ಲೋಕಸಭೆಯಲ್ಲಿ ತೆಲಂಗಾಣ ವಿಧೇಯಕಕ್ಕೆ ಒಪ್ಪಿಗೆ
ನವದೆಹಲಿ, ಫೆ.18 : ಗದ್ದಲ, ಗಲಾಟೆಗಳ ನಡುವೆಯೇ ಲೋಕಸಭೆಯಲ್ಲಿ ಮಂಗಳವಾರ ಮಧ್ಯಾಹ್ನ ತೀವ್ರ ವಿರೋಧದ ನಡುವೆಯೂ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ವಿಧೇಯಕವನ್ನು ಅಂಗೀಕರಿಸಲಾಗಿದೆ. ಈ ನಿರ್ಧಾರಕ್ಕೆ ಒಂದು ಕಡೆ ವಿರೋಧ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಜನರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.
ಮಂಗಳವಾರ ಮಧ್ಯಾಹ್ನ ಸೀಮಾಂಧ್ರ ಭಾಗದ ಸಂಸದರ ಗಲಾಟೆಗಳ ನಡುವೆಯೇ, ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ತೆಲಂಗಾಣ ರಚನೆ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಿದರು. ಮಂಡನೆಯಾದ 23 ನಿಮಿಷಗಳಲ್ಲೇ ವಿಧೇಯಕವನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಇದು ಅಖಂಡ ಆಂಧ್ರಕ್ಕಾಗಿ ಹೋರಾಟ ನಡೆಸುತ್ತಿದ್ದ ಸಂಸದರ ಕೆಂಗಣ್ಣಿಗೆ ಕಾರಣವಾಯಿತು.

ತರಾತುರಿಯಲ್ಲಿ ವಿಧೇಯಕಕ್ಕೆ ಒಪ್ಪಿಗೆ ನೀಡಿದ ಕೇಂದ್ರ ಸರ್ಕಾರದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್, ನಾವು ಸಹ ತೆಲಂಗಾಣ ವಿಧೇಯಕದ ಪರವಾಗಿದ್ದೇವೆ. ಇದರ ಬಗ್ಗೆ ಚರ್ಚಿಸಲು ಸದನದಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. [ಸದನದಲ್ಲಿ ಪೆಪ್ಪರ್ ಸ್ಪ್ರೇ ಎರಚಿ ಗದ್ದಲ]
ಸ್ಪೀಕರ್ ಮೀರಾ ಕುಮಾರ್ ಅವರ ಆದೇಶದ ಮೇರೆಗೆ ವಿಧೇಯಕದ ಕುರಿತು ಚರ್ಚೆ ನಡೆಯುವ ವೇಳೆ ಲೋಕಸಭಾ ಟಿವಿಯ ನೇರ ಪ್ರಸಾರವನ್ನು ಸ್ಥಗಿತಗೊಳಿಸಲಾಗಿತ್ತು. ಅಲ್ಲದೆ ಲೋಕಸಭೆಯ ಎಲ್ಲ ಬಾಗಿಲನ್ನೂ ಮುಚ್ಚಲಾಗಿತ್ತು. ಪ್ರತಿಭಟನೆ ನಡೆಸುವವರು ಒಳಬಾರದಂತೆ ಪ್ರತಿ ಬಾಗಿಲಿನ ಬಳಿ ಮಾರ್ಷಲ್ ಗಳನ್ನು ನಿಯೋಜಿಸಲಾಗಿತ್ತು. [ತೆಲಂಗಾಣ ವಿಧೇಯಕಕ್ಕೆ ಸಚಿವ ಸಂಪುಟ ಒಪ್ಪಿಗೆ]
ತೆಲಂಗಾಣ ವಿಧೇಯಕಕ್ಕೆ ಅಂಗೀಕಾರ ದೊರೆಯುತ್ತಿದ್ದಂತೆ ಆ ಭಾಗದ ಜನತೆ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರೆ, ಅಖಂಡ ಆಂಧ್ರಕ್ಕಾಗಿ ಹೋರಾಟ ನಡೆಸುತ್ತಿದ್ದ ನಾಯಕರು ಫೆ.19ರ ಬುಧವಾರದಂದು ಆಂಧ್ರಪ್ರದೇಶ ಬಂದ್ ಗೆ ಕರೆ ನೀಡಿದ್ದಾರೆ. ಆಂಧ್ರಪ್ರದೇಶ ಸಿಎಂ ಕಿರಣ್ ಕುಮಾರ್ ರೆಡ್ಡಿ ಬುಧವಾರ 10.45ಕ್ಕೆ ಪತ್ರಿಕಾಗೋಷ್ಠಿ ಕರೆದಿದ್ದು ತಮ್ಮ ರಾಜೀನಾಮೆಯನ್ನು ಪ್ರಕಟಿಸುವ ಸಾಧ್ಯತೆ ಇದೆ. [ಆಂಧ್ರ ವಿಭಜನೆ, ಕರ್ನಾಟಕ ದೊಡ್ಡಣ್ಣ, ಲಾಭ ಏನಣ್ಣ?]
ಜಗನ್ ಪ್ರತಿಕ್ರಿಯೆ :ತೆಲಂಗಾಣ ವಿಧೇಯಕಕ್ಕೆ ಒಪ್ಪಿಗೆ ದೊರಕಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಜಗನ್ ಮೋಹನ್ ರೆಡ್ಡಿ ಇದು ದೇಶದ ಪಾಲಿಗೆ ಕರಾಳದಿನವಾಗಿದೆ. ಕಾಂಗ್ರೆಸ್ ಸಂಸತ್ ಭವನದೊಳಗೆ ಪ್ರಜಾಪ್ರಭುತ್ವವನ್ನು ಕೊಂದುಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿವಿ ಚಾನೆಲ್ ಪ್ರಸಾರ ಸ್ಥಗಿತಗೊಳಿಸಿ, ಸದನದ ಬಾಗಿಲನ್ನು ಮುಚ್ಚಿ ವಿಧೇಯಕಕ್ಕೆ ಕಾಂಗ್ರೆಸ್ ಸಂವಿಧಾನ ವಿರೋಧಿಯಾಗಿ ಅನುಮೋದನೆ ಪಡೆದಿದೆ ಎಂದು ಅವರು ಆರೋಪಿಸಿದರು.
ಪೆಪ್ಪರ್ ಸ್ಪ್ರೇ ರಾಜಗೋಪಾಲ್ ರಾಜೀನಾಮೆ : ತೆಲಂಗಾಣ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಬಾರದು ಎಂದು ಫೆ.13ರಂದು ಸದನದಲ್ಲಿ ಪೆಪ್ಪರ್ ಸ್ಪ್ರೇ ಮಾಡಿ ಗದ್ದಲ ಮಾಡಿದ್ದ ವಿಜಯವಾಡ ಸಂಸದ ಎಲ್. ರಾಜಗೋಪಾಲ್ ತೆಲಂಗಾಣ ವಿಧೇಯಕಕ್ಕೆ ಒಪ್ಪಿಗೆ ನೀಡಿರುವುದನ್ನು ಖಂಡಿಸಿ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸ್ಪೀಕರ್ ಮೀರಾ ಕುಮಾರ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆ.
ಸುಪ್ರೀಂಗೆ ಮೊರೆ : ತೆಲಂಗಾಣ ವಿಧೇಯಕ ಅಂಗೀಕಾರ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ಸೀಮಾಂಧ್ರ ಸಂಸದ ಕೆ.ಎಸ್. ರಾವ್ ಹೇಳಿದ್ದಾರೆ. ತೀವ್ರ ವಿರೋಧದ ನಡುವೆಯೂ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ವಿಧೇಯಕಕ್ಕೆ ಲೋಕಸಭೆಯಲ್ಲಿ ಅಂಗೀಕಾರ ದೊರೆತ್ತಿದ್ದು, ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸುವುದಾಗಿ ಅವರು ತಿಳಿಸಿದರು.












Click it and Unblock the Notifications