ರಾಹುಲ್ ಗಾಂಧಿ ದಲ್ಲಾಳಿಗಳ ಕುಟುಂಬದಿಂದ ಬಂದವರು: ಪಾತ್ರಾ
ನವದೆಹಲಿ, ಅಕ್ಟೋಬರ್ 12: ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿರುವ ಆರೋಪಗಳೆಲ್ಲ ಸುಳ್ಳು ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು ಒಂದು ದಲ್ಲಾಳಿಗಳ ಕುಟುಂಬದಿಂದ ಬಂದಿದ್ದಾರೆ. ಅವರ ತಂದೆ ಮತ್ತು ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರು ರಕ್ಷಣಾ ಒಪ್ಪಂದಗಳಲ್ಲಿ ದಲ್ಲಾಳಿಯಾಗಿದ್ದರು ಎಂದು ಪಾತ್ರಾ ಹೇಳಿದ್ದಾರೆ.
2014 ರವರೆಗೂ ಈ ಕುಟುಂಬ ಎಲ್ಲಾ ರಕ್ಷಣಾ ಒಪ್ಪಂದಗಳಲ್ಲೂ ಹಣ ಮಾಡಿದೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿಯವರನ್ನೂ ಇದೇ ಮನಸ್ಥಿತಿಯಿಂದ ನೋಡುತ್ತಿದೆ ಎಂದು ಪಾತ್ರಾ ಆರೋಪಿಸಿದರು.

ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಗುರುವಾರ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ನಡೆಸಿದ ನಂತರ ಪ್ರತಿಯಾಗಿ ತಾವೂ ಪತ್ರಿಕಾಗೋಷ್ಠಿ ನಡೆಸಿದ ಸಂಬಿತ್ ಪಾತ್ರ, ರಾಹುಲ್ ಅವರ ಮೆಲೆ ಹರಿಹಾಯ್ದರು.
ರಾಹುಲ್ ಗಾಂಧಿ ಅವರು ತಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲು ದೇಶದ ಭದ್ರತೆಯ ವಿಷಯದಲ್ಲಿ ವೃಥಾ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಪತ್ರಿಕಾಗೋಷ್ಠಿಯ ತುಂಬ ಸುಳ್ಳೇ ತುಂಬಿದ್ದು ಎಂದು ಪಾತ್ರಾ ಹೇಳಿದ್ದಾರೆ.
ರಫೇಲ್ ಡೀಲ್ ನಲ್ಲಿ ಬಹುಕೋಟಿ ಭ್ರಷ್ಟಾಚಾರವಾಗಿದೆ ಮತ್ತು ಈ ದೇಶದ ಪ್ರಧಾನಿ ಒಬ್ಬ ಭ್ರಷ್ಟ ಎಂದು ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ಆರೋಪಿಸಿದ್ದರು.
ರಫೇಲ್ ಯುದ್ಧ ವಿಮಾನ ಖರೀದಿಗಾಗಿ ಫ್ರಾನ್ಸ್ ನೊಂದಿಗೆ ಮಾಡಿಕೊಂಡ ಒಪ್ಪಂದದಲ್ಲಿ ಬಹುಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ಹರಿಹಾಯುತ್ತಿವೆ.












Click it and Unblock the Notifications