ರಾಜ್ಯಸಭೆಯ 12 ಸಂಸದರ ಅಮಾನತು ಆದೇಶ ಹಿಂಪಡೆಯುವುದಿಲ್ಲ: ಸಭಾಪತಿ
ನವದೆಹಲಿ, ನವೆಂಬರ್ 30: ರಾಜ್ಯಸಭೆ ವಿರೋಧ ಪಕ್ಷದ 12 ಸಂಸದರ ಅಮಾನತು ಆದೇಶವನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ರಾಜ್ಯಸಭಾ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
''ಸದನದಲ್ಲಿ ದೌರ್ಜನ್ಯ ಎಸಗಿದ ಸದಸ್ಯರ ಮೇಲೆ ಕನಿಕರ ತೋರಲ್ಲ. ಹೀಗಾಗಿ ಸದಸ್ಯರ ಅಮಾನತು ಆದೇಶವನ್ನು ಹಿಂಪಡೆಯಲು ಪ್ರತಿಪಕ್ಷಗಳು ಮಾಡಿರುವ ಮನವಿಯು ಪರಿಗಣಿಸಲು ಯೋಗ್ಯವಾಗಿಲ್ಲ ಎಂದು ನಾನು ಭಾವಿಸುತ್ತೇನೆ," ಎಂದು ನಾಯ್ಡು ಹೇಳಿದರು.
"ರಾಜ್ಯಸಭೆಯಲ್ಲಿ ಸೋಮವಾರ ವಿರೋಧ ಪಕ್ಷದ 12 ಸಂಸದರನ್ನು ಅಮಾನತುಗೊಳಿಸುವ ಸಂದರ್ಭದಲ್ಲಿ ಎಲ್ಲಾ ನಿಯಮಗಳ ಪ್ರಕಾರ ಕಾರ್ಯವಿಧಾನಗಳನ್ನು ಮಾಡಲಾಗಿದೆ," ಎಂದು ಸಭಾಪತಿ ವೆಂಕಯ್ಯ ನಾಯ್ಡು ಹೇಳಿದರು.

12 ಸದಸ್ಯ ಅಮಾನತು ಬಗ್ಗೆ ಸ್ಪಷ್ಟನೆ:
"ರಾಜ್ಯಸಭೆಯಲ್ಲಿ ಸಭಾಪತಿಗಳು ಮತ್ತು ಸದನವು ಈ ಕುರಿತು ಕ್ರಮ ತೆಗೆದುಕೊಳ್ಳಲು ಅಧಿಕಾರವನ್ನು ಹೊಂದಿರುತ್ತಾರೆ. "ಸೋಮವಾರ ನಡೆದಿರುವುದು ಸಭಾಪತಿ ತೆಗೆದುಕೊಂಡ ಕ್ರಮವಲ್ಲ, ಸದನ ತೆಗೆದುಕೊಂಡಿರುವ ಕ್ರಮವಾಗಿದೆ. ಅದನ್ನು ಅಂಗೀಕರಿಸಲಾಗಿದ್ದು, ಅದು ಅಂತಿಮವಾಗಿದೆ," ಎಂದು ಪ್ರತಿಪಕ್ಷಗಳ ಗದ್ದಲದ ನಡುವೆ ಸಭಾಪತಿ ವೆಂಕಯ್ಯ ನಾಯ್ಡು ಹೇಳಿದರು.
ಆಗಸ್ಟ್‌ನಲ್ಲಿ ನಡೆದ ಮುಂಗಾರು ಅಧಿವೇಶನದಲ್ಲಿ 12 ಸಂಸದರನ್ನು ಅಮಾನತುಗೊಳಿಸಿದ ಗದ್ದಲದ ಕುರಿತು ಮಾತನಾಡಿದ ಅವರು, "ಕಳೆದ ಮುಂಗಾರು ಅಧಿವೇಶನದ ಕಹಿ ಅನುಭವವು ನಮ್ಮಲ್ಲಿ ಹೆಚ್ಚಿನವರನ್ನು ಕಾಡುತ್ತಲೇ ಇದೆ. ಕಳೆದ ಅಧಿವೇಶನದಲ್ಲಿ ಏನಾಯಿತು ಎಂಬುದರ ಕುರಿತು ಸದನದ ಪ್ರಮುಖರು ಬೆಳಕು ಚೆಲ್ಲುತ್ತಾರೆ ಎಂಬುದನ್ನು ನಾನು ನಿರೀಕ್ಷಿಸುತ್ತಿದ್ದೆ. ಅಂತಹ ಭರವಸೆಯು ವಿಷಯವನ್ನು ಸೂಕ್ತವಾಗಿ ನಿಭಾಯಿಸಲು ನನಗೆ ಸಹಾಯ ಮಾಡುತ್ತಿತ್ತು. ಆದರೆ ದುರದೃಷ್ಟವಶಾತ್, ಅದು ಆಗುವುದಿಲ್ಲ," ಎಂದು ಅವರು ಹೇಳಿದರು.
"ಸಂಸದೀಯ ಪ್ರಜಾಪ್ರಭುತ್ವದಲ್ಲಿ, ನೀವು ಮಾತನಾಡಬಹುದು ಅಥವಾ ಹೊರನಡೆಯಬಹುದು. ಅವರ ಭಾವನೆಗಳನ್ನು ಗೌರವಿಸುತ್ತೇನೆ ಎಂದು ಸಭಾಪತಿ ವೆಂಕಯ್ಯ ನಾಯ್ಡು ಹೇಳಿದರು.
ಅಮಾನತುಗೊಂಡ ಸಂಸದ ವಿರುದ್ಧ ಕ್ರಮಕ್ಕೆ ಆಗ್ರಹ:
ರಾಜ್ಯಸಭೆಯಿಂದ ಅಮಾನತುಗೊಂಡ ವಿರೋಧ ಪಕ್ಷದ 12 ಸಂಸದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮೇಲ್ಮನೆ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ. ಈ ಹಿಂದೆ ಸಂಸತ್ತಿನ ಮುಂಗಾರು ಅಧಿವೇಶನವು "ನಮ್ಮ ಸಂಸದೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅತ್ಯಂತ ಖಂಡನೀಯ ಮತ್ತು ನಾಚಿಕೆಗೇಡಿನ ಅಧಿವೇಶನ" ಎಂದು ಹೇಳಿದರು.
12 ಸಂಸದರ ಅಮಾತನು ಆದೇಶ ಮತ್ತು ಹಿನ್ನೆಲೆ:
ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಅಶಿಸ್ತಿನ ವರ್ತನೆ ತೋರಿದ ಕಾರಣಕ್ಕಾಗಿ ಪ್ರತಿಪಕ್ಷದ ಹನ್ನೆರಡು ಸಂಸದರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ರಾಜ್ಯಸಭೆಯಿಂದ ಅಮಾನತುಗೊಳಿಸಿ ಆದೇಶಿಸಲಾಗಿತ್ತು.
ಅಧಿಕೃತ ಸೂಚನೆಯಲ್ಲಿ, "ಈ ಸದನವು ಪೀಠದ ಅಧಿಕಾರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತದೆ. ಸದನದ ನಿಯಮಗಳ ಸಂಪೂರ್ಣ ದುರುಪಯೋಗವನ್ನು ತೀವ್ರವಾಗಿ ಖಂಡಿಸುತ್ತದೆ, ಆ ಮೂಲಕ ತಮ್ಮ ದುರ್ನಡತೆ, ಅವಹೇಳನಕಾರಿ, ಅಶಿಸ್ತಿನ ಮತ್ತು ಹಿಂಸಾತ್ಮಕ ಕೃತ್ಯಗಳ ಮೂಲಕ ಸದನದಲ್ಲಿ ಚರ್ಚೆಗೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಲಾಗಿರುತ್ತದೆ. ರಾಜ್ಯಸಭೆಯ 254ನೇ ಅಧಿವೇಶನದ ಕೊನೆಯ ದಿನ ಅಂದರೆ ಆಗಸ್ಟ್ 11ರಂದು ಭದ್ರತಾ ಸಿಬ್ಬಂದಿಯ ಮೇಲೆ ಉದ್ದೇಶಪೂರ್ವಕ ದಾಳಿ," ಬಗ್ಗೆ ಉಲ್ಲೇಖಿಸಲಾಗಿದೆ.
ಪ್ರತಿಪಕ್ಷಗಳ ಕತ್ತು ಹಿಸುಕುವ ಪ್ರಯತ್ನ:
ರಾಜ್ಯಸಭೆಯಲ್ಲಿ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ವಿರೋಧ ಪಕ್ಷದ 12 ಸಂಸದರನ್ನು ಅಮಾನತುಗೊಳಿಸಲಾಗಿದೆ. ಈ ಕುರಿತು ಇಂದು ಮಹತ್ವದ ಸಭೆ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಸದನದ ನಿಯಮಗಳಿಗೆ ವಿರುದ್ಧವಾಗಿ ಸಂಸದರನ್ನು ಅಮಾನತುಗೊಳಿಸಿದ್ದಾರೆ. ಸರ್ಕಾರದ ಕ್ರಮವು ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಪ್ರತಿಪಕ್ಷಗಳ ಧ್ವನಿಯನ್ನು ಅಡಗಿಸುವ ಹಾಗೂ ಕತ್ತು ಹಿಸುಕುವ ಪ್ರಯತ್ನವಾಗಿದೆ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.












Click it and Unblock the Notifications