ಸಿದ್ದಗಂಗಾ ಶ್ರೀಗಳು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ ಮೋದಿ
ನವದೆಹಲಿ, ಜನವರಿ 18: ಅನಾರೋಗ್ಯದಿಂದ ಬಳಲುತ್ತಿರುವ ಸಿದ್ದಗಂಗಾ ಶ್ರೀಗಳು ಶೀಘ್ರ ಚೇತರಿಸಿಕೊಳ್ಳಲು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಾರ್ಥಿಸಿ ಟ್ವೀಟ್ ಮಾಡಿದ್ದಾರೆ.
ತುಮಕೂರು ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳು ಇದೀಗ ಕೃತಕ ಉಸಿರಾಟದಲ್ಲಿದ್ದಾರೆ, ಕಳೆದ ವಾರ ಒಂದೆರೆಡು ಗಂಟೆಗಳಾದರೂ ಕೃತಕ ಉಸಿರಾಟವಿಲ್ಲದೆ ಅವರೇ ಉಸಿರಾಡುತ್ತಿದ್ದರು. ಆದರೆ ಇದೀಗ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೃತಕವಾಗಿ ಉಸಿರಾಡುವಂತಾಗಿದೆ. ಶ್ರೀಗಳು ಬೇಗ ಚೇತರಿಸಿಕೊಳ್ಳಲಿ ಎಂದು ಮೋದಿ ಪ್ರಾರ್ಥಿಸಿದ್ದಾರೆ.
ಶ್ರೀಗಳಿಗೆ ಮಠದಲ್ಲೇ ಸಿದ್ಧವಾಗಿರುವ ಐಸಿಯು ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಮೆರಿಕದಿಂದ ಬಂದಿರುವ ಸ್ವಾಮೀಜಿ ಶಿಷ್ಯರಾಗಿರುವ ಡಾ. ನಾಗಣ್ಣ ವಿಶೇಷ ವೈದ್ಯರ ತಂಡದೊಂದಿಗೆ ಸೇರಿಕೊಂಡು ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಶ್ರೀಗಳ ಆರೋಗ್ಯ ಇನ್ನಷ್ಟು ಸುಧಾರಿಸಲಿ ಎಂದು ಸಿದ್ದಲಿಂಗ ಬೆಟ್ಟದ ಮೇಲಿರುವ ಸಿದ್ದಲಿಂಗೇಶ್ವರನಿಗೆ ಗುರುವಾರ ರಾತ್ರಿ ವಿಶೇಷ ಪೂಜೆ ಸಲ್ಲಿಸಲಾಯ್ತು. ಕಿರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ 8 ಮಂದಿ ಸ್ವಾಮೀಜಿಗಳು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಪರಮಪೂಜ್ಯ ಡಾಕ್ಟರ್ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳವರದು ಅಮೋಘ ವ್ಯಕ್ತಿತ್ವ . ಅವರ ಮಹೋನ್ನತ ಸೇವೆ ಕೋಟ್ಯಾಂತರ ಜನರ ಜೀವನದ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದೆ. ಶ್ರೀಗಳು ಬೇಗ ಗುಣ ಮುಖರಾಗಲಿ ಎಂದು ಹಾಗೂ ದೇವರು ಅವರಿಗೆ ಉತ್ತಮ ಆರೋಗ್ಯ ಕರುಣಿಸಲೆಂದು ಇಡೀ ರಾಷ್ಟ್ರ ಪ್ರಾರ್ಥಿಸುತ್ತಿದೆ.
— Narendra Modi (@narendramodi) January 17, 2019
ಶ್ರೀಗಳಿಗೆ 111 ವರ್ಷ ವಯಸ್ಸಾಗಿದ್ದು ಈಗಾಗಲೇ 11 ಹೃದಯಕ್ಕೆ ಸಂಬಂಧಿಸಿದಂತೆ ಶಸ್ತ್ರಚಿಕಿತ್ಸೆಗಳು ನಡೆದಿವೆ. ನರೇಂದ್ರ ಮೋದಿಯವರು 'ಪರಮಪೂಜ್ಯ ಡಾಕ್ಟರ್ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳವರದು ಅಮೋಘ ವ್ಯಕ್ತಿತ್ವ . ಅವರ ಮಹೋನ್ನತ ಸೇವೆ ಕೋಟ್ಯಾಂತರ ಜನರ ಜೀವನದ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದೆ. ಶ್ರೀಗಳು ಬೇಗ ಗುಣ ಮುಖರಾಗಲಿ ಎಂದು ಹಾಗೂ ದೇವರು ಅವರಿಗೆ ಉತ್ತಮ ಆರೋಗ್ಯ ಕರುಣಿಸಲೆಂದು ಇಡೀ ರಾಷ್ಟ್ರ ಪ್ರಾರ್ಥಿಸುತ್ತಿದೆ' ಎಂದು ಟ್ವೀಟ್ ಮಾಡುವ ಮೂಲಕ ಪ್ರಾರ್ಥನೆ ಸಲ್ಲಿಸಿದ್ದಾರೆ.












Click it and Unblock the Notifications