ನವದೆಹಲಿ-ಎನ್ ಸಿಆರ್ ಪ್ರದೇಶಗಳಲ್ಲಿ ಭಾರಿ ಮಳೆ ಎಚ್ಚರಿಕೆ
ನವದೆಹಲಿ, ಆಗಸ್ಟ್.19: ದೆಹಲಿ ಮತ್ತು ಎನ್ ಸಿಆರ್ ಜಿಲ್ಲೆಗಳಲ್ಲಿ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿದ್ದು ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬುಧವಾರ ಬೆಳಗ್ಗೆ ನವದೆಹಲಿ ಮತ್ತು ಎನ್ಆರ್ ಸಿ ಪ್ರದೇಶಗಳಲ್ಲಿ ಹವಾಮಾನವು ಗರಿಷ್ಠ ಇಳಿಮುಖವಾಗಿದ್ದು, ಕೆಲವು ಗಂಟೆಗಳಲ್ಲೇ ಭಾರಿ ಮಳೆಯಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಹವಾಮಾನ ಇಲಾಖೆ ಕೂಡ ನವದೆಹಲಿಯಲ್ಲಿ ಬುಧವಾರ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
"ಗುರುವಾರವರೆಗೂ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಅಲ್ಲದೆ, ಒಂದು ಅಥವಾ ಎರಡು ಮಳೆ ಸುರಿಯುವ ಸಾಧ್ಯತೆಗಳಿವೆ" ಎಂದು ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಪ್ರಾದೇಶಿಕ ಮುನ್ಸೂಚನೆ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ತಿಳಿಸಿದ್ದಾರೆ.

ಎರಡು ಗಂಟೆಗಳಲ್ಲೇ ಗುಡುಗು ಸಹಿತ ಮಳೆ:
ನವದೆಹಲಿಯ ಸಂಭಾಲ್, ಬುಲಂದ್ ಶಹರ್, ಖುರ್ಜಾ, ಕೊಸ್ಲಿ, ಬವಲ್, ನುಹ್, ಸೊಹ್ನಾ, ಪಲ್ವಾಲ್, ಫರಿದಾಬಾದ್, ಗುರುಗ್ರಾಮ್, ಬಲ್ಲಭಘರ್, ನೊಯ್ಡಾ, ಬಾಗ್ಪತ್, ಖಟೋಲಿ, ಅಮ್ರೋಹಾ, ಮೊರದಾಬಾದ್, ಮೀರತ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ ಎರಡು ಗಂಟೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ವಾರದ ಆರಂಭದಲ್ಲಿ ಈಶಾನ್ಯ ಮಧ್ಯಪ್ರದೇಶ ಮತ್ತು ಆಗ್ನೇಯ ಉತ್ತರ ಪ್ರದೇಶದ ಮೇಲೆ ಕಡಿಮೆ ಒತ್ತಡ ಹೆಚ್ಚಾಗಲಿದೆ. ಸೋಮವಾರ ಸಫ್ದರ್ ಜಂಗ್ ಪ್ರದೇಶದಲ್ಲಿ 23.2 ಮಿ.ಮೀಟರ್ ನಷ್ಟು ಮಳೆಯಾಗಿದೆ.
ಮಳೆಯ ದಾಖಲೆಯ ಪ್ರಕಾರ, 15 ಮಿ.ಮೀ ಮಳೆಯನ್ನು ಅಲ್ಪ, 15 ರಿಂದ 64.5 ಮಿ.ಮೀ ಮಳೆಯನ್ನು ಸಾಧಾರಣ ಮತ್ತು 64.5 ಮಿ.ಮೀಟರ್ ಗಿಂತ ಹೆಚ್ಚಿನ ಮಳೆಯನ್ನು ಭಾರಿ ಮಳೆ ಎಂದು ಗುರುತಿಸಲಾಗುತ್ತದೆ.












Click it and Unblock the Notifications