ದೆಹಲಿಯಲ್ಲಿ ಮತ್ತೆ ಸಮ-ಬೆಸ ಕಾರುಗಳ ಯೋಜನೆ ಶೀಘ್ರವೇ ಜಾರಿ
ನವದೆಹಲಿ, ಡಿಸೆಂಬರ್ 25: ತೀವ್ರಗೊಂಡಿರುವ ವಾಯುಮಾಲಿನ್ಯವನ್ನು ನಿಯಂತ್ರಿಸಲು ರಾಜಧಾನಿಯಲ್ಲಿ ಸಮ-ಬೆಸ ಸಂಖ್ಯೆಯ ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡುವ ಯೋಜನೆಯನ್ನು ಮತ್ತೆ ಜಾರಿಗೆ ತರುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿಯಲ್ಲಿ ವಿಪರೀತಗೊಂಡಿರುವ ವಾಹನ ದಟ್ಟಣೆ ಮತ್ತು ವಾಯುಮಾಲಿನ್ಯದ ಸಮಸ್ಯೆಗೆ ಪರಿಹಾರವಾಗಿ ಒಂದು ದಿನ ಸಮ ಸಂಖ್ಯೆಯಿಂದ ಅಂತ್ಯವಾಗುವ ಹಾಗೂ ಮತ್ತೊಂದು ದಿನ ಬೆಸ ಸಂಖ್ಯೆಯಿಂದ ಅಂತ್ಯವಾಗುವ ನಂಬರ್ ಉಳ್ಳ ವಾಹನಗ ಓಡಾಟಕ್ಕೆ ಮಾತ್ರ ಅವಕಾಶ ಕಲ್ಪಿಸುವ (ಆಡ್ ಈವನ್) ಯೋಜನೆಯನ್ನು 2015ರಲ್ಲಿ ಕೇಜ್ರಿವಾಲ್ ಜಾರಿ ಮಾಡಿದ್ದರು.
ಈ ಯೋಜನೆಯಿಂದ ಮಾಲಿನ್ಯದ ಪ್ರಮಾಣ ತಕ್ಕಮಟ್ಟಿಗೆ ಕಡಿಮೆಯಾಗಿತ್ತು ಎನ್ನಲಾಗಿದೆ. ಆದರೆ, ಇದರಿಂದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರಿಂದ ವಿವಾದವೂ ತಲೆದೋರಿತ್ತು.

ಕಲುಷಿತ ಗಾಳಿ ಪ್ರಮಾಣವನ್ನು ಕಡಿಮೆ ಮಾಡಲು ಸರ್ಕಾರದೊಂದಿಗೆ ಕೈಜೋಡಿಸುವಂತೆ ಜನರಿಗೆ ಮನವಿ ಮಾಡಿರುವ ಕೇಜ್ರಿವಾಲ್, 'ಅಗತ್ಯ ಬಿದ್ದರೆ ರಾಜಧಾನಿಯಲ್ಲಿ ಸಮ-ಬೆಸ ಯೋಜನೆಯನ್ನು ಶೀಘ್ರದಲ್ಲಿಯೇ ಜಾರಿಗೊಳಿಸಲಾಗುವುದು' ಎಂದು ತಿಳಿಸಿದ್ದಾರೆ.
ನಗರವನ್ನು ಹೆಚ್ಚು ಸ್ವಚ್ಛ ಮತ್ತು ಹಸಿರುಮಯಗೊಳಿಸಲು ಶೀಘ್ರದಲ್ಲಿಯೇ 3 ಸಾವಿರ ಪರಿಸರ ಸ್ನೇಹಿ ಬಸ್‌ಗಳ ಸಂಚಾರಕ್ಕೆ ಚಾಲನೆ ನೀಡಲಾಗುವುದು. ಮಾಲಿನ್ಯದ ವಿರುದ್ಧ ಹೋರಾಟಕ್ಕೆ ನಮ್ಮ ಸರ್ಕಾರ ಎಲ್ಲ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ದೆಹಲಿಯಲ್ಲಿ ಅಪಾರ ಸಂಖ್ಯೆಯನ್ನು ಮರಗಳನ್ನು ಬೆಳೆಸಲಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications