ಮೋದಿ ಒಂದು ದಿನ ತಾಜ್‌ಮಹಲನ್ನೂ ಮಾರುತ್ತಾರೆ: ರಾಹುಲ್ ಗಾಂಧಿ ವಾಗ್ದಾಳಿ
ನವದೆಹಲಿ, ಫೆಬ್ರವರಿ 4: ಎಲ್ಲವನ್ನೂ ಮಾರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮುಂದೊಂದು ದಿನ ತಾಜ್ ಮಹಲ್‌ಅನ್ನೂ ಮಾರಬಹುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ನವದೆಹಲಿಯ ಜಂಗಪುರದಲ್ಲಿ ಮಂಗಳವಾರ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿದ ಅವರು, ಎನ್‌ಡಿಎ ಸರ್ಕಾರದ ವಿರುದ್ಧ ಹರಿಹಾಯ್ದರು.
'ಮೇಕ್ ಇನ್ ಇಂಡಿಯಾ ಎಂಬ ಉತ್ತಮವಾದ ಘೋಷಣೆಯನ್ನೇನೋ ಪ್ರಧಾನಿ ಮೋದಿ ಮಾಡಿದರು. ಆದರೆ ಉತ್ತರ ಪ್ರದೇಶದ ಆಗ್ರಾದಲ್ಲಿ ಒಂದೇ ಒಂದು ಕಾರ್ಖಾನೆಯನ್ನೂ ನಿರ್ಮಿಸಲಿಲ್ಲ' ಎಂದು ಟೀಕಿಸಿದರು.
ಪ್ರಧಾನಿ ಮೋದಿ ಅವರಿಗೆ ಧರ್ಮಗಳ ಬಗ್ಗೆ ತಿಳಿವಳಿಕೆ ಇಲ್ಲ. ಯಾವುದೇ ಪವಿತ್ರ ಗ್ರಂಥ ಹಿಂಸೆಯ ಬಗ್ಗೆ ಮಾತನಾಡುವುದಿಲ್ಲ. ಹಿಂಸೆಯನ್ನು ಹರಡುವುದೇ ಭಾರತೀಯ ಜನತಾ ಪಕ್ಷದ ಕೆಲಸವಾಗಿದೆ ಎಂದು ಆರೋಪಿಸಿದರು.

ತಾಜ್‌ಮಹಲನ್ನೂ ಮಾರುತ್ತಾರೆ
'ಅವರು ಎಲ್ಲವನ್ನೂ ಮಾರಾಟ ಮಾಡುತ್ತಿದ್ದಾರೆ. ಇಂಡಿಯನ್ ಆಯಿಲ್, ಏರ್ ಇಂಡಿಯಾ, ಹಿಂದೂಸ್ತಾನ್ ಪೆಟ್ರೋಲಿಯಂ, ರೈಲ್ವೆ ಮತ್ತು ಕೆಂಪುಕೋಟೆಯನ್ನೂ ಮಾರುತ್ತಿದ್ದಾರೆ. ಒಂದು ದಿನ ಅವರು ತಾಜ್‌ಮಹಲ್‌ಅನ್ನು ಕೂಡ ಮಾರಾಟ ಮಾಡಬಹುದು' ಎಂದು ಲೇವಡಿ ಮಾಡಿದರು.

ನಿಮಗೆ ಕೆಲಸ ಸಿಕ್ಕಿದೆಯೇ?
ಅನೇಕ ದೇಶಗಳು ಭಾರತದಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿದ್ದರೂ ದೇಶ ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಯಾದ ನಿರುದ್ಯೋಗದ ಪರಿಸ್ಥಿತಿಯನ್ನು ಪರಿಹರಿಸುವುದು ಪ್ರಧಾನಿ ಮೋದಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸಾಧ್ಯವಿಲ್ಲ.
ದೇಶದ ಎರಡು ಕೋಟಿ ಜನರಿಗೆ ಉದ್ಯೋಗ ನೀಡುವುದಾಗಿ ನೀಡಿದ್ದ ಭರವಸೆಯನ್ನು ಮೋದಿ ಈಡೇರಿಸಿದ್ದಾರೆಯೇ? ಎಂದು ರಾಹುಲ್ ಪ್ರಶ್ನಿಸಿದರು. 'ಆ ಮಾತು ನಿಮಗೆ ನೆನಪಿದೆಯೇ? ನಿಮಗೆ ಆ ಉದ್ಯೋಗಗಳು ಸಿಕ್ಕಿದೆಯೇ? ದೆಹಲಿಯಲ್ಲಿ ನಿರುದ್ಯೋಗವನ್ನು ಕಿತ್ತೊಗೆಯಲು ಎಎಪಿ ಮತ್ತು ಅರವಿಂದ್ ಕೇಜ್ರಿವಾಲ್ ಏನು ಮಾಡಿದ್ದಾರೆ?' ಎಂದು ಕೇಳಿದರು.

ಉದ್ಯೋಗ ಸೃಷ್ಟಿಯ ಆಸಕ್ತಿ ಇಲ್ಲ
ಮೇಡ್ ಇನ್ ಇಂಡಿಯಾ ಅನುಷ್ಠಾನಕ್ಕೆ ಬಂದರೆ ದೇಶದ ಎರಡು ಕೋಟಿ ಯುವಜನರಿಗೆ ಪ್ರತಿ ವರ್ಷ ಉದ್ಯೋಗ ಸಿಗುತ್ತದೆ. ಆದರೆ ನರೇಂದ್ರ ಮೋದಿ ಮತ್ತು ಅರವಿಂದ್ ಕೇಜ್ರಿವಾಲ್ ಅವರಿಗೆ ಅದರ ಬಗ್ಗೆ ಯಾವುದೇ ಆಸಕ್ತಿ ಇಲ್ಲ. ಅವರು ಬಯಸಿರುವುದು ಜನರು ಒಬ್ಬರ ಜತೆಗೊಬ್ಬರು ಹೊಡೆದಾಡಿಕೊಳ್ಳುವುದನ್ನು ಮತ್ತು ತಾವು ಅಧಿಕಾರ ಪಡೆದುಕೊಳ್ಳುವುದು ಎಂದು ಟೀಕಿಸಿದರು.

ದೇಶ ನಡೆಸುತ್ತಿರುವುದು ಅದಾನಿ, ಅಂಬಾನಿ
'ಅದಾನಿ ಮತ್ತು ಅಂಬಾನಿ, ಈ ಎರಡು ಹೆಸರು ನೆನಪಿಡಿ. ಈ ಸರ್ಕಾರ ನಡೆಯುತ್ತಿರುವುದು ಅವರಿಂದಲೇ ಹೊರತು ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಲ್ಲ. ಮತ್ತು ಎಲ್ಲ ಲಾಭಗಳನ್ನೂ ಅವರೇ ಇಬ್ಬರು ಪಡೆದುಕೊಳ್ಳುತ್ತಿದ್ದಾರೆ. ಅದಾನಿಗೆ ಮೋದಿ ನೀಡಿದ ಪ್ರಾಜೆಕ್ಟ್‌ಗಳ ಪಟ್ಟಿಯನ್ನು ನಿಮಗೆ ಕೊಡುವ ಬಗ್ಗೆ ಆಲೋಚಿಸುತ್ತಿದ್ದೇನೆ. ಆ ಯೋಜನೆಗಳ ಹೆಸರನ್ನು ಓದಲು ನನಗೆ ಕನಿಷ್ಠ 45 ನಿಮಿಷಗಳಾದರೂ ಬೇಕಾಗುತ್ತದೆ. ಅಷ್ಟು ದೊಡ್ಡದಿದೆ' ಎಂದು ಆರೋಪಿಸಿದರು.












Click it and Unblock the Notifications