ಭೂ ಕಬಳಿಕೆ, ರಮ್ಯಾ ಸ್ಪರ್ಧೆ ಸಿಕ್ಕು ಬಿಡಿಸಿದ ಕೃಷ್ಣ
ನವದೆಹಲಿ, ಡಿ.15: ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಸಚಿವ ಎಸ್ಸೆಂಕೃಷ್ಣ ಹಾಗೂ ಅವರ ಕುಟುಂಬ ವರ್ಗದ ಮೇಲೆ ಸರ್ಕಾರಿ ಭೂಮಿ ಕಬಳಿಕೆ, ಒತ್ತುವರಿ ಆರೋಪ ಕೇಳಿ ಬಂದ ಬೆನ್ನಲ್ಲೇ ಈ ಬಗ್ಗೆ ಸ್ವತಃ ಕೃಷ್ಣ ಅವರೇ ಭಾನುವಾರ ಸ್ಪಷ್ಟನೆ ನೀಡಿದ್ದಾರೆ. ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್ ಹಿರೇಮಠ್ ಅವರು ಮಾಡಿರುವ ಆರೋಪಗಳನ್ನು ಎಸ್ಸೆಂಕೃಷ್ಣ ತಳ್ಳಿ ಹಾಕಿದ್ದಾರೆ.
ನವದೆಹಲಿಯ ಕೆ.ಕಾಮರಾಜಮಾರ್ಗದಲ್ಲಿರುವ ನಿವಾಸದಲ್ಲಿ ಭಾನುವಾರ(ಡಿ.15) ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಮುಖಂಡ ಎಸ್ಸೆಂ ಕೃಷ್ಣ ಅವರು ಅಳಿಯ ವಿಜೆ ಸಿದ್ದಾರ್ಥ ಅವರ ಮೇಲಿರುವ ಆರೋಪ, ಮಂಡ್ಯದಲ್ಲಿ ರಮ್ಯಾ ಸ್ಪರ್ಧೆ, ಅಧಿಕಾರಿ ಜೇಕಬ್ ಜೋರಮ್ ಜತೆಗಿನ ಸಂಬಂಧದ ಬಗ್ಗೆ ವಿವರಣೆ ನೀಡಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಎಸ್.ಆರ್.ಹಿರೇಮಠ್ ಅವರು, ಎಸ್.ಎಂ.ಕೃಷ್ಣ ಅಳಿಯ ಮತ್ತು ಉದ್ಯಮಿ ಸಿದ್ದಾರ್ಥ ಅವರು ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವುದಕ್ಕೆ ದಾಖಲೆ ಬಿಡುಗಡೆ ಮಾಡಿದ್ದರು. ಬೆಂಗಳೂರಿನ ಭೈರಸಂದ್ರದ ಸರ್ವೆ ನಂ 65ರಲ್ಲಿ 5 ಎಕರೆ ಸರ್ಕಾರಿ ಭೂಮಿಯಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಪೆಟ್ರೋಲ್ ಬಂಕ್ ನಿರ್ಮಿಸುತ್ತೇವೆ ಎಂದಿದ್ದ ಸಿದ್ದಾರ್ಥ ಅವರು ಕಾಫಿ ಡೇ ಮತ್ತು ಮೆಕ್ ಡೋನಾಲ್ಡ್ ನಿರ್ಮಾಣ ಮಾಡಿದ್ದಾರೆ ಎಂದು ಹಿರೇಮಠ್ ಆರೋಪಿಸಿದ್ದರು.[ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ವಿಜಿ ಸಿದ್ದಾರ್ಥ]

ಈ ಬಗ್ಗೆ ಸ್ಪಷ್ಟನೆ ನೀಡಿದ ಎಸ್ಸೆಂ ಕೃಷ್ಣ ಅವರು HPCL, Mcdonold, ಕೆಫೆ ಕಾಫಿ ಡೇ ಗೆ ಭೂಮಿ ನೀಡಿದ ಬಗ್ಗೆ ಬಗ್ಗೆ ನನಗೆ ಗೊತ್ತಿಲ್ಲ. ಈ ಕಂಪನಿಗಳಿಗೂ ನನಗೂ ಸಂಬಂಧವಿಲ್ಲ. ಹಿರೇಮಠ್ ಅವರ ಬಳಿ ಸೂಕ್ತ ಸಾಕ್ಷಿ ಆಧಾರಗಳಿದ್ದರೆ ದೂರು ದಾಖಲಿಸಲಿ. ಸಮಗ್ರ ತನಿಖೆ ನಡೆಯಲಿ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಭೂ ಕಬಳಿಕೆಯಾಗಿದ್ದರೆ ತಕ್ಷಣವೇ ತೆರವುಗೊಳಿಸಲಿ ಎಂದು ಕೃಷ್ಣ ಹೇಳಿದರು.
ಈ ಪ್ರಕರಣವನ್ನು ಲೋಕಾಯುಕ್ತ ಅಥವಾ ಕೋರ್ಟಿಗೆ ತೆಗೆದುಕೊಂಡು ಹೋಗುವುದು ಹಿರೇಮಠ್ ಅವರಿಗೆ ಬಿಟ್ಟ ವಿಚಾರ. ನಾನಾಗಲಿ, ನಮ್ಮ ಕುಟುಂಬವರ್ಗವಾಗಲಿ ಭೂ ಕಬಳಿಕೆಯಲ್ಲಿ ಭಾಗಿಯಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕಿತ್ತು ಹಾಗಾಗಿ ನಿಮ್ಮ ಮುಂದೆ ಬಂದಿದ್ದೇನೆ ಎಂದು ಸುದ್ದಿಗಾರರನ್ನು ಉದ್ದೇಶಿಸಿ ಕೃಷ್ಣ ಹೇಳಿದರು.
ಬಿಡಿಎ ಆಯುಕ್ತರಾಗಿದ್ದ ಜೇಕಬ್ ಜಯರಾಮ್ ಉತ್ತಮ ಆಡಳಿತಗಾರರಾಗಿದ್ದರು. ಸುಮಾರು ಬಿಡಿಎ 50 ಸಾವಿರಕ್ಕೂ ಅಧಿಕ ನಿವೇಶನ ಜನ ಸಾಮಾನ್ಯರಿಗೆ ಹಂಚಿದ್ದಾರೆ ಎಂದು ಹೆಮ್ಮೆಯಿಂದ ಸ್ಮರಿಸುತ್ತೇನೆ. ಆಪ್ತರಾಗಿದ್ದ ಮಾತ್ರಕ್ಕೆ ಭೂ ಅಕ್ರಮ ಎಸಗಲು ಅವರನ್ನು ಬಳಸಿಕೊಂಡೆ ಎಂಬುದು ತಪ್ಪಾಗುತ್ತದೆ ಎಂದು ಕೃಷ್ಣ ಹೇಳಿದರು.
ರಮ್ಯಾ ಸ್ಪರ್ಧೆ: ರಮ್ಯಾ ಅವರು ಮಂಡ್ಯ ಕ್ಷೇತ್ರದಿಂದ ಇತ್ತೀಚೆಗಷ್ಟೇ ಚುನಾಯಿತರಾಗಿದ್ದಾರೆ. ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ. ರಮ್ಯಾ ಅವರನ್ನು ಮಂಡ್ಯಕ್ಷೇತ್ರದಿಂದ ಬದಲಾಯಿಸುವ ಯಾವ ಕಾರಣವೂ ಕಾಣುತ್ತಿಲ್ಲ. ಆತ್ಮಾನಂದ ಅವರ ಪತ್ರದ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ 'ನಾನು ಟಿಕೆಟ್ ಆಕಾಂಕ್ಷಿಯಲ್ಲ, ನಾನು ಅಭ್ಯರ್ಥಿ ಅಲ್ಲ. ಮಂಡ್ಯದಲ್ಲಿ ಸ್ಪರ್ಧೆಗೆ ರಮ್ಯಾ ಅವರೇ ಸೂಕ್ತ ಎಂದಷ್ಟೇ ಹೇಳಬಲ್ಲೆ ಎಂದು ಎಸ್.ಎಂ ಕೃಷ್ಣ ಅವರು ಸ್ಪಷ್ಟಪಡಿಸಿದರು.
ಮಂಡ್ಯದಲ್ಲಿ ಯಾರು ಸ್ಪರ್ಧಿಸಬೇಕು ಎಂಬ ವಿಷಯ ಗೊಂದಲಕ್ಕೀಡಾಗಿರುವ ಸಂದರ್ಭದಲ್ಲಿ ಹಾಲಿ ಸಂಸದೆ ರಮ್ಯಾ ಅವರು ಇತ್ತೀಚೆಗೆ ಪ್ರತಿಕ್ರಿಯೆ ನೀಡಿ, ' ಎಸ್ಸೆಂ ಕೃಷ್ಣ ಅವರು ಪಕ್ಷದ ಹಿರಿಯ ನಾಯಕರು ನನಗೆ ತಂದೆ ಸಮಾನ ಅವರು ಸ್ಪರ್ಧಿಸುತ್ತೇನೆ ಎಂದರೆ ನಾನು ಕ್ಷೇತ್ರ ಬಿಟ್ಟುಕೊಡುವೆ. ನಾವೆಲ್ಲ ಹೈ ಕಮಾಂಡ್ ನಿರ್ಧಾರದಂತೆ ನಡೆಯುತ್ತೇವೆ' ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications