ಅಮಿತ್ ಶಾ ಬಿಜೆಪಿಯ ಮುಂದಿನ ಸಾರಥಿಯಾ?
ನವದೆಹಲಿ, ಮೇ 27: ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿಯಾಗಿದೆ. ಅವರ ಜತೆಗೇ ಬಿಜೆಪಿಯ ಹಾಲಿ ರಾಜ್ಯಾಧ್ಯಕ್ಷ ರಾಜನಾಥ್ ಸಿಂಗ್ ಅವರು ಗೃಹ ಸಚಿವರಾಗಿ ನೇಮಕಗೊಂಡಿದ್ದಾರೆ. ಈ ಮಧ್ಯೆ, ಅಮಿತ್ ಶಾ ಅವರು ಪಕ್ಷದಲ್ಲಿಯೇ ಆಗಲಿ ಅಥವಾ ಸರಕಾರದಲ್ಲೇ ಆಗಲಿ ಯಾವುದೇ ಹುದ್ದೆಯನ್ನು ಅಲಂಕರಿಸಿಲ್ಲ ಎಂಬುದು ಗಮನಾರ್ಹ.
ಇದು ಮೇಲ್ಮೈ ಬೆಳವಣಿಗೆಗಳು. ಆದರೆ ಅಭೂತಪೂರ್ವ ಗೆಲುವು ಸಾಧಿಸಿದ ಪಕ್ಷ ಮತ್ತು ಆ ಗೆಲುವಿಗೆ ಕಾರಣೀಭೂತರಾದ ಅಮಿತ್ ಶಾ ಅವರನ್ನು ಗುರಿಯಾಗಿಸಿಕೊಂಡು ಮುಂದೆ ಸಾಕಷ್ಟು ಬೆಳವಣಿಗೆಗಳು ಕಾಣಬರಲಿವೆ ಎಂಬುದು ಸ್ಪಷ್ಟವಾಗುತ್ತಿದೆ.
ಉತ್ತರಪ್ರದೇಶದಲ್ಲಿ ಏಕಾಂಗಿಯಾಗಿ ಪಕ್ಷವನ್ನು ದಡ ಸೇರಿಸಿದ ಅಮಿತ್ ಶಾ, ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಗೆದ್ದಿರುವ 282 ಸೀಟುಗಳ ಪೈಕಿ, ಮೋದಿ ಸುನಾಮಿಯನ್ನು ಸಮರ್ಥವಾಗಿ ಬಳಸಿಕೊಂಡು ನೂರಕ್ಕೂ ಹೆಚ್ಚು ಸೀಟುಗಳನ್ನು ತಮ್ಮ ಸಾಮರ್ಥ್ಯದಿಂದಲೇ ಬಿಜೆಪಿ ಮಡಿಲಿಗೆ ಹಾಕುವಲ್ಲಿ ಅಮಿತ್ ಯಶಸ್ವಿಯಾಗಿದ್ದಾರೆ.

ಈ ಬೆಳವಣಿಗೆಗಳ ಸಮ್ಮುಖದಲ್ಲಿ ಅಮಿತ್ ಶಾ ಮುಂದಿನ ಭವಿಷ್ಯ ಏನು? ಎಂಬುದು ಕುತೂಹಲಕಾರಿಯಾಗಿದೆ. ಗುಜರಾತಿನಲ್ಲಿ ಆನಂದಿಬೆನ್ ಪಟೇಲ್ ಅವರು ಕಳೆದ ವಾರ ಮುಖ್ಯಮಂತ್ರಿಯಾಗುವ ಮುನ್ನ ಅಮಿತ್ ಶಾ ಮುಖ್ಯಮಂತ್ರಿಯಾಗುತ್ತಾರೆ ಎಂಬುದು ಚರ್ಚೆಗೆ ಬಂದಿತ್ತು.
ಒಬ್ಬ ವ್ಯಕ್ತಿಗೆ ಒಂದು ಹುದ್ದೆ ಎಂಬ ಲೆಕ್ಕಾಚಾರ ಬಂದಾಗ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಪಕ್ಷದ ರಾಜ್ಯಾಧ್ಯಕ್ಷ ತೊರೆಯಬೇಕಾಗುತ್ತದೆ. ಆದರೆ ಅಲ್ಲಾಗಲೇ ಜೆಪಿ ನಡ್ಡಾ ಹೆಸರು ಅಡ್ಡಾಡುತ್ತಿದೆ. ಆದಾಗ್ಯೂ ಅಮಿತ್ ಶಾ ಅವರಲ್ಲಿರುವ ಸಂಘಟನಾ ಶಕ್ತಿ-ಸಾಮರ್ಥ್ಯಗಳನ್ನು ಎಣಿಕೆ ಮಾಡಿದಾಗ ಅಮಿತ್ ಶಾ ಬಿಜೆಪಿಯ ಮುಂದಿನ ಸಾರಥಿಯಾಗುವ ಸಾಧ್ಯತೆಯೇ ಹೆಚ್ಚಿದೆ.
ಮಹಾರಾಷ್ಟ್ರ, ಹರ್ಯಾಣಾ ಮತ್ತು ಜಾರ್ಖಂಡ್ ರಾಜ್ಯಗಳ ವಿಧಾನಸಭೆ ಚುನಾವಣೆ ಸನಿಹದಲ್ಲೇ ಇರುವಾಗ ಅಮಿತ್ ಶಾ ಸಾರಥ್ಯ ಪಕ್ಷಕ್ಕೆ ಅಗತ್ಯ ಜೀವತುಂಬಬಲ್ಲದು ಅನ್ನಬಹುದು. ಜತೆಗೆ, ಸರಕಾರ ಮತ್ತು ಪಕ್ಷದ ನಡುವೆ ಉತ್ತಮ ಬಾಂಧವ್ಯ ಇರಬೇಕಾಗುತ್ತದೆ. ಅಮಿತ್ ಶಾ ಮತ್ತು ನರೇಂದ್ರ ಮೋದಿ ಮಧ್ಯೆ ಇರುವ ತಾಳಮೇಳ ನೋಡಿದರೆ ಅಮಿತ್ ಶಾ ಬಿಜೆಪಿಯ ಚುಕ್ಕಾಣಿ ಹಿಡಿಯುವ ದಿನಗಳು ದೂರವಿಲ್ಲ ಅನ್ನಬಹುದು.











Click it and Unblock the Notifications