದುವರೆಗೆ ಸಂಸತ್ತಿಗೆ ಆರಿಸಿಬಂದ ಮಹಿಳೆಯರು ಇವರೇ
ನವದೆಹಲಿ, ಮಾರ್ಚ್ 11: ಹದಿನಾರನೆಯ ಲೋಕಸಭೆಗೆ ಇನ್ನೇನು ತಿಂಗಳಾವಧಿಯಲ್ಲಿ ನೂತನ ಸದಸ್ಯರನ್ನು ಆರಿಸಿ ಕಳುಹಿಸುವ ಜವಾಬ್ದಾರಿ ಮತದಾರರ ಮೇಲಿದೆ. ಅದಕ್ಕೂ ಮುನ್ನ ಸಮರ್ಥ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸುವ ಹೊಣೆಗಾರಿಕೆ ರಾಜಕೀಯ ಪಕ್ಷಗಳ ಮೇಲಿದೆ.
ಈ ಮಧ್ಯೆ, ಇದುವರೆಗೂ 15 ಲೋಕಸಭಾ ಚುನಾವಣೆಗಳನ್ನು ಕಂಡಿರುವ ನಾವು ಇದುವರೆಗೂ ಎಷ್ಟು ಮಹಿಳೆಯರನ್ನು ಕೆಳಮನೆಗೆ ಆರಿಸಿ ಕಳುಹಿಸಿದ್ದೇವೆ ಎಂಬ ಇತಿಹಾಸವನ್ನು ಕೆದಕಿ ನೋಡಿದಾಗ, ಭೂತದಗಾಜಿನಲ್ಲಿ ನೋಡಿದರೆ ಆಳದಲ್ಲೆಲ್ಲೋ ಮಹಿಳೆಯರ ಕ್ಷೀಣದನಿ ಕೇಳಿಬರುತ್ತದೆ. ಅಂದರೆ ರಾಜಕೀಯ ಪಕ್ಷಗಳು ಮಹಿಳೆಯರಿಗೆ ನೀಡಿರುವ ಪ್ರಾಶಸ್ತ್ಯ ಇದರಿಂದ ಸುಸ್ಪಷ್ಟವಾಗುತ್ತದೆ.
ಮಹಿಳಾ ಮೀಸಲಾತಿ ಮಸೂದೆ (Women's reservation Bill) ಎಂಬ ಕ್ಯಾರೆಟ್ ಅನ್ನು ಹಿಡಿದು (ಎಲ್ಲ) ರಾಜಕೀಯ ಪಕ್ಷಗಳು ಕಳೆದ 18 ವರ್ಷದಿಂದ ಅಣಕವಾಡುತ್ತಿವೆಯೋ ಹೊರತು ಯಾವೊಂದೂ ಪಕ್ಷವು ಮಹಿಳೆಯರಿಗೆ ಅರ್ಹವಾಗಿರುವ ಸ್ಥಾನಮಾನ ನೀಡಲು ಮುಂದಾಗಿಲ್ಲ.
ಸಂವಿಧಾನಕ್ಕೆ 108ನೇ ತಿದ್ದುಪಡಿ ತಂದು ಲೋಕಸಭೆ ಮತ್ತು ಎಲ್ಲ ರಾಜ್ಯಗಳ ಶಾಸನಸಭೆಗಳಿಗೆ ಮಹಿಳೆಯರನ್ನು ಶೇ. 33ರಷ್ಟು ಆಯ್ಕೆ ಮಾಡುವುದು ಕಡ್ಡಾಯಗೊಳಿಸಬೇಕಾದ ಮಹತ್ತರ ಹೊಣೆಗಾರಿಕೆ ಮುಂದಿನ ಸರಕಾರದ ಮೇಲಿದೆ.

ಪಾಕ್, ಅಫ್ಘಾನ್ ಸಂಸತ್ಗತಿನಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚು
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ಭಾರತದಲ್ಲಿ ಮಹಿಳೆಯರ ಪ್ರಾತಿನಿಧ್ಯ ಸಾಂಕೇತಿಕವಾಗಿದೆಯಷ್ಟೇ. ಅದೇ ನೆರೆಯ ಪಾಕಿಸ್ತಾನ ಮತ್ತು ಅಫಘಾನಿಸ್ತಾನದ ಸಂಸತ್ತುಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಗಣನೀಯವಾಗಿ ಮುಂದಿದೆ.

ಮೊದಲ ಲೋಕಸಭೆಯಲ್ಲಿ 24 ಸಂಸದೆಯರು
ಭಾರತದ ಮೊದಲ ಲೋಕಸಭೆಯಲ್ಲಿ ಒಟ್ಟು 543 ಸದಸ್ಯರ ಪೈಕಿ ಸಂಸದೆಯರು 24 ಮಂದಿ ಇದ್ದರು. ಮೊದಲ ಸಂಸತ್ತಿಗೆ ಆಯ್ಕೆಯಾಗಿದ್ದ ಗ್ವಾಲಿಯಾರಿನ ರಾಜಮಾತೆ ವಿಜಯ ರಾಜೆ ಸಿಂಧ್ಯಾ (8 ಬಾರಿ ಸಂಸದೆಯಾಗಿದ್ದರು. ಇವರ ಇಡೀ ಕುಟುಂಬ ರಾಜಖೀಯಕ್ಕೆ ಅಂಕಿತವಾಗಿದೆ), ಸುಚೇತಾ ಕೃಪಲಾನಿ, ಅಮೃತಾ ಕೌರ್, ಮಣಿಬೆನ್ ಪಟೇಲ್ ಮುಂತಾವದರು ಖ್ಯಾತನಾಮರಾಗಿ ಸುದೀರ್ಘ ಕಾಲ ಚಾಲ್ತಿಯಲ್ಲಿದ್ದವರು.

15ನೇ ಸಂಸತ್ತಿನ ಅಂತ್ಯಕ್ಕೆ ಶೇ. 11ರಷ್ಟು ಮಹಿಳೆಯರು
ಆದರೆ ಲಖ್ನೋದ ಗಂಗಾ ದೇವಿ, ಪೂನಾದ ಇಂದಿರಾ ಅನಂತ್, ನಾಗ್ಪುರದ ಅನಸೂಯಬಾಯಿ ಪುರುಷೋತ್ತಮ್ ಸೇರಿದಂತೆ ಅನೇಕರು ಹೆಚ್ಚು ಕಾಲ ಚಾಲ್ತಿಗೆ ಬರಲಿಲ್ಲ. 1952ರಲ್ಲಿ ಮೊದಲ ಸಂಸತ್ತಿಗೆ ಆಯ್ಕೆಯಾಗಿದ್ದ ಈ ಮಹಿಳಾಮಣಿಗಳು ಶೇ. 5ರಷ್ಟಿದ್ದರು. ಆದರೆ ಈಗ 15ನೇ ಸಂಸತ್ತಿನ ಅಂತ್ಯಕ್ಕೆ ಅವರ ಸಂಖ್ಯೆ ಶೇ. 11ಕ್ಕೆ ಬಂದು ನಿಂತಿದೆ. ಆದರೆ ಇಂದು ಮಹಿಳೆಯರು 500 ದಶಲಕ್ಷಕ್ಕಿಂತ ಹೆಚ್ಚು ಮಂದಿಯಿದ್ದಾರೆ. ಮಹಿಳೆಯರು ಈ ಪಾಟಿ ಇದ್ದರೂ 'ಶೇ. 33 ರಷ್ಟು ಕಡ್ಡಾಯ' ಎಂಬುದು ಮರೀಚಿಕೆಯಾಗಿಯೇ ಇದೆ.

BJP ಯಿಂದ 13, Congress ಪಕ್ಷದಿಂದ 25 ಮಹಿಳೆಯರು
ಪ್ರಸ್ತುತ ಲೋಕಸಭೆಯಲ್ಲಿ BJP ವತಿಯಿಂದ 13 ಮಹಿಳೆಯರು ಮತ್ತು Congress ಪಕ್ಷದಿಂದ 25 ಮಂದಿ ಮಹಿಳಾ ಸಂಸದೆಯರಿದ್ದಾರೆ. ಈ ಎರಡೂ ಪಕ್ಷಗಳು ಶೇ. 33ರಷ್ಟು ಮಹಿಳಾ ಮೀಸಲಾತಿಗೆ ಓಕೆ ಅನ್ನುತ್ತಿವೆಯಾದರೂ ಇತರೆ ಪಕ್ಷಗಳು ಇವುಗಳ ಕಾಲೆಳೆಯುತ್ತಿವೆ. RJD, SP, JD(U) ಮತ್ತು BSP ಮಸೂದೆಯನ್ನು ತೀವ್ರವಾಗಿ ವಿರೋಧಿಸುತ್ತಿವೆ. (ಮೂಲ:thefivefortyfive.com)

ಮಹಿಳೆಯರ ಸಂಖ್ಯೆ 63 ರಿಂದ 179ಕ್ಕೆ ಜಿಗಿಯುತ್ತದಾ?
ಇಷ್ಟಕ್ಕೂ ಪುರುಷರು ಸಂಸತ್ತನ್ನು ಏಕೆ ತಮ್ಮ ಕಪಿಮುಷ್ಠಿಯಲ್ಲೇ ಹಿಡಿದಿಟ್ಟುಕೊಂಡಿದ್ದಾರೆ? ಮಹಿಳೆಯರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸಂಸತ್ತಿಗೆ ಆರಿಸಿ ಬರತೊಡಗಿದರೆ ತಮ್ಮ ಹಿಡಿತ ಕೈತಪ್ಪುತ್ತದೆ ಎಂಬ ಆತಂಕ/ ಭಯವಾ ಕಾಡುತ್ತಿದೆಯಾ? ಅದೊಮ್ಮೆ ವಿಧೇಯಕಕ್ಕೆ ಅಂಕಿತ ಬಿದ್ದರೆ ಸಂಸತ್ತಿನಲ್ಲಿ ಈಗಿರುವ ಮಹಿಳೆಯರ ಸಂಖ್ಯೆ 63 ರಿಂದ 179ಕ್ಕೆ ಜಿಗಿಯುತ್ತದೆ. ಅಲ್ಲಿಗೆ ಅಷ್ಟರಮಟ್ಟಿಗೆ ಪುರುಷರ ಹಿಡಿತ ಸಡಿಲವಾದಂತೆ. ಮುಂದೆ ಇದು ಎಲ್ಲಿಗೆ ಹೋಗಿ ಮುಟ್ಟುತ್ತದೋ ಎಂಬ ಆತಂಕವೂ ಖಂಡಿತ ಪುರುಷಪುಂಗವರಲ್ಲಿ ಮನೆ ಮಾಡಿದೆ. ಹಾಗಾಗಿಯೇ ಮಹಿಳೆಯರನ್ನು ಮನೆಗಳಲ್ಲಿ ಕೂಡಿಹಾಕಿದ್ದಾರೆ ಎಂದತರೆ ತಪ್ಪೇನೂ ಇಲ್ಲ.












Click it and Unblock the Notifications