ಮಾಧ್ಯಮಗಳ ಮೇಲೆ ಅಂಕುಶ: ಕೇಜ್ರಿಗೆ ತೀವ್ರ ಮುಖಭಂಗ
ನವದೆಹಲಿ, ಮೇ 14: ಮಾಧ್ಯಮಗಳ ಮೇಲೆ ಅಂಕುಶ ಹೇರಲು ಮಾನನಷ್ಟ ಮೊಕದ್ದಮೆ ಹೂಡುವ ದೆಹಲಿ ಸರಕಾರದ ನಿರ್ಧಾರಕ್ಕೆ ತೀವ್ರ ಹಿನ್ನಡೆಯಾಗಿದೆ.
ಸರಕಾರದ ಘನತೆಗೆ ಮಸಿ ಬಳಿಯುವಂತಹ ಸುದ್ದಿಗಳು ಪ್ರಸಾರವಾದರೆ ಅಂಥವರ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಲು ದೆಹಲಿಯ ಕೇಜ್ರಿವಾಲ್ ಸರಕಾರ ನಿರ್ಧರಿಸಿತ್ತು. (ಟೈಮ್ಸ್ ಪ್ರಭಾವಿಗಳ ಪಟ್ಟಿಯಲ್ಲಿ ಮೋದಿ ಜೊತೆ ಕೇಜ್ರಿ)
ಈ ಸಂಬಂಧ ದೆಹಲಿ ಸರಕಾರ ಮೇ ಆರರಂದು ಹೊರಡಿಸಿದ್ದ ಅಧಿಸೂಚನೆಗೆ ಸುಪ್ರೀಂ ಕೋರ್ಟ್ ಈಗ ಬ್ರೇಕ್ ಹಾಕಿದೆ. ಮಾಧ್ಯಮಗಳಲ್ಲಿ ಏನೇ ವರದಿಯಾದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಮೇ ನಾಲ್ಕರಂದು ಹೇಳಿದ್ದ ಕೇಜ್ರಿವಾಲ್, ಮೇ ಆರರಂದು ಈ ಅಧಿಸೂಚನೆ ಹೊರಡಿಸಿದ್ದರು.

ದೆಹಲಿ ಸರಕಾರಕ್ಕೆ ಸಂಬಂಧಪಟ್ಟ ಯಾವುದೇ ಸಚಿವರ ಮತ್ತು ಅಧಿಕಾರಿಗಳ ಬಗ್ಗೆ ಮಾಧ್ಯಮಗಳಲ್ಲಿ 'ಸರಕಾರದ ಘನತೆಗೆ ಧಕ್ಕೆ ತರುವಂತಹ' ಸುದ್ದಿ ಪ್ರಸಾರವಾದರೆ / ಪ್ರಕಟವಾದರೆ ಅಂಥವರ ವಿರುದ್ದ ಮಾನನಷ್ಟ ಮೊಕದ್ದಮೆಯನ್ನು ಗೃಹ ಕಾರ್ಯದರ್ಶಿಗಳು ಹೂಡಬಹುದು ಎಂದು ದೆಹಲಿ ಸರಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸುತ್ತೋಲೆ ಹೊರಡಿಸಿತ್ತು.
ಇಲಾಖೆ ಹೊರಡಿಸಿದ್ದ ಅಧಿಸೂಚನೆಯನ್ನು ಜಾರಿಗೆ ತರದಂತೆ ಸರ್ವೋಚ್ಚ ನ್ಯಾಯಾಲಯ ಆದೇಶ ಹೊರಡಿಸಿದೆ.
ಪ್ರಮುಖ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ, ಕೇಜ್ರಿವಾಲ್ ಸರಕಾರ ಮುಜುಗರಕ್ಕೀಡಾಗುವಂತಹ ಹೇಳಿಕೆಯನ್ನು ನೀಡಿದ್ದವು.
ಇದಕ್ಕೆ ಮೂಗುದಾರ ಹಾಕಲು ಕೇಜ್ರಿ ಸರಕಾರ ನಿರ್ಧರಿಸಿತ್ತು. ಆದರೆ ಸರಕಾರದ ಕ್ರಮಕ್ಕೆ ಈಗ ಸುಪ್ರೀಂಕೋರ್ಟ್ ಮೂಗುದಾರ ಹಾಕಿದೆ.












Click it and Unblock the Notifications