ಪೆಗಾಸಸ್ ಹಗರಣ: ಸರ್ಕಾರಕ್ಕೆ ಸಮಯಾವಕಾಶ, ಅರ್ಜಿದಾರರಿಗೆ ಸುಪ್ರೀಂಕೋರ್ಟ್ ಸಂದೇಶ
ನವದೆಹಲಿ, ಆಗಸ್ಟ್ 10: ಇಸ್ರೇಲಿನ ಪೆಗಾಸಸ್ ತಂತ್ರಾಂಶದ ಬಳಸಿ ಬೇಹುಗಾರಿಕೆ ನಡೆಸಿರುವ ಹಗರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿ ಬಹಿರಂಗವಾಗಿ ಚರ್ಚಿಸದಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.
ಪೆಗಾಸಸ್ ಬೇಹುಗಾರಿಕೆಯ ಹಗರಣ ಕುರಿತು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಮಂಗಳವಾರ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ್ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು. ಅರ್ಜಿದಾರರು ಒಂದು ವ್ಯವಸ್ಥೆಯನ್ನು ನೆಚ್ಚಿಕೊಂಡ ಮೇಲೆ ಅದರ ಮೇಲೆ ವಿಶ್ವಾಸವಿಡಬೇಕು ಎಂದು ಕೋರ್ಟ್ ಹೇಳಿದೆ.
"ವಿರೋಧ ಪಕ್ಷ ನಾಯಕರು, ಹಿರಿಯ ಪತ್ರಕರ್ತರು ಸೇರಿದಂತೆ ಯಾರೇ ಆಗಿರಲಿ, ಒಂದು ಬಾರಿ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋದ ಮೇಲೆ ನೀವು ಹೇಳುವುದೇನೇ ಇದ್ದರೂ ಅದನ್ನು ಕೋರ್ಟಿನಲ್ಲಿ ಪ್ರಸ್ತಾಪಿಸಬೇಕು. ಸಾಮಾಜಿಕ ಜಾಲತಾಣ ಸೇರಿದಂತೆ ಬೇರೆ ಯಾವುದೇ ವೇದಿಕೆಯಲ್ಲಿ ಪೆಗಾಸಸ್ ಬಗ್ಗೆ ಅರ್ಜಿದಾರರು ಚರ್ಚಿಸುವಂತಿಲ್ಲ," ಎಂದು ಕೋರ್ಟ್ ಸೂಚನೆ ನೀಡಿದೆ.
ಕೇಂದ್ರ ಸರ್ಕಾರದಿಂದ ಉತ್ತರ ನೀಡುವುದಕ್ಕೆ ಸಾಲಿಸಿಟರ ಜನರಲ್ ತುಷಾರ್ ಮೆಹ್ತಾ ಮತ್ತಷ್ಟು ಸಮಯಾವಕಾಶ ನೀಡುವಂತೆ ನ್ಯಾಯಾಲಯದ ಎದುರು ಮನವಿ ಸಲ್ಲಿಸಿದರು. ಈ ಹಿನ್ನೆಲೆ ಆಗಸ್ಟ್ 16ರಂದು ಮುಂದಿನ ವಿಚಾರಣೆ ನಡೆಸುವುದಾಗಿ ಕೋರ್ಟ್ ಆದೇಶಿಸಿದೆ.

ಪೆಗಾಸಸ್ ಅರ್ಜಿದಾರರಿಗೆ ಈ ಮೊದಲು ಸೂಚನೆ ನೀಡಿದ್ದ ಕೋರ್ಟ್
ಹಿರಿಯ ಪತ್ರಕರ್ತ ಎನ್ ರಾಮ್, ಶಶಿಕುಮಾರ್, ಸಿಪಿಎಂ ಸಂಸದ ಜಾನ್ ಬ್ರಿತ್ತಾಸ್ ಹಾಗೂ ವಕೀಲ ಎಂಎಲ್ ಶರ್ಮಾ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್ ವಿ ರಮಣ್ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ದ್ವಿಸದಸ್ಯ ಪೀಠವು ಈ ಹಿಂದೆ ವಿಚಾರಣೆ ನಡೆಸಿತು. ನ್ಯಾಯಾಲಯಕ್ಕೆ ನೀಡಿರುವ ಅರ್ಜಿಯ ಅಂಶವನ್ನು ಒಳಗೊಂಡ ಒಂದು ಪ್ರತಿಯನ್ನು ಕೇಂದ್ರ ಸರ್ಕಾರಕ್ಕೆ ನೀಡುವಂತೆ ಅರ್ಜಿದಾರರಿಗೆ ಕೋರ್ಟ್ ಸೂಚಿಸಿತ್ತು.

ಬೇಹುಗಾರಿಕೆ ಶಿಕ್ಷಾರ್ಹ ಅಪರಾಧ ಎಂದು ಉಲ್ಲೇಖ
ಫೋನ್ ಕರೆಗಳನ್ನು ಹ್ಯಾಕ್ ಮಾಡುವುದು ಕೂಡ ಅಪರಾಧಿ ಕೃತ್ಯವಾಗುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಇಂಥ ಕೃತ್ಯಕ್ಕೆ ಕಂಪ್ಯೂಟರ್ ಸಂಬಂಧಿತ ಅಪರಾಧ ಕಾಯ್ದೆ 66, ಕಂಪ್ಯೂಟರ್ ಅಥವಾ ಸಂವಹನ ಸಾಧನದಿಂದ ಸಂಪನ್ಮೂಲಗಳ ಕಳ್ಳತನ ಅಪರಾಧ ಕಾಯ್ದೆ 66ಬಿ, ಖಾಸಗಿತನದ ಉಲ್ಲಂಘನೆ ಕಾಯ್ದೆ 66ಇ ಮತ್ತು ಸೈಬರ್ ಭಯೋತ್ಪಾದನೆ ಶಿಕ್ಷೆ ಕಾಯ್ದೆಯ 66ಎಫ್ ಐಟಿ ಕಾಯ್ದೆಯ ಅಡಿಯಲ್ಲಿ ಜೈಲುಶಿಕ್ಷೆ ಅಥವಾ ದಂಡವನ್ನು ವಿಧಿಸಬೇಕಾಗುತ್ತದೆ.

ಬೇಹುಗಾರಿಕೆ ನಡೆಸಲು ಇಸ್ರೇಲ್ ತಂತ್ರಾಂಶದ ದುರ್ಬಳಕೆ
ಜಾಗತಿಕ ತನಿಖಾ ಸಂಸ್ಥೆಗಳು ಮಾಡಿರುವ ವರದಿಯ ಪ್ರಕಾರ, ಕೇಂದ್ರ ಸರ್ಕಾರಕ್ಕೆ ಮಾರಾಟವಾಗಿರುವ ಇಸ್ರೇಲಿನ ಬೇಹುಗಾರಿಕೆ ತಂತ್ರಾಂಶವನ್ನು ಬಳಸಿಕೊಂಡು ವಿರೋಧ ಪಕ್ಷದ ಹಲವು ನಾಯಕರ ಮೇಲೆ ಕಣ್ಗಾವಲು ಇಡಲಾಗಿದೆ. ದೇಶದ ಪ್ರಮುಖ 142ಕ್ಕೂ ಹೆಚ್ಚು ರಾಜಕೀಯ ವ್ಯಕ್ತಿಗಳ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂಬ ವರದಿಯ ಬಗ್ಗೆ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ, ದೇಶದ 300ಕ್ಕೂ ಹೆಚ್ಚು ಪ್ರಮುಖ ರಾಜಕಾರಣಿಗಳು, ಕೇಂದ್ರ ಸಚಿವರು, ನ್ಯಾಯಾಧೀಶರು ಹಾಗೂ ಪತ್ರಕರ್ತರ ಮೊಬೈಲ್ ಸಂಖ್ಯೆ ಹ್ಯಾಕ್ ಮಾಡಲಾಗುತ್ತಿದೆ. ಈ ಬೇಹಾಗಾರಿಕೆಗೆ ಒಳಗಾದವರ ಪಟ್ಟಿಯಲ್ಲಿ ಸ್ವತಃ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿ, ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್, ಕೇಂದ್ರ ಸಚಿವರಾದ ಪ್ರಹ್ಲಾದ್ ಪಟೇಲ್ ಮತ್ತು ಅಶ್ವಿನಿ ವೈಷ್ಣವ್ ಜೊತೆಗೆ 40 ಮಂದಿ ಪತ್ರಕರ್ತರ ಹೆಸರು ಕೂಡ ಸೇರಿದೆ.

ಇಸ್ರೇಲ್ ಕಂಪನಿ ಜೊತೆ ಯಾವುದೇ ವಹಿವಾಟು ಇಲ್ಲ
ಪೆಗಾಸಸ್ ಬೇಹುಗಾರಿಕೆ ತಂತ್ರಾಂಶ ಬಳಕೆಗೆ ಸಂಬಂಧಿಸಿದಂತೆ ಇಸ್ರೇಲ್ ಮೂಲದ ಎನ್ಎಸ್ಓ ಕಂಪನಿಯ ಜೊತೆಗೆ ಯಾವುದೇ ರೀತಿಯ ವಹಿವಾಟು ಇಟ್ಟುಕೊಂಡಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಸ್ಪಷ್ಟವಾಗಿ ಹೇಳಿದೆ. ಮುಂಗಾರು ಅಧಿವೇಶನದಲ್ಲಿ ಭಾರಿ ಸದ್ದು ಗದ್ದಲಕ್ಕೆ ಕಾರಣವಾದ ಪೆಗಾಸಸ್ ಕುರಿತು ಪ್ರಶ್ನೆಗೆ ಉತ್ತರಿಸಲಾಗಿದೆ. ಇಸ್ರೇಲ್ ಎನ್ಎಸ್ಓ ಕಂಪನಿ ಜೊತೆಗೆ ಪೆಗಾಸಸ್ ಕುರಿತು ನಡೆಸಿರುವ ವಹಿವಾಟು ಯಾವ ಸ್ವರೂಪದಲ್ಲಿದೆ ಎಂಬ ಬಗ್ಗೆ ಸಿಪಿಎಂ ಸಂಸದ ಡಾ ವಿ ಶಿವದರ್ಶನ್ ಸರ್ಕಾರವನ್ನು ಪ್ರಶ್ನೆ ಮಾಡಿದ್ದರು. ಸಂಸದರ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಸೋಮವಾರ ಸಚಿವಾಲಯದಿಂದ ಉತ್ತರ ನೀಡಲಾಗಿತ್ತು. ಕೇಂದ್ರ ಗೃಹ ಸಚಿವಾಲಯವು ಎನ್ಎಸ್ಓ ಗ್ರೂಪ್ ಟೆಕ್ನಾಲಜಿ ಜೊತೆಗೆ ಯಾವುದೇ ರೀತಿಯ ವಹಿವಾಟುಗಳನ್ನು ಇಟ್ಟುಕೊಂಡಿಲ್ಲ ಎಂದು ಕಿರಿಯ ರಕ್ಷಣಾ ಸಚಿವ ಅಜಯ್ ಭಟ್ ಲಿಖಿತ ಹಾಗೂ ಪ್ರತಿಕ್ರಿಯೆ ರೂಪದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಜಾಗತಿಕ ಮಾಧ್ಯಮಗಳಲ್ಲಿ ಬೇಹುಗಾರಿಕೆ ವರದಿ
ಜಾಗತಿಕ ಸುದ್ದಿ ಸಂಸ್ಥೆಗಳಾಗಿರುವ ವಾಶಿಂಗ್ಟನ್ ಪೋಸ್ಟ್, ದಿ ಗಾರ್ಡಿಯನ್, ಲೇ ಮೊಂಡೆ ಜೊತೆ ಸಹಯೋಗ ಹೊಂದಿರುವ 'ದಿ ವೈರ್' ಪೆಗಾಸಸ್ ಬೇಹುಗಾರಿಕೆ ಕುರಿತು ವಿಸ್ತೃತ ವರದಿಯನ್ನು ಪ್ರಕಟಿಸಿತ್ತು. ಮಾಧ್ಯಮ ಪಾಲುದಾರ ಸಂಸ್ಥೆ ಆಗಿರುವ ಪ್ಯಾರಿಸ್ ಮೂಲದ 'ನಾನ್ ಪ್ರಾಫಿಟ್ ಆರ್ಗನೈಸೇಷನ್ ಫಾರ್ಬಿಡನ್ ಸ್ಟೋರೀಸ್ ಮತ್ತು ರೈಟ್ಸ್ ಗ್ರೂಪ್ ಅಮ್ನೆಸ್ಟಿ ಇಂಟರ್ ನ್ಯಾಷನಲ್' ಸಂಸ್ಥೆಗಳು ಈ ಕುರಿತು ತನಿಖೆ ನಡೆಸಿದ್ದವು ಎಂದು ವರದಿಯಲ್ಲಿ ಉಲ್ಲೇಖಿಸಿವೆ. ಇಸ್ರೇಲ್ ಕಣ್ಗಾವಲು ಕಂಪನಿ ಎನ್‌ಎಸ್‌ಒ ಗ್ರೂಪ್‌ನ ಪೆಗಾಸಸ್ ತಂತ್ರಾಂಶವನ್ನು ಬಳಸಿಕೊಂಡು ಜಗತ್ತಿನಾದ್ಯಂತ ಸಾವಿರಾರು ಗಣ್ಯರ ಮೊಬೈಲ್ ಸಂಖ್ಯೆಯನ್ನು ಕದಿಯಲಾಗಿದೆ ಎಂದು ತನಿಖಾ ವರದಿಯಿಂದ ಗೊತ್ತಾಗಿದೆ. ವಿಶ್ವದಲ್ಲಿ ಒಟ್ಟು 50,000ಕ್ಕೂ ಅಧಿಕ ಮೊಬೈಲ್ ಸಂಖ್ಯೆಗಳನ್ನು ಕದ್ದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications