NRCಗೂ ಮೊದಲು NPR: ಕೇಂದ್ರದ ಮಹತ್ವದ ತೀರ್ಮಾನ
ನವದೆಹಲಿ, ಡಿಸೆಂಬರ್ 24: ರಾಷ್ಟ್ರದಾದ್ಯಂತ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿಗೊಳಿಸಲು ಸಿದ್ಧವಾಗಿರುವ ಕೇಂದ್ರ ಸರ್ಕಾರ, ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಮುಂದಿನ ವರ್ಷ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಕಾರ್ಯಕ್ರಮವನ್ನು ದೇಶದಾದ್ಯಂತ ನಡೆಸಲು ಕೇಂದ್ರ ಸಚಿವ ಸಂಪುಟ ತೀರ್ಮಾನಿಸಿದೆ.
ಜನಸಂಖ್ಯಾ ನೋಂದಣಿಗೆ (ಎನ್‌ಪಿಆರ್) ಕೇಂದ್ರ ಸಚಿವ ಸಂಪುಟ ಮಂಗಳವಾರದ ಸಭೆಯಲ್ಲಿ ಅನುಮೋದನೆ ನೀಡಿದೆ. ಈ ಯೋಜನೆಗಾಗಿ ಕೇಂದ್ರ ಸರ್ಕಾರ 8700 ಕೋಟಿ ರೂ. ಮೀಸಲಿಡಲಿದೆ.

ಏಪ್ರಿಲ್- ಸೆಪ್ಟೆಂಬರ್ ಅವಧಿಯಲ್ಲಿ ಎನ್‌ಪಿಆರ್ ನಡೆಯಲಿದ್ದು, ಜನ್ಮಸ್ಥಳ, ಜನ್ಮದಿನಾಂಕದ ನೋಂದಣಿಗೆ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಲಿದೆ. ಎನ್‌ಆರ್‌ಸಿ ಜಾರಿಗೂ ಮೊದಲು ನಡೆಯುವ ಎನ್‌ಪಿಆರ್, ಕೇಂದ್ರ ಸರ್ಕಾರದ ಯೋಜನೆಗೆ ನೆರವಾಗಲಿದೆ.
ದೇಶದ ಪ್ರತಿ ಸಾಮಾನ್ಯ ನಾಗರಿಕರ ಗುರುತಿನ ಮೂಲ ಡಾಟಾಬೇಸ್ ಸೃಷ್ಟಿಸುವುದು ಎನ್‌ಪಿಆರ್ ಉದ್ದೇಶವಾಗಿದೆ. ಇದು ಜನಸಂಖ್ಯಾಶಾಸ್ತ್ರ ಮತ್ತು ಬಯೋಮೆಟ್ರಿಕ್ ಎರಡೂ ವಿವರಗಳನ್ನು ಹೊಂದಲಿದೆ.
ಅಸ್ಸಾಂ ಹೊರತುಪಡಿಸಿ ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಎನ್‌ಪಿಆರ್ ಯೋಜನೆ ನಡೆಯಲಿದೆ. ಅಸ್ಸಾಂನಲ್ಲಿ ಎನ್‌ಆರ್‌ಸಿ ಮೂಲಕ ಈಗಾಗಲೇ ಅಕ್ರಮ ವಲಸಿಗರನ್ನು ಗುರುತಿಸುವ ಕಾರ್ಯ ಮುಕ್ತಾಯಗೊಂಡಿದೆ.
ಎನ್‌ಪಿಆರ್ ಡೇಟಾಗಳನ್ನು 2010ರಲ್ಲಿ ಯುಪಿಎ ಸರ್ಕಾರದ ಎರಡನೆಯ ಅವಧಿಯಲ್ಲಿ ಮೊದಲ ಬಾರಿಗೆ ಸಂಗ್ರಹಿಸಲಾಗಿತ್ತು. ಇದರೊಟ್ಟಿಗೆ 2011ರ ಜನಗಣತಿಯ ಜತೆ ಮನೆಗಳ ಪಟ್ಟಿಯನ್ನೂ ಸಿದ್ಧಪಡಿಸಲಾಗಿತ್ತು.
ಮನೆಯಿಂದ ಮನೆಗೆ ನಡೆಸಿದ ಸಮೀಕ್ಷೆಯ ಬಳಿಕ 2015ರಲ್ಲಿ ಎನ್‌ಪಿಆರ್ ಡೇಟಾವನ್ನು ಮೊದಲ ಸಲ ಅಪ್‌ಡೇಟ್ ಮಾಡಲಾಗಿತ್ತು. ಈ ಎಲ್ಲ ಡೇಟಾಗಳ ಡಿಜಿಟೈಸೇಷನ್ ಕಾರ್ಯ ಈಗ ಪೂರ್ಣಗೊಂಡಿದೆ. ಮುಂದಿನ ಹಂತದಲ್ಲಿ ಸರ್ಕಾರವು 2021ರ ಜನಗಣತಿಯ ಎನ್‌ಪಿಆರ್ ಹಾಗೂ ಮನೆಗಳ ಪಟ್ಟಿಯ ಪ್ರಕ್ರಿಯೆಯನ್ನು ನಡೆಸಲಿದೆ.












Click it and Unblock the Notifications