ಬಿಜೆಪಿಯಲ್ಲಿ ಮಾತ್ರ ಕ್ಯಾಬಿನೆಟ್ ಒಪ್ಪಿಗೆ ಇಲ್ಲದೆ ಕಾಯ್ದೆ ರಚಿಸಬಹುದು, ತೆಗೆದು ಹಾಕಬಹುದು
ನವದೆಹಲಿ, ನವೆಂಬರ್ 20: ಸಚಿವ ಸಂಪುಟದ ಪೂರ್ವಾನುಮತಿ ಇಲ್ಲದೆಯೇ ಕೃಷಿ ಕಾಯ್ದೆ ರದ್ಧತಿಯಂತಹ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿರುವ ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಟೀಕಿಸಿದ್ದಾರೆ.
ಸಂಸತ್ತಿನಲ್ಲಿ ಸರಿಯಾದ ಕಾರ್ಯವಿಧಾನದೊಂದಿಗೆ ಕೇಂದ್ರವು ಎಲ್ಲಾ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದರು. ಮೋದಿಯವರ ಘೋಷಣೆಯನ್ನು ಉಲ್ಲೇಖಿಸಿ, ಪ್ರಧಾನಿ ಮೋದಿಯನ್ನು ಗುರಿಯಾಗಿಸಿಕೊಂಡು ಪಿ. ಚಿದಂಬರಂ ಶನಿವಾರ ಟ್ವೀಟ್ ಮಾಡಿದ್ದಾರೆ.
"ಪ್ರಧಾನಿ (ಮೋದಿ) ಕ್ಯಾಬಿನೆಟ್ ಸಭೆ ನಡೆಸದೆ ಘೋಷಣೆ ಮಾಡಿರುವುದನ್ನು ನೀವು ಗಮನಿಸಿದ್ದೀರಾ? ಬಿಜೆಪಿಯಲ್ಲಿ ಮಾತ್ರ ಕ್ಯಾಬಿನೆಟ್ ಅನುಮೋದನೆಯಿಲ್ಲದೆ ಕಾನೂನುಗಳನ್ನು ರಚಿಸಬಹುದು ಮತ್ತು ತೆಗೆದು ಹಾಕಬಹುದು," ಎಂದು ಪಿ. ಚಿದಂಬರಂ ವಾಗ್ದಾಳಿ ನಡೆಸಿದರು.
ಶುಕ್ರವಾರ ಬೆಳಗ್ಗೆ ಪ್ರಧಾನಿ ಮೋದಿಯವರ ಭಾಷಣದ ಕುರಿತು ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮಾಡಿದ ಟ್ವೀಟ್‌ಗಳ ವಿರುದ್ಧವೂ ಪಿ. ಚಿದಂಬರಂ ಕಿಡಿಕಾರಿದ್ದಾರೆ.
"ಗೃಹ ಸಚಿವ ಅಮಿತ್ ಶಾ ಪ್ರಧಾನಿಯವರ ಘೋಷಣೆಯನ್ನು 'ಅದ್ಭುತ ರಾಜನೀತಿವಂತಿಕೆ' ತೋರಿಸುತ್ತಿದೆ ಎಂದು ಶ್ಲಾಘಿಸಿದ್ದಾರೆ. ಬಿಜೆಪಿ ಅಧ್ಯಕ್ಷರು 'ರೈತರ ಬಗ್ಗೆ ಅಪಾರ ಕಾಳಜಿ' ಹೊಂದಿದ್ದಾರೆ ಎಂದು ಹೇಳಿದ್ದಾರೆ, 'ರೈತರ ಕಲ್ಯಾಣ'ವನ್ನು ಪರಿಗಣಿಸಿ ಪ್ರಧಾನಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ರಕ್ಷಣಾ ಸಚಿವರು ಹೇಳಿದರು. ಕಳೆದ 15 ತಿಂಗಳುಗಳಲ್ಲಿ ಈ ಯೋಗ್ಯ ನಾಯಕರು ಮತ್ತು ಅವರ ಬುದ್ಧಿವಂತ ಸಲಹೆಗಳು ಇವೆನಾ?," ಎಂದು ಪಿ. ಚಿದಂಬರಂ ಪ್ರಶ್ನಿಸಿದ್ದಾರೆ.

ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಪ್ರಧಾನಿ ಮೋದಿ ಶುಕ್ರವಾರ ಘೋಷಿಸಿದರು. ಮೂರು ಕಾನೂನುಗಳ ಪ್ರಯೋಜನಗಳ ಕುರಿತು 'ಸತ್ಯ' ದ ಬಗ್ಗೆ ರೈತರ ಒಂದು ಭಾಗಕ್ಕೆ 'ಮನವರಿಕೆ' ಮಾಡಲು ಸಾಧ್ಯವಾಗದ ಕೇಂದ್ರ ಸರ್ಕಾರಕ್ಕೆ ಮೋದಿ ದೇಶದ ಜನರಲ್ಲಿ ಕ್ಷಮೆಯಾಚಿಸಿದರು.
ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, ಪ್ರಧಾನಿ ಮೋದಿಯವರು, ಪ್ರತಿಭಟಿಸುತ್ತಿರುವ ರೈತರು ತಮ್ಮ ಹೊಲಗಳಿಗೆ ಮತ್ತು ಕುಟುಂಬಗಳಿಗೆ ಮರಳಲು ಮತ್ತು ಈ ಶುಭ ಸಂದರ್ಭದಲ್ಲಿ ಹೊಸ ಆರಂಭವನ್ನು ಮಾಡುವಂತೆ ಒತ್ತಾಯಿಸಿದರು. ಈ ದಿನದಂದು ದೇಶದಾದ್ಯಂತ ಗುರುದ್ವಾರಗಳಲ್ಲಿ ಹಬ್ಬವನ್ನು ಆಚರಿಸಲು ಮನವಿ ಮಾಡಿದರು.
"ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಿ ಲಕ್ಷಾಂತರ ರೈತರು ಒಂದು ವರ್ಷದಿಂದ ದೆಹಲಿಯ ಗಡಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಕೃಷಿ ಕಾನೂನಿಗೆ ಸಂಬಂಧಿಸಿದಂತೆ ಪ್ರತಿಭಟನಾ ನಿರತ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಹಲವು ಸುತ್ತಿನ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನ ಕಾಣಲಿಲ್ಲ."
"ಆದಾಗ್ಯೂ, ಕೇಂದ್ರವು ಈಗ ಮೂರು ಕಾನೂನುಗಳನ್ನು ಹಿಂಪಡೆಯಲಿದೆ ಮತ್ತು ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಕಾನೂನುಗಳನ್ನು ರದ್ದುಗೊಳಿಸುವ ಪ್ರಕ್ರಿಯೆಯು ಪ್ರಾರಂಭವಾಗಲಿದೆ," ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾರವನ್ನು 'ರೈತರು ಮತ್ತು ಕಾಂಗ್ರೆಸ್‌ಗೆ ದೊಡ್ಡ ಗೆಲುವು' ಎಂದು ಕರೆದಿರುವ ಪಿ. ಚಿದಂಬರಂ ಶುಕ್ರವಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ಕ್ರಮವು ಹೃದಯ ಬದಲಾವಣೆಯಿಂದ ಪ್ರೇರಿತವಾಗಿಲ್ಲ, ಆದರೆ "ಚುನಾವಣೆಯ ಭಯದಿಂದ ಪ್ರೇರೇಪಿಸಲ್ಪಟ್ಟಿದೆ,'' ಎಂದು ಹೇಳಿದರು.