ಕೃಷಿ ಕಾಯ್ದೆ ಪ್ರತಿಭಟನೆಯಲ್ಲಿ ರೈತರು ಸತ್ತಿಲ್ಲ ಎಂದ ಕೇಂದ್ರ ಸರ್ಕಾರ
ನವದೆಹಲಿ, ಡಿಸೆಂಬರ್ 10: ಕೃಷಿ ಕಾಯ್ದೆಯ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು ಕೈಗೊಂಡ ಕ್ರಮದಿಂದಾಗಿ ಸಾವನ್ನಪ್ಪಿಲ್ಲ ಎಂದು ಕೇಂದ್ರ ಸರ್ಕಾರ ಚಳಿಗಾಲದ ಅಧಿವೇಶನದಲ್ಲಿ ಹೇಳಿದೆ. ಇತ್ತೀಚೆಗೆ ರದ್ದಾದ ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಸುಮಾರು 700 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ರೈತರು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ಜಾರಿ ಮಾಡಿದ ಬಳಿಕ ಕಳೆದ ವರ್ಷ ನವೆಂಬರ್ 26 ರಿಂದ ರೈತರು ಪ್ರತಿಭಟನೆಯನ್ನು ಆರಂಭ ಮಾಡಿದ್ದಾರೆ. ಒಂದು ವರ್ಷಗಳ ಕಾಲ ದೆಹಲಿಯ ಗಡಿಯಲ್ಲಿ ಸುದೀರ್ಘ ಪ್ರತಿಭಟನೆಯನ್ನು ಮಾಡಿದ್ದಾರೆ. ಇತ್ತೀಚೆಗೆ ಚಳಿಗಾಲ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಈ ಮೂರು ಕೃಷಿ ಕಾಯ್ದೆಯನ್ನು ರದ್ದು ಮಾಡುವ ಮಸೂದೆಯನ್ನು ಅಂಗೀಕಾರ ಮಾಡಿದೆ. ಈ ಬೆನ್ನಲ್ಲೇ ಗುರುವಾರವಷ್ಟೇ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಪ್ರತಿಭಟನೆಯನ್ನು ಸ್ಥಗಿತ ಮಾಡಿಸಿದೆ.
ಇನ್ನು ರಾಜ್ಯಸಭೆಯಲ್ಲಿ ಮಾತನಾಡಿದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, "ಈಗ ಮುಖ್ಯವಾದ ವಿಚಾರ ಇರುವುದು ಪರಿಹಾರ ನೀಡುವುದು ಹಾಗೂ ಮೊದಲಾದವುಗಳು. ಸಾವನ್ನಪ್ಪಿದ ರೈತರ ಕುಟುಂಬಕ್ಕೆ ಪರಿಹಾರವನ್ನು ನೀಡುವುದು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ವಿಚಾರ. ಅಷ್ಟಕ್ಕೂ ಪೊಲೀಸರು ಕೈಗೊಂಡ ಕ್ರಮದಿಂದಾಗಿ ಯಾವ ರೈತರು ಕೂಡಾ ಸಾವನ್ನಪ್ಪಿಲ್ಲ," ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕ ಧೀರಜ್ ಪ್ರಸಾದ್ ಸಾಹು ಹಾಗೂ ಎಎಪಿ ನಾಯಕ ಸಂಜಯ್ ಸಿಂಗ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ತೋಮರ್ ಈ ಪ್ರತಿಕ್ರಿಯೆ ನೀಡಿದ್ದಾರೆ. ಕೃಷಿ ಕಾಯ್ದೆ ಪ್ರತಿಭಟನೆಯಲ್ಲಿ ಸಾವನ್ನಪ್ಪಿದ ರೈತರ ಕುಟುಂಬಕ್ಕೆ ಪರಿಹಾರ ನೀಡುವ ವಿಚಾರದಲ್ಲಿ ಧೀರಜ್ ಪ್ರಸಾದ್ ಸಾಹು ಹಾಗೂ ಸಂಜಯ್ ಸಿಂಗ್ ಪ್ರಶ್ನೆ ಕೇಳಿದ್ದಾರೆ.
ಇನ್ನು ಕನಿಷ್ಠ ಬೆಂಬಲ ಬೆಲೆ ವಿಚಾರವಾಗಿ ಮಾತನಾಡಿದ ಕೃಷಿ ಸಚಿವ ತೋಮರ್, "ಕನಿಷ್ಠ ಬೆಂಬಲ ಬೆಲೆಯ ವಿಚಾರವನ್ನು ಹೆಚ್ಚು ಪ್ರಭಾವಿತ ಹಾಗೂ ಪಾರದರ್ಶಕವನ್ನಾಗಿಸಲು ನಾವು ಕ್ರಮಕೈಗೊಳ್ಳುತ್ತೇವೆ. ಸರ್ಕಾರ ಈಗಾಗಲೇ ನ್ಯಾಷನಲ್ ಕಮಿಷನ್ ಆನ್ ಫಾರ್ಮಸ್ ಅನ್ನು ಸಲಹೆಯನ್ನು ಪಡೆದಿದೆ" ಎಂದಿದ್ದಾರೆ.
ಹಲವು ಬೇಡಿಕೆಗಳನ್ನು ಮುಂದಿಟ್ಟ ರೈತರು
ಕೃಷಿ ಕಾಯ್ದೆಯನ್ನು ರದ್ದು ಮಾಡಿದ ಬಳಿಕ ತನ್ನ ಪ್ರತಿಭಟನೆಯನ್ನು ವಾಪಸ್ ಪಡೆದುಕೊಂಡ ಸಂಯುಕ್ತ ಕಿಸಾನ್ ಮೋರ್ಚಾವು ಕೇಂದ್ರ ಸರ್ಕಾರದ ಮುಂದೆ ಹಲವಾರು ಬೇಡಿಕೆಗಳನ್ನು ಇಟ್ಟಿದೆ. ಪ್ರತಿಭಟನೆಯಲ್ಲಿ ಸಾವನ್ನಪ್ಪಿದ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹ ಮಾಡಿದೆ. "ನಾವು ಡಿಸೆಂಬರ್ 11 ರಂದು ವಿಜಯ್ ದಿವಸ್ ಅನ್ನು ಆಚರಣೆ ಮಾಡುತ್ತೇವೆ. ವಿಜಯ ಮಾರ್ಚ್ ಅನ್ನು ಮಾಡಿ ಬಳಿಕ ಮನೆಗೆ ತೆರಳುತ್ತೇವೆ," 40 ರೈತ ಸಂಘಟನೆಗಳ ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ. ಇನ್ನು ರೈತರ ವಿರುದ್ಧ ಪ್ರಕರಣವನ್ನು ವಾಪಾಸ್ ಪಡೆಯಬೇಕು, ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾರ ಪುತ್ರನ ಕೈವಾಡ ಇರುವ ಹಿನ್ನೆಲೆ ಅಜಯ್ ಮಿಶ್ರಾರನ್ನು ವಜಾ ಮಾಡಬೇಕು ಎಂದು ಕೂಡಾ ರೈತರು ಬೇಡಿಕೆ ಮುಂದಿಟ್ಟಿದ್ದಾರೆ. ಇನ್ನು ಡಿಸೆಂಬರ್ 15 ರಂದು ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಡಿಸೆಂಬರ್ 11 ರಿಂದ ಸಿಂಘು ಗಡಿಯಿಂದ ರೈತರು ತೆರಳಲಿದ್ದಾರೆ.
ಇದರ ಮಧ್ಯೆ, ಸಂಸತ್ ಚಳಿಗಾಲದ ಅಧಿವೇಶನ ಆರಂಭಗೊಳ್ಳುವುದಕ್ಕೂ ಸ್ವಲ್ಪ ದಿನ ಮುಂಚಿತವಾಗಿ ವಿವಾದಿತ ಕೃಷಿ ಕಾನೂನು ವಾಪಸ್ ಪಡೆದುಕೊಳ್ಳುವುದಾಗಿ ಕೇಂದ್ರ ಘೋಷಣೆ ಮಾಡಿತ್ತು. ಇದಾದ ಬಳಿಕ ಕೂಡ ರೈತ ಸಂಘಟನೆಗಳು, ಕನಿಷ್ಠ ಬೆಂಬಲ ಬೆಲೆ ಘೋಷಣೆ, ರೈತರ ಮೇಲಿನ ಎಫ್ಐಆರ್ ಸೇರಿದಂತೆ ಅನೇಕ ವಿಚಾರವಾಗಿ ಕೇಂದ್ರಕ್ಕೆ ಪತ್ರ ಬರೆದಿತ್ತು. ಈ ಎಲ್ಲ ಬೇಡಿಕೆ ಈಡೇರಿಕೆ ಮಾಡುವುದಾಗಿ ಕೇಂದ್ರ ಸರ್ಕಾರ ಈಗಾಗಲೇ ತಿಳಿಸಿದೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications