ಗಲ್ಲು ಶಿಕ್ಷೆಗೆ 2 ದಿನ ಬಾಕಿ; ಮುಕೇಶ್ ಭವಿಷ್ಯ ಹೈಕೋರ್ಟ್‌ನಲ್ಲಿ
ನವದೆಹಲಿ, ಮಾರ್ಚ್ 18 : ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿ ಮುಕೇಶ್ ಸಿಂಗ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಪೂರ್ಣಗೊಳಿಸಿದೆ. ಮಾರ್ಚ್ 20ರಂದು ಆತನನ್ನು ಗಲ್ಲಿಗೇರಿಸಲು ಡೆತ್ ವಾರೆಂಟ್ ಜಾರಿಯಾಗಿದೆ.
ಬುಧವಾರ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿದ ದೆಹಲಿ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ಪ್ರಕರಣದ ನಡೆದ ದಿನ ನಾನು ದೆಹಲಿಯಲ್ಲಿಯೇ ಇರಲಿಲ್ಲ, ನನ್ನ ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸಿ ಎಂದು ಅರ್ಜಿಯಲ್ಲಿ ಅಪರಾಧಿ ಮಕೇಶ್ ಸಿಂಗ್ ಮನವಿ ಮಾಡಿದ್ದಾನೆ.
32 ವರ್ಷದ ಮುಕೇಶ್ ಸಿಂಗ್ ಪರವಾಗಿ ವಕೀಲ ಎಂ. ಎಲ್. ಶರ್ಮಾ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮಾರ್ಚ್ 20ರಂದು ಮುಕೇಶ್ ಸೇರಿದಂತೆ ಉಳಿದ ಮೂವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಲು ಡೆತ್ ವಾರೆಂಟ್ ಜಾರಿಯಾಗಿದೆ. ಈ ಪ್ರಕರಣದಲ್ಲಿ ಜಾರಿಯಾಗಿರುವ 4 ನೇ ಡೆತ್ ವಾರೆಂಟ್ ಇದು.

ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿ ಮುಕೇಶ್ ಸಿಂಗ್‌ನನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿತ್ತು. 2012 ಡಿಸೆಂಬರ್ 17ರಂದು ದೆಹಲಿಗೆ ಕರೆದುಕೊಂಡು ಬರಲಾಗಿತ್ತು.
ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮುಕೇಶ್ ಸಿಂಗ್ ತಿಹಾರ್ ಜೈಲಿನಲ್ಲಿ ನನಗೆ ಚಿತ್ರಹಿಂಸೆ ನೀಡಲಾಗಿದೆ. ಘಟನೆ ನಡೆದ ದಿನ ನಾನು ದೆಹಲಿಯಲ್ಲಿಯೇ ಇರಲಿಲ್ಲ ಎಂದು ಉಲ್ಲೇಖಿಸಿದ್ದ.
ಸೋಮವಾರ ಮುಕೇಶ್ ಸಿಂಗ್ ಸುಪ್ರೀಂಕೋರ್ಟ್‌ಗೆ ಅರ್ಜಿಯೊಂದನ್ನು ಸಲ್ಲಿಸಿದ್ದ. ಹೊಸ ಕ್ಯುರೆಟೀವ್ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದ. ಸುಪ್ರೀಂಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು.












Click it and Unblock the Notifications