ರಫೇಲ್ ಮೌಲ್ಯ ನಿರ್ಧಾರ ನಮ್ಮ ಕೆಲಸವಲ್ಲ: ಕೋರ್ಟ್ ಹೇಳಿದ್ದೇನು?
ನವದೆಹಲಿ, ಡಿಸೆಂಬರ್ 14: ರಫೇಲ್ ಒಪ್ಪಂದದಲ್ಲಿ ಹಗರಣ ನಡೆದಿದ್ದು, ಒಪ್ಪಂದವನ್ನು ರದ್ದುಗೊಳಿಸಿ ತನಿಖೆಗೆ ಒಳಪಡಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಗಳನ್ನು ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ತಿರಸ್ಕರಿಸಿದೆ.
ತೀರ್ಪು ನೀಡುವ ವೇಳೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಮತ್ತು ಕೆ.ಎಂ. ಜೋಸೆಫ್ ಅವರನ್ನು ಒಳಗೊಂಡ ನ್ಯಾಯಪೀಠ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿತು.
ರಫೇಲ್ ವಿಮಾನಗಳಿಗೆ ಎಷ್ಟು ಮೌಲ್ಯವನ್ನು ನಿರ್ಧರಿಸಲಾಗಿದೆ ಎಂಬ ಒಪ್ಪಂದದ ಅತ್ಯಂತ ಪ್ರಮುಖ ವಿವಾದಾತ್ಮಕ ಅಂಶವು ಚರ್ಚಾರ್ಹವಲ್ಲ. ಇದು ಸಾರ್ವಜನಿಕವಾಗಿ ಚರ್ಚೆಗೆ ಒಳಪಡಬೇಕು ಎಂದು ನ್ಯಾಯಮೂರ್ತಿಗಳಿಗೆ ಅನಿಸಬೇಕು ಎಂದು ಪೀಠ ಹೇಳಿತು.
ಕೆಲವು ಜನರ ನಂಬಿಕೆಯ ಆಧಾರದಲ್ಲಿ ತೀರ್ಪು ನೀಡಲು ಸಾಧ್ಯವಿಲ್ಲ ಎಂದ ಸುಪ್ರೀಂಕೋರ್ಟ್, ಬೆಲೆ ನಿರ್ಧಾರದ ಕುರಿತು ವಿಚಾರಣೆ ನಡೆಸುವುದು ಸುಪ್ರೀಂಕೋರ್ಟ್ ಕೆಲಸವಲ್ಲ ಎಂದು ಖಾರವಾಗಿ ನುಡಿಯಿತು.
ರಫೇಲ್ ಒಪ್ಪಂದ ವಿರುದ್ಧ ಸಲ್ಲಿಸಲಾಗಿದ್ದ ವಿವಿಧ ಅರ್ಜಿಗಳನ್ನು ವಜಾಗೊಳಿಸುವ ಸಂದರ್ಭದಲ್ಲಿ ನ್ಯಾಯಪೀಠ ನೀಡಿದ ಅಭಿಪ್ರಾಯಗಳು ಇಲ್ಲಿವೆ.

ನ್ಯಾಯಾಲಯದ ಕೆಲಸವಲ್ಲ
ರಫೇಲ್ ವಿಮಾನಗಳ ಮೌಲ್ಯದ ವಿಚಾರದಲ್ಲಿ ಪ್ರವೇಶಿಸುವುದು, ಬೆಲೆಯಲ್ಲಿನ ವ್ಯತ್ಯಾಸದ ವಿವರಗಳನ್ನು ಪರಿಶೀಲಿಸುವುದು ಕೋರ್ಟ್ ಕೆಲಸವಲ್ಲ. ಅದರಲ್ಲಿ ಗೋಪ್ಯತೆ ಕಾಪಾಡಿಕೊಳ್ಳಬೇಕು.
ಯಾವುದೇ ಯೋಜನೆಗೆ ಪೂರ್ವಸಿದ್ಧತೆಯಿಲ್ಲದೆ ನಮ್ಮ ದೇಶ ಮುಂದುವರಿಯಲು ಸಾಧ್ಯವಿಲ್ಲ. ಇಲ್ಲಿ ತಪ್ಪುಗಳಾಗಿದ್ದರೆ ಸರಿಪಡಿಸಲು ನ್ಯಾಯಾಲಯ ಕೂರುವುದು ಸೂಕ್ತವಲ್ಲ. ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಫ್ರಾಂಕೊಯಿಸ್ ಒಲಾಂಡ್ ಅವರು ಹೇಳಿಕೆ ನೀಡಿದ ಬಳಿಕವಷ್ಟೇ ಈ ಎಲ್ಲ ಅರ್ಜಿಗಳನ್ನು ಸಲ್ಲಿಸಲಾಗಿದೆ. ಇದಕ್ಕೆ ಕೇವಲ ಪತ್ರಿಕಾ ಸಂದರ್ಶನಗಳನ್ನು ಆಧಾರವಾಗಿಟ್ಟುಕೊಳ್ಳಲಾಗದು.
| Array |
ಹಸ್ತಕ್ಷೇಪಕ್ಕೆ ಕಾರಣಗಳಿಲ್ಲ
ಆಫ್‌ಸೆಟ್ ಪಾಲುದಾರನನ್ನು ನಿರ್ಧರಿಸುವುದು ವಿಮಾನ ತಯಾರಿಸುವ ಕಂಪೆನಿಗೆ ಬಿಟ್ಟಿದ್ದೇ ಹೊರತು ಕೇಂದ್ರ ಸರ್ಕಾರ ನಿರ್ಧರಿಸುವುದು ಸಾಧ್ಯವಿಲ್ಲ. ಇದರಲ್ಲಿ ವಾಣಿಜ್ಯ ಹಿತಾಸಕ್ತಿಯಲ್ಲ. ಯಾವುದು ಸೂಕ್ತ ಎಂದು ತೀರ್ಮಾನಿಸುವುದು ಕೋರ್ಟ್‌ಗೆ ಸಂಬಂಧಿಸಿದ್ದಲ್ಲ.
ಆಫ್‌ಸೆಟ್ ಪಾಲುದಾರಿಕೆ ಹಂಚಿಕೆಯ ಆಯ್ಕೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಲು ಕಾರಣಗಳಿಲ್ಲ. ರಕ್ಷಣಾ ಇಲಾಖೆಗೆ ಸಂಬಂಧಿಸಿದ ವ್ಯವಹಾರಗಳಂತಹ ಸೂಕ್ಷ್ಮ ವಿಚಾರಗಳಲ್ಲಿ ವೈಯಕ್ತಿಕ ಅಭಿಪ್ರಾಯಗಳ ಆಧಾರದಲ್ಲಿ ತನಿಖೆ ನಡೆಸಲಾಗದು.

ಸರ್ಕಾರವನ್ನು ಒತ್ತಾಯಿಸಲಾಗದು
126 ಯುದ್ಧ ವಿಮಾನಗಳನ್ನು ಖರೀದಿಸುವಂತೆ ನಾವು ಸರ್ಕಾರವನ್ನು ಒತ್ತಾಯಿಸಲು ಸಾಧ್ಯವಿಲ್ಲ. ಈ ಪ್ರಕರಣದ ಪ್ರತಿ ಅಂಶವನ್ನೂ ನ್ಯಾಯಾಲಯದ ಪರಿಶೀಲಿಸುವುದು ಸೂಕ್ತವಲ್ಲ. ಹಿಂದಿನ ಒಪ್ಪಂದ ಮುಂದಿನದ್ದಾಗಲು ಸಾಧ್ಯವಿಲ್ಲ.

ತನಿಖಾ ತಂಡ ರಚನೆ ಇಲ್ಲ
ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಕುರಿತು ಯಾವುದೇ ವಿಶೇಷ ತನಿಖಾ ತಂಡ ರಚನೆ ಮಾಡಲು ಆಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು. ರಫೇಲ್ ಒಪ್ಪಂದದ ಬಗ್ಗೆ ನ್ಯಾಯಾಲಯದ ನಿಗಾವಣೆಯಲ್ಲಿ ಜಂಟಿ ಸಂಸದೀಯ ಸಮಿತಿಯ ತನಿಖೆ ನಡೆಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಅದನ್ನು ಕೋರ್ಟ್ ವಜಾಗೊಳಿಸಿತು.












Click it and Unblock the Notifications