ರಫೇಲ್ ದಾಖಲೆಗಳು ಕಳುವಾಗಿವೆ: ಸುಪ್ರೀಂಗೆ ಕೇಂದ್ರದ ಹೇಳಿಕೆ
ವದೆಹಲಿ, ಮಾರ್ಚ್ 06: ರಫೇಲ್ ಡೀಲ್ ಕುರಿತು ತಾನು ನೀಡಿದ್ದ ತೀರ್ಪಿನ ಮರುಪರಿಶೀಲನಾ ಅರ್ಜಿಯನ್ನು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಆರಂಭಿಸಿದೆ.
ರಕ್ಷಣಾ ಸಚಿವಾಲಯದಿಂದ ಕೆಲವು ಮಹತ್ವದ ದಾಖಲೆಗಳು ಕಳುವಾಗಿದೆ. ಇದು ಬಹಳ ಸೂಕ್ಷ್ಮ ವಿಚಾರವಾಗಿದ್ದು, ಈ ಕುರಿತು ತನಿಖೆ ಮಾಡುತ್ತಿದ್ದೇವೆ ಎಂದು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಹೇಳಿಕೆ ನೀಡಿದ್ದಾರೆ.
ರಫೇಲ್ ಡೀಲ್ ದಾಖಲೆಗಳನ್ನು ಕಳುವು ಮಾಡಿದವರೇ ಅದರ ಮಾಹಿತಿ ಸೋರಿಕೆಯಾಗುವಂತೆ ಮಾಡಿದ್ದರು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೇಳಿದೆ.
ಸೋರಿಕೆಯಾದ ರಫೇಲ್ ಡೀಲ್ ದಾಖಲೆಗಳನ್ನು ಪ್ರಕಟಿಸಿದ ಪತ್ರಿಕೆಗಳ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಹೇಳಿದೆ
ರಫೇಲ್ ಒಪ್ಪಂದದ ಜಂಟಿ ಸಂಸದೀಯ ಸಮಿತಿ ತನಿಖೆಗೆ ನಿರಾಕರಿಸಿ ಎಲ್ಲ ಅರ್ಜಿಗಳನ್ನು ವಜಾಗೊಳಿಸಿದ್ದ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಕೇಂದ್ರದ ಮಾಜಿ ಸಚಿವರಾದ ಅರುಣ್ ಶೌರಿ ಮತ್ತು ಯಶವಂತ್ ಸಿನ್ಹಾ ಅವರೊಂದಿಗೆ ವಕೀಲ ಪ್ರಶಾಂತ್ ಭೂಷಣ್ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.
ಫ್ರಾನ್ಸ್ ನಿಂದ 36 ರಫೇಲ್ ಯುದ್ಧ ವಿಮಾನಗಳನ್ನು ಕೊಳ್ಳುವಾಗ ಕೇಂದ್ರ ಸರಕಾರದ ನಿರ್ಧಾರದಲ್ಲಿ ಯಾವುದೇ ಖಚಿತತೆ ಇರಲಿಲ್ಲ ಎಂದು ಆರೋಪಿಸಿ ಹೂಡಲಾಗಿದ್ದ ಸಾರ್ವಜನಿಕ ಹಿತರಕ್ಷಣಾ ಅರ್ಜಿ ಸೇರಿದಂತೆ ಎಲ್ಲ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯ ಡಿಸೆಂಬರ್ 14ರಂದು ವಜಾ ಮಾಡಿತ್ತು.

ನಂತರ ಫೆಬ್ರವರಿ 21 ರಂದು ಮತ್ತೆ ರಫೇಲ್ ತೀರ್ಪಿನ ಮರುಪರಿಶೀಲನೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಅದರ ವಿಚಾರಣೆ ಇಂದು ನಡೆಯಲಿದೆ.












Click it and Unblock the Notifications