ಕಾಂಗ್ರೆಸ್ ಪಟ್ಟಿ 3: ವಾರಣಾಸಿಗೆ ಇನ್ನೂ ಯಾರೂ ಇಲ್ಲ
ನವದೆಹಲಿ, ಮಾರ್ಚ್ 19- ಕಾಂಗ್ರೆಸ್ ಪಕ್ಷವು ನಿನ್ನೆ ಮಂಗಳವಾರ ಹಾಲಿ ಲೋಕಸಭಾ ಚುನಾವಣೆಗಾಗಿ ತನ್ನ 58 ಅಭ್ಯರ್ಥಿಗಳ ಮೂರನೆಯ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಳಂಕಿತ ಸಂಸದರಾದ ಸುರೇಶ್ ಕಲ್ಮಾಡಿ, ಅಶೋಕ್ ಚವ್ಹಾಣ್ ಅಂತಹವರಿಗೆ ಟಿಕೆಟ್ ನೀಡಿಲ್ಲ. ಸುರೇಶ್ ಕಲ್ಮಾಡಿ ಬದಲಿಗೆ ಪೂನಾದಿಂದ ವಿಶ್ವಜೀತ್ ಕದಂ ಅವರು ಕಣಕ್ಕಿಳಿಯಲಿದ್ದಾರೆ. ಕಾಂಗ್ರೆಸ್ ಇದುವರೆಗೂ 318 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕರ್ನಾಟಕದಿಂದ 25 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದೆ.
ಇದೇ ವೇಳೆ, ಮಾಜಿ ಕ್ರಿಕೆಟ್ಟಿಗ ಮೊಹಮದ್ ಅಜರುದ್ದೀನ್ ಅವರು ಕ್ಷೇತ್ರ ಬದಲಿಸಿದ್ದು, ಅಲ್ಪಸಂಖ್ಯಾತರು ಹೆಚ್ಚಾಗಿರುವ ರಾಜಸ್ಥಾನದ ಸವಾಯಿ ಮಾಧೋಪುರದಿಂದ ಕಣಕ್ಕಿಳಿಯಲಿದ್ದಾರೆ. ಇನ್ನು ದಿಲ್ಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಪುತ್ರ ಸಂದೀಪ್ ದೀಕ್ಷಿತ್ ಪೂರ್ವ ದಿಲ್ಲಿಯಿಂದ, ಅಜಯ್ ಮಾಕನ್ ದಿಲ್ಲಿಯಿಂದಲೂ, ಕಪಿಲ್ ಸಿಬಲ್ ಚಾಂದಿನಿ ಚೌಕ್, ಸಚಿನ್ ಪೈಲಟ್ ಅಜ್ಮೀರ್ ನಿಂದಲೂ ಅಜಿತ್ ಜೋಗಿ ಅವರು ಛತ್ತೀಸ್ ಗಢದ ಮಹಾಸಮುಂದ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.[ಬಿರುಸಿನ ಮತಯಾಚನೆ ಚಿತ್ರಗಳು]

ಹಾಲಿ ಸಂಸದ ಕಪಿಲ್ ಸಿಬಲ್ ಅವರ ಚಾಂದಿನಿ ಚೌಕ್ ಕ್ಷೇತ್ರ ಹೆಚ್ಚು ಗಮನ ಸೆಳೆದಿದೆ. ಬಿಜೆಪಿಯಿಂದ ಡಾ. ಹರ್ಷವರ್ಧನ ಮತ್ತು ಎಎಪಿ ವತಿಯಿಂದ ಮಾಜಿ ಪತ್ರಕರ್ತ ಅಶುತೋಷ್ ಅವರು ಇದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ತ್ರಿಕೋಣ ಸ್ಪರ್ಧೆ ಏರ್ಪಟ್ಟಿದೆ.

ಇನ್ನು ಅನಾರೋಗ್ಯಪೀಡಿತರಾದ ಮನೀಶ್ ತಿವಾರಿ ಅವರು ಸ್ಪರ್ಧೆಯಿಂದ ದೂರವುಳಿಯಬಯಸಿದ್ದಾರೆ. ತಮಿಳುನಾಡಿನಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿಲ್ಲ. ಆಂಧ್ರದಲ್ಲಿ ಪಕ್ಷಕ್ಕೆ ಅಭ್ಯರ್ಥಿಗಳ ಕೊರತೆ ಎದುರಾಗಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರ ಅಳಿಯ ಪರಂಜಯಾದಿತ್ಯ ಸಿನ್ಹ ಪರ್ಮಾರ್ ಅವರು ಗುಜರಾತಿನ ಪಂಚಮಹಲ್ ಕ್ಷೇತ್ರದಿಂದ ಸ್ಪರ್ಧಿಸಬಯಸಿದ್ದಾರಾದರೂ ಅವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಇನ್ನೂ ಹಿಂದುಮುಂದು ನೋಡುತ್ತಿದೆ.
ಉತ್ತರಪ್ರದೇಶದ ವಾರಾಣಾಸಿಯಿಂದ ಖಡಕ್ ಅಭ್ಯರ್ಥಿಯನ್ನು ಕಣಕ್ಕೆ ಬಿಡಲು ಕಾಂಗ್ರೆಸ್ ಮಂತ್ರಾಲೋಚನೆ ನಡೆಸಿದ್ದು, ಅಭ್ಯರ್ಥಿಗಳ ತಲಾಶೆಯಲ್ಲಿದೆ. ಅಂದಹಾಗೆ, ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.


Click it and Unblock the Notifications
