ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಚುನಾವಣಾ ಆಯೋಗದ ಉತ್ತರ
ನವದೆಹಲಿ, ಫೆಬ್ರವರಿ.09: ಶನಿವಾರ ನಡೆದ ದೆಹಲಿ ವಿಧಾನಸಭಾ ಚುನಾವಣೆ-2020 ರಲ್ಲಿ ಶೇ.62.59ರಷ್ಟು ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ದೆಹಲಿ ಆಯೋಗದಿಂದ ಯಾವುದೇ ರೀತಿ ವಿಳಂಬಧೋರಣೆ ತೋರಿಸಿಲ್ಲ ಎಂದು ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.
ಇದಕ್ಕೂ ಮುನ್ನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶೇಕಡಾವಾರು ಮತದಾನ ಪ್ರಮಾಣ ಘೋಷಣೆಯಲ್ಲಿ ವಿಳಂಬ ಏಕೆ ಎಂದು ಪ್ರಶ್ನಿಸಿದ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಭಾನುವಾರ ನವದೆಹಲಿಯಲ್ಲಿ ಚುನಾವಣಾ ಆಯೋಗದ ಅಧ್ಯಕ್ಷ ರಂಬೀರ್ ಸಿಂಗ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಕಳೆದ ಲೋಕಸಭಾ ಚುನಾವಣೆಗೆ ಹೋಲಿಕೆ ಮಾಡಿ ನೋಡಿದಾಗ ವಿಧಾನಸಭಾ ಚುನಾವಣೆಯಲ್ಲಿ ಶೇ.2ರಷ್ಟು ಮತದಾನದ ಪ್ರಮಾಣ ಏರಿಕೆಯಾಗಿದೆ ಎಂದು ಚುನಾವಣಾ ಆಯುಕ್ತರು ತಿಳಿಸಿದರು.
ದೆಹಲಿಯ ಬಲ್ಲಿಮರನ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಶೇ.71.6ರಷ್ಟು ಮತದಾನವೇ ದಾಖಲೆಯಾಗಿದ್ದು, ದೆಹಲಿ ಕಂಟೋನ್ ಮೆಂಟ್ ವಿಧಾನಸಭಾ ಕ್ಷೇತ್ರದಲ್ಲಿ ಅತಿಕಡಿಮೆ ಎಂದರೆ ಶೇ.45.4ರಷ್ಟು ಮತದಾನ ನಡೆದಿದೆ ಎಂದು ಚುನಾವಣಾ ಆಯುಕ್ತರು ಮಾಹಿತಿ ನೀಡಿದರು.

ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಅಸ್ತ್ರ:
ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ಮತದಾನ ಮುಗಿದರೂ ರಾಜ್ಯ ಚುನಾವಣಾ ಆಯೋಗವು ಅಧಿಕೃತ ಮತದಾನದ ಪ್ರಮಾಣವನ್ನು ಏಕೆ ಬಿಡುಗಡೆ ಮಾಡಿಲ್ಲ. ಈ ವಿಳಂಬ ನೀತಿ ಏಕೆ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು. ಚುನಾವಣಾ ಆಯೋಗದ ಕ್ರಮ ನನ್ನಲ್ಲಿ ಆಘಾತವನ್ನು ಉಂಟು ಮಾಡಿದೆ ಎಂದು ಟ್ವಿಟ್ಟರ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದಕ್ಕೂ ಮುನ್ನದಿನ ಸಂಜೆ ದೆಹಲಿ ಚುನಾವಣಾ ಮತದಾನ ಮುಕ್ತಾಯವಾಗುತ್ತಿದ್ದಂತೆ ಅಂದಾಜು ಶೇ.61.46ರಷ್ಟು ಮತದಾನ ನಡೆದಿರುವ ಬಗ್ಗೆ ಪ್ರಾಥಮಿಕವಾಗಿ ಮಾಹಿತಿಯನ್ನು ನೀಡಲಾಗಿತ್ತು. ಆದರೆ, ಅಧಿಕೃತವಾಗಿ ಎಷ್ಟು ಮತದಾನ ಆಗಿದೆ ಎಂಬುದರ ಬಗ್ಗೆ ಚುನಾವಣಾ ಆಯೋಗವು ತಿಳಿಸಿರಲಿಲ್ಲ.












Click it and Unblock the Notifications