ಕುತೂಹಲ ಹುಟ್ಟಿಸಿದ ಪರಮೇಶ್ವರ್, ನಿಲೇಕಣಿ ಭೇಟಿ!
ನವದೆಹಲಿ, ಡಿ. 18 : 'ಆಧಾರ್' ಮುಖ್ಯಸ್ಥ ನಂದನ್ ನಿಲೇಕಣಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಗಳ ನಡುವೆಯೇ ಅವರು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ್ದು, ಭಾರೀ ಕುತೂಹಲ ಮೂಡಿಸಿದೆ.
ನವದೆಹಲಿ ಪ್ರವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಮಂಗಳವಾರ ನಂದನ್ ನಿಲೇಕಣಿ ಭೇಟಿ ಮಾಡಿದರು. ಇದನ್ನು ಖಚಿತ ಪಡಿಸಿರುವ ಜಿ. ಪರಮೇಶ್ವರ್ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ನಿಲೇಕಣಿ ಚರ್ಚೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸಂಬಂಧ ನಿಲೇಕಣಿ ತಮ್ಮನ್ನು ಭೇಟಿ ಮಾಡಿದ್ದರು. ಚುನಾವಣೆಗೆ ಸಂಬಂಧಿಸಿದ ವಾಸ್ತವ ಸಂಗತಿಗಳನ್ನು ಅವರಿಗೆ ತಿಳಿಸಿದ್ದೇನೆ. ನಿಲೇಕಣಿ ಅವರು, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ಪ್ರತಿನಿಧಿಸುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ ಎಂದರು.[ಅನಂತ್ ಕುಮಾರ್ ವಿರುದ್ಧ ಐಟಿ ದಿಗ್ಗಜರು ಕಣಕ್ಕೆ]
ದೇಶದ ರಾಜಕೀಯದಲ್ಲಿ ಹೊಸ ಬದಲಾವಣೆಗಳು ಸಂಭವಿಸುತ್ತಿವೆ, ಇಂತಹ ಹೊತ್ತಿನಲ್ಲಿ ಹೊಸ ಮುಖಗಳು ರಾಜಕೀಯ ಪ್ರವೇಶ ಮಾಡುವುದನ್ನು ನಾವು ಸ್ವಾಗತಿಸುತ್ತೇವೆ ಎಂದು ಅವರ ಹೇಳಿದರು. ಪಕ್ಷದಲ್ಲಿಯೂ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ನಂದನ್ ನಿಲೇಕಣಿ ಸ್ಪರ್ಧಿಸಬೇಕು ಎಂಬ ಪ್ರಸ್ತಾಪವಿದೆ. ಆದರೆ, ಅವರಿಗೆ ಟಿಕೆಟ್ ನೀಡುವ ಕುರಿತು ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. [ಚುನಾವಣೆಯತ್ತ ನಿಲೇಕಣಿ]
ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾತುಕತೆ ನಡೆಸಿದರು. ಸೋನಿಯಾ ಭೇಟಿಯ ನಂತರ ಪರಮೇಶ್ವರ್ ಮತ್ತು ನಿಲೇಕಣಿ ಸುಮಾರು ಅರ್ಧ ಗಂಟೆ ಚರ್ಚೆ ನಡೆಸಿದ್ದಾರೆ. ಆದರೆ, ಭೇಟಿಯ ಬಗ್ಗೆ ನಿಲೇಕಣಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. [ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ: ಅಚ್ಚರಿಯ ಹೆಸರು?]
ಬೆಂಗಳೂರಿನಲ್ಲಿ ಅಪಸ್ವರ : ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ನಂದನ್ ನಿಲೇಕಣಿ ಅವರಿಗೆ ಟಿಕೆಟ್ ನೀಡುವುದಕ್ಕೆ ಬೆಂಗಳೂರಿನ ಕೆಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳೀಯರಿಗೆ ಟಿಕೆಟ್ ನೀಡಬೇಕು, ನಿಲೇಕಣಿ ಪಕ್ಷದ ಕಾರ್ಯಕರ್ತರರೊಂದಿಗೆ, ನಾಯಕರೊಂದಿಗೆ ಒಡನಾಟ ಹೊಂದಿಲ್ಲ ಅವರಿಗೆ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications