ವಿದೇಶ ಪ್ರವಾಸ ಮಾಡದಿದ್ದರು ದೆಹಲಿಯ ವ್ಯಕ್ತಿಗೆ ಮಂಕಿಪಾಕ್ಸ್ ಸೋಂಕು
ನವದೆಹಲಿ, ಜುಲೈ 25: ದೆಹಲಿಯಲ್ಲಿ ರಾಜ್ಯದ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ. ಇದು ದೇಶದಲ್ಲಿ ಪತ್ತೆಯಾದ ನಾಲ್ಕನೇ ಮಂಕಿಪಾಕ್ಸ್ ಪ್ರಕರಣವಾಗಿದೆ. ಈ ಮೊದಲು ಕೇರಳದಲ್ಲಿ ಮೂರು ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿದ್ದವು. 34 ವರ್ಷದ ಪಶ್ಚಿಮ ದೆಹಲಿ ನಿವಾಸಿಯೊಬ್ಬರಲ್ಲಿ ಮಂಕಿಪಾಕ್ಸ್ ಸೋಂಕು ಪತ್ತೆಯಾಗಿದೆ. ಇತರ ಮೂರು ಪ್ರಕರಣಗಳಲ್ಲಿ ವಿದೇಶದಿಂದ ಬಂದ ಪ್ರಯಾಣಿಕರಲ್ಲಿ ಸೋಂಕು ಕಾಣಿಸಿಕೊಂಡಿದ್ದರೆ. ದೆಹಲಿಯಲ್ಲಿ ಸೋಂಕು ಪತ್ತೆಯಾದ ವ್ಯಕ್ತಿ ರೋಗ ಪೀಡಿತ ದೇಶಗಳಿಗೆ ಪ್ರಯಾಣಿಸಿದ ಇತಿಹಾಸವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯ ಸೋಂಕಿತ ವ್ಯಕ್ತಿ ಕಳೆದ ತಿಂಗಳು ಹಿಮಾಚಲ ಪ್ರದೇಶಕ್ಕೆ ಸ್ನೇಹಿತರೊಂದಿಗೆ ರಜೆಯ ಮೇಲೆ ಹೋಗಿದ್ದರು. ನಂತರ ಅವರಲ್ಲಿ ಜ್ವರ ಕಾಣಿಸಿಕೊಂಡಿದೆ. ಹವಾಮಾನದ ಬದಲಾವಣೆಗಳಿಂದ ಕಾಯಿಲೆ ಉಂಟಾಗಬಹುದೆಂದು ಭಾವಿಸಿ ಆರಂಭದಲ್ಲಿ ರೋಗಲಕ್ಷಣಗಳನ್ನು ನಿರ್ಲಕ್ಷಿಸಿದರು ಎಂದು ಮೂಲಗಳು ತಿಳಿಸಿವೆ.
ಸುಮಾರು ಒಂದು ವಾರದವರೆಗೆ ಜ್ವರ ಕಡಿಮೆಯಾಗದಿದ್ದಾಗ ಮತ್ತು ದೇಹದ ಹಲವು ಭಾಗಗಳಲ್ಲಿ ಚರ್ಮದ ಗಾಯಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದಾಗ, ವ್ಯಕ್ತಿ ಗಾಬರಿಯಾಗಿದ್ದಾನೆ. ಶಂಕಿತ ಮತ್ತು ದೃಢಪಡಿಸಿದ ಮಂಕಿಪಾಕ್ಸ್ ಪ್ರಕರಣಗಳ ಪ್ರತ್ಯೇಕತೆ ಮತ್ತು ನಿರ್ವಹಣೆಗಾಗಿ ಗೊತ್ತುಪಡಿಸಿದ ಕೇಂದ್ರವಾದ ಲೋಕನಾಯಕ್ ಆಸ್ಪತ್ರೆಗೆ ಬರುವ ಮೊದಲು, ವ್ಯಕ್ತಿ ವೈದ್ಯ ಮತ್ತು ಚರ್ಮ ತಜ್ಞರನ್ನು ಭೇಟಿ ಮಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಆರೋಗ್ಯ ಸ್ಥಿರವಾಗಿದೆ ಎಂದ ವೈದ್ಯರು
"ಮಂಗನ ಕಾಯಿಲೆಯನ್ನು ಸೂಚಿಸುವ ಜ್ವರ ಮತ್ತು ಚರ್ಮದ ಮೇಲಿನ ದದ್ದುಗಳಿಂದಾಗಿ ರೋಗಿಯನ್ನು ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಯಿತು. ನಾವು ಅವರ ಚರ್ಮದ ಗಾಯ ಮತ್ತು ರಕ್ತದ ಮಾದರಿಯನ್ನು ತೆಗೆದುಕೊಂಡು ದೃಢೀಕರಣಕ್ಕಾಗಿ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಿದ್ದೇವೆ. ಅವರಿಗೆ ಮಂಕಿಪಾಕ್ಸ್ ಇರುವುದು ದೃಢಪಟ್ಟಿಇದೆ ಎಂದು ಲೋಕನಾಯಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಸುರೇಶ್ ಕುಮಾರ್ ಹೇಳಿದ್ದಾರೆ. ಪ್ರಸ್ತುತ ರೋಗಿಯ ಆರೋಗ್ಯ ಸ್ಥಿರವಾಗಿದ್ದು, ಅವರಿಗೆ ರೋಗಲಕ್ಷಣದ ಚಿಕಿತ್ಸೆಯನ್ನು ನೀಡಲಾಗುತ್ತಿದೆ" ಎಂದು ಅವರು ಹೇಳಿದರು.

ಹನ್ನೆರಡು ಮಂದಿಯನ್ನು ಸಂಪರ್ಕಿಸಿದ್ದ ಸೋಂಕಿತ
ಆರೋಗ್ಯ ಅಧಿಕಾರಿಗಳ ಮತ್ತೊಂದು ತಂಡವು ಕಳೆದ ಕೆಲವು ದಿನಗಳಿಂದ ರೋಗಿಯ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರನ್ನು ಪತ್ತೆಹಚ್ಚುತ್ತಿದೆ. ರೋಗದ ಲಕ್ಷಣಗಳನ್ನು ಹೊಂದಿರುವವರನ್ನು ಪ್ರತ್ಯೇಕವಾಗಿ ಇರಿಸಲಾಗುತ್ತಿದೆ.
"ಕಳೆದ ಕೆಲವು ದಿನಗಳಿಂದ ರೋಗಿಯೊಂದಿಗೆ ಸಂಪರ್ಕಕ್ಕೆ ಬಂದ ಸುಮಾರು ಹನ್ನೆರಡು ವ್ಯಕ್ತಿಗಳನ್ನು ನಾವು ಗುರುತಿಸಿದ್ದೇವೆ. ಅವರಲ್ಲಿ ಒಬ್ಬರು ರೋಗಲಕ್ಷಣಗಳನ್ನು ಹೊಂದಿದ್ದಾರೆ. ಅವರನ್ನು ಪ್ರತ್ಯೇಕವಾಗಿ ಇರಿಸಲು ಸೂಚನೆ ನೀಡಿದ್ದು, ಪರೀಕ್ಷೆಗೆ ಸೂಚಿಸಲಾಗಿದೆ. ಉಳಿದವರ ಮೇಲೆ ಕನಿಷ್ಠ ಎರಡರಿಂದ ಮೂರು ವಾರಗಳ ಕಾಲ ನಿಗಾ ಇಡಲಾಗುವುದು" ಎಂದು ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಶ್ವದಾದ್ಯಂತ 16,000ಕ್ಕೂ ಹೆಚ್ಚು ಪ್ರಕರಣ
ಮಂಕಿಪಾಕ್ಸ್ ಎಂಬುದು ಮಂಕಿಪಾಕ್ಸ್ ವೈರಸ್ ಸೋಂಕಿನಿಂದ ಉಂಟಾಗುವ ಕಾಯಿಲೆಯಾಗಿದೆ. ಜಾಗತಿಕವಾಗಿ, ಕಳೆದ ಏಳು ತಿಂಗಳಲ್ಲಿ 16,000 ಕ್ಕೂ ಹೆಚ್ಚು ರೋಗದ ಪ್ರಕರಣಗಳು ವರದಿಯಾಗಿವೆ. ಇದರಿಂದ ಐವರು ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಶನಿವಾರ ಮಂಕಿಪಾಕ್ಸ್ ಅನ್ನು "ಅಂತರರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ (PHEIC)" ಎಂದು ಘೋಷಿಸಿತು.Recommended Video

12 ವರ್ಷದಲ್ಲಿ 6 ಬಾರಿ ತುರ್ತು ಪರಿಸ್ಥಿತಿ ಘೋಷಣೆ
ಕಳೆದ 12 ವರ್ಷಗಳಲ್ಲಿ ಆರು ಸಾಂಕ್ರಾಮಿಕ ಕಾಯಿಲೆಗಳಿಗಾಗಿ ಈ ರೀತಿ ತುರ್ತುಪರಿಸ್ಥಿತಿ ಘೋಷಿಸಲಾಗಿದೆ. 2009ರಲ್ಲಿ ಹಂದಿಜ್ವರ, 2014 ಪೋಲಿಯೊ, 2014 ಎಬೋಲಾ, 2015 ಜಿಕಾ, 2018 ಕೆ ಎಬೋಲಾ, 2019 ಕೋವಿಡ್ ಸಂದರ್ಭದಲ್ಲಿ ವಿಶ್ವಸಂಸ್ಥೆ ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿಯನ್ನು ಘೋಷಣೆ ಮಾಡಿತ್ತು.
ಆದರೆ ಎಲ್ಲಾ ಕಾಯಿಲೆಗಳು ಸಾಂಕ್ರಾಮಿಕವಾಗುವುದಿಲ್ಲ, ಆದರೆ ಇದು ವಿಶ್ವ ಆರೋಗ್ಯ ಸಂಸ್ಥೆಯ ಸರಿಯಾದ ಮುನ್ನೆಚ್ಚರಿಕೆ ಕ್ರಮವಾಗಿದೆ ಎಂದು ಅಮೆರಿಕದ ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಗಳ ಮುಖ್ಯಸ್ಥ ಡಾ.ಫಹೀಮ್ ಯೂನಸ್ ಹೇಳಿದ್ದಾರೆ.












Click it and Unblock the Notifications