ಸದ್ದಿಲ್ಲದೆ ರಾಬರ್ಟ್ ವಾಧ್ರಾ ಕಂಪನಿಗಳು ಕ್ಲೋಸ್
ನವದೆಹಲಿ, ಜು.8: ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅಳಿಯ ಹಾಗೂ ಪ್ರಿಯಾಂಕಾ ವಾಧ್ರಾ ಪತಿ ರಾಬರ್ಟ್ ವಾಧ್ರಾ ಅವರು ತಮ್ಮ ಒಡೆತನದ ಆರು ಕಂಪೆನಿಗಳನ್ನು ಸದ್ದಿಲ್ಲದ್ದಂತೆ ಬಂದ್ ಮಾಡಿದ್ದಾರೆ. ಭೂ ಹಗರಣ ಆರೋಪ ಹೊತ್ತಿರುವ ರಾಬರ್ಟ್ ಅವರ ವಿವಾದಿತ ಕಂಪನಿಗಳು ಮುಚ್ಚಿರುವುದು ಚರ್ಚೆಗೆ ಕಾರಣವಾಗಿದೆ.
ರಾಬರ್ಟ್ ವಾಧ್ರಾ ಒಡೆತನದ ಲೈಫ್‌ಲೈನ್ ಆಗ್ರೋಟೆಕ್, ಗ್ರೀನ್‌ವೇವ್ ಆಗ್ರೋ, ರೈಟ್‌ಲೈನ್ ಅಗ್ರಿಕಲ್ಚರ್, ಫ್ಯೂಚರ್ ಇನ್‌ಫ್ರಾ ಆಗ್ರೋ, ಬೆಸ್ಟ್ ಸೀಜನ್ ಆಗ್ರೋ ಮತ್ತು ಪ್ರೈಮ್ ಟೈಮ್ ಆಗ್ರೋ ಎಂಬ ಆರು ಕಂಪೆನಿಗಳಿಗೆ ಬೀಗಮುದ್ರೆ ಜಡಿಯಲಾಗಿದೆ. ಆದರೆ, ಈ ಕಂಪೆನಿಗಳನ್ನು ಹಣಕಾಸಿನ ಮುಗ್ಗಟ್ಟಿನಿಂದ ಮುಚ್ಚಲಾಗಿದೆಯೇ ಇಲ್ಲವೆ ಆದಾಯ ಅಧಿಕಾರಿಗಳು ಬೀಗ ಜಡಿದಿದ್ದಾರೆಯೇ ಎಂಬುದು ದೃಢಪಟ್ಟಿಲ್ಲ.

2012ರ ಜೂನ್ ಮತ್ತು ಆಗಸ್ಟ್ ಮಧ್ಯದ ವೇಳೆ ರಾಬರ್ಟ್ ವಾಧ್ರಾ ಆರು ಕಂಪೆನಿಗಳನ್ನು ತೆರೆದಿದ್ದರು. ಅಲ್ಲದೆ, ಈ ಎಲ್ಲ ಕಂಪೆನಿಗಳಿಗೂ ಸ್ವತಃ ವಾಧ್ರಾ ಅವರೇ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಡಿಎಲ್‌ಎಫ್ ರಿಯಲ್ ಎಸ್ಟೇಟ್ ಕಂಪೆನಿ ವ್ಯವಹಾರದಲ್ಲೂ ಭಾಗಿಯಾಗಿದ್ದ ವಾಧ್ರಾ ಜಮೀನು ಖರೀದಿಯಲ್ಲಿ ಕಾನೂನು ಉಲ್ಲಂಘನೆ ಮಾಡಿದ್ದಾರೆಂಬ ಆಪಾದನೆ ಕೇಳಿಬಂದಿತ್ತು.[ಸುನಂದಾ ಕೇಸ್‌ನಲ್ಲಿ ಸೋನಿಯಾ ಅಳಿಯನ ಹೆಸರು]
ಹರ್ಯಾಣದಲ್ಲಿ ಸ್ಥಾಪನೆಯಾಗಿದ್ದ ಈ ಕಂಪೆನಿಗಳಿಗೆ ಕಂದಾಯ ಇಲಾಖೆ ಜಮೀನು ನೀಡುವಾಗ ಕಾನೂನು ಉಲ್ಲಂಘನೆ ಮಾಡಿದೆ ಎಂಬ ಆರೋಪ ಎಲ್ಲೆಡೆ ಹಬ್ಬಿತ್ತು. ಒಂದು ಮೂಲದ ಪ್ರಕಾರ, ರಾಬರ್ಟ್ ವಾಧ್ರಾ ತಮ್ಮ ಒಡೆತನದ ಕಂಪೆನಿಗಳ ಆದಾಯ ತೆರಿಗೆಯನ್ನು ಪಾವತಿಸಿರಲಿಲ್ಲ ಎಂಬ ಮಾತುಗಳು ಅಲ್ಲಲ್ಲಿ ಹರಿದಾಡಿದ್ದವು. ಹೀಗಾಗಿಯೇ ಈ ಕಂಪೆನಿಗಳಿಗೆ ಬೀಗ ಮುದ್ರೆ ಹಾಕಿದ್ದಾರೆ ಎನ್ನಲಾಗಿದೆ. ಇದರ ಬಗ್ಗೆ ಪ್ರತಿಕ್ರಿಯಿಸಲು ರಾಬರ್ಟ್ ವಾಧ್ರಾ ನಿರಾಕರಿಸಿದ್ದಾರೆ.
2012ರ ಆಗಸ್ಟ್ 12ರಂದು ವಾಧ್ರಾ ಅವರ Sky Light Hospitality ಕಂಪನಿಯು ಡಿಎಲ್ ಎಫ್ ಗೆ 3.53 ಎಕರೆ ಜಮೀನನ್ನು ಬರೋಬ್ಬರಿ 58 ಕೋಟಿ ರೂ. ಗೆ ಮಾರಾಟ ಮಾಡಿದೆ. ಅಂದರೆ 7.5 ಕೋಟಿ ರೂ.ಗೆ ಖರೀದಿಸಿದ ಭೂಮಿ ನಾಲ್ಕೇ ವರ್ಷಗಳಲ್ಲಿ 58 ಕೋಟಿ ರೂ. ಗೆ ಮಾರಾಟವಾಗಿತ್ತು. ಆದರೆ, ಡಿಎಲ್ ಎಫ್ ಭೂ ಹಗರಣದಿಂದ ವಾಧ್ರಾಗೆ ಕ್ಲೀನ್ ಚಿಟ್ ಸಿಕ್ಕಿದೆ.












Click it and Unblock the Notifications