ತಮ್ಮ ವಿರುದ್ಧ ತನಿಖೆ ನಡೆಸಲು ಮೋದಿಗೆ ರಾಹುಲ್ ಸವಾಲ್
ನವದೆಹಲಿ, ನವೆಂಬರ್ 19 : "ಲಂಡನ್ನಿನ ಖಾಸಗಿ ಕಂಪನಿಯಲ್ಲಿ ನಾನು ಬ್ರಿಟಿಷ್ ನಾಗರಿಕ ಎಂದು ಘೋಷಣೆ ಮಾಡಿದ್ದರೆ ಮೋದಿ ಸರಕಾರ ಬೇಕಿದ್ದರೆ ನನ್ನ ವಿರುದ್ಧ ತನಿಖೆ ನಡೆಸಲಿ" ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸವಾಲು ಹಾಕಿದ್ದಾರೆ.
"ನರೇಂದ್ರ ಮೋದಿ ಈ ದೇಶದ ಪ್ರಧಾನಿ. ದೇಶದ ಎಲ್ಲ ತನಿಖಾ ಸಂಸ್ಥೆಗಳು ಅವರ ಅಡಿಯಲ್ಲಿಯೇ ಇವೆ. ನನ್ನ ವಿರುದ್ಧ ಅವರು (ಮೋದಿ ಸರಕಾರ) ಏನಾದರೂ ಆರೋಪ ಮಾಡುತ್ತಲೇ ಇರುತ್ತದೆ. ನನ್ನ ವಿರುದ್ಧ ತನಿಖೆಗೆ ಏಕೆ ಆದೇಶಿಸಬಾರದು" ಎಂದು ಅವರ ಅಜ್ಜಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 98ನೇ ಜನ್ಮದಿನೋತ್ಸವದ ಪ್ರಯುಕ್ತ ಗುರುವಾರ ಆಯೋಜಿಸಲಾಗಿದ್ದ ಸಭೆಯಲ್ಲಿ ಅವರು ಪ್ರಶ್ನೆ ಹಾಕಿದರು.
"ನಾನು ಮೋದಿಜಿ ಅವರಿಗೆ ಹೆದರುವುದಿಲ್ಲ. ಆರೋಪ ಸಾಬೀತಾದರೆ ಜೈಲಿಗೆ ಕೂಡ ಹೋಗಲು ಸಿದ್ಧ. ಆದರೆ, ಮೋದಿ ಅವರು ತಮ್ಮ ಹಿಂಬಾಲಕರು ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಕೆಸರೆರಚುವುದನ್ನು ಮೊದಲು ನಿಲ್ಲಿಸಬೇಕು" ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು. [ಮೋದಿ ಅಲ್ಪಸಾಧನೆಯ ಗರ್ವಿ,ಶೋಕಿಲಾಲ: ರಾಹುಲ್ ವಾಕ್ ಪ್ರಹಾರ]

ಗಾಂಧಿ ಕುಟುಂಬದ ಕಾಲೆಳೆಯುತ್ತಲೇ ಇರುವ ಬಿಜೆಪಿ ಮುಖಂಡ ಡಾ. ಸುಬ್ರಮಣಿಯನ್ ಸ್ವಾಮಿ ಅವರು, "ರಾಹುಲ್ ಮತ್ತು ಸೋನಿಯಾ ಕಮಿಷನ್ ಏಜೆಂಟ್ ಆಗಿದ್ದಾರೆ. ಲಂಡನ್ ನಲ್ಲಿರುವ ಕಂಪನಿಯಲ್ಲಿ ರಾಹುಲ್ ಅವರು ತಾವು ಬ್ರಿಟನ್ ನಾಗರಿಕ ಎಂದು ಘೋಷಿಸಿಕೊಂಡಿದ್ದಾರೆ. ರಾಹುಲ್ ಅವರ ಸಂಸತ್ ಸದಸ್ಯತ್ವವನ್ನು ರದ್ದುಪಡಿಸಬೇಕು" ಎಂದು ಸೋಮವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು.
ಬ್ರಿಟನ್ನಿನಲ್ಲಿ ರಾಹುಲ್ ಗಾಂಧಿ ಅವರು 'ಬ್ಯಾಕಪ್ಸ್' ಎಂಬ ಕಂಪನಿ ಸ್ಥಾಪಿಸಿದ್ದರು ಮತ್ತು 2009ರಲ್ಲಿ ನಡೆದ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ತಮ್ಮ ಅಫಿಡವಿಟ್ ನಲ್ಲಿ ತಾವು ಬ್ರಿಟಿಷ್ ನಾಗರಿಕ ಎಂಬ ಅಂಶವನ್ನು ಮರೆಮಾಚಿದ್ದರು ಎಂದು ಸುಬ್ರಮಣಿಯನ್ ಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ದಾಖಲೆ ಸಮೇತ ಆರೋಪಿಸಿದ್ದರು. ಸ್ವಾಮಿ ಅವರ ಎಲ್ಲ ಆರೋಪಗಳನ್ನು ಕಾಂಗ್ರೆಸ್ ಅಲ್ಲಗಳೆದಿದೆ.












Click it and Unblock the Notifications