2019 ರ ಚುನಾವಣೆಯಲ್ಲಿ ಮಹಾಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರು?
Recommended Video

ನವದೆಹಲಿ, ಆಗಸ್ಟ್ 4: 2019 ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮಹಾಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರು?
ಬಿಜೆಪಿ ಮತ್ತು ಆರೆಸ್ಸೆಸ್ ಅನ್ನು ಸೋಲಿಸಬೇಕು ಎಂಬ ಒಂದೇ ಒಂದು ಅಜೆಂಡಾ ಇಟ್ಟುಕೊಂಡಿರುವ ಕಾಂಗ್ರೆಸ್ ನೇತೃತ್ವದ ಮಹಾ ಮೈತ್ರಿಕೂಟ ಪ್ರಧಾನಿ ಅಭ್ಯರ್ಥಿಯನ್ನು ಚುನಾವಣೆಯ ಫಲಿತಾಂಶದ ನಂತರ ನಿರ್ಧರಿಸಲಿದೆ ಎನ್ನಲಾಗುತ್ತಿದೆ.
ಪ್ರಸ್ತುತ ಕಾಂಗ್ರೆಸ್ ಅಧ್ಯಕ್ಷರಾಗಿರುವ ರಾಹುಲ್ ಗಾಂಧಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಒಪ್ಪಿಕೊಳ್ಳುವುದಕ್ಕೆ ಮಹಾಮೈತ್ರಿಕೂಟದ ಹಲವು ಪಕ್ಷಗಳು ಸಿದ್ಧವಿಲ್ಲ. ಬಿಎಸ್ಪಿಯಿಂದ ಪ್ರಧಾನಿ ಅಭ್ಯರ್ಥಿ ಮಾಯಾವತಿ ಎಂಬುದು ಈಗಾಗಲೇ ಘೋಷಣೆಯಾಗಿದೆ. ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಸಹ ಪ್ರಧಾನಿ ಅಭ್ಯರ್ಥಿ ಎಂದು ಇಷ್ಟು ದಿನ ಹೇಳಲಾಗುತ್ತಿತ್ತು. ಆದರೆ ತಾನು ಪ್ರಧಾನಿ ರೇಸ್ ನಲ್ಲಿಲ್ಲ ಎಂದು ಅವರೇ ಸ್ಪಷ್ಟಪಡಿಸಿದ್ದರು. ಹಾಗಾದರೆ ಪ್ರಧಾನಿ ಅಭ್ಯರ್ಥಿ ಯಾರಾಗಬಹುದು ಎಂಬುದು ಈಗಿರುವ ಪ್ರಶ್ನೆ.

ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಅಲ್ಲವೇ?
ರಾಹುಲ್ ಗಾಂಧಿಯವರೇ ನಮ್ಮ ಪ್ರಧಾನಿ ಅಭ್ಯರ್ಥಿ ಎಂದು ಇತ್ತೀಚೆಗಷ್ಟೇ ನಡೆದ ಕಾಂಗ್ರೆಸ್ ಸಭೆಯಲ್ಲಿ, ಹಿರಿಯರೂ ಒಕ್ಕೊರಲಿನಿಂದ ಹೇಳಿದ್ದರು. ಆದರೆ, ಸದ್ಯಕ್ಕೆ ಕಾಂಗ್ರೆಸ್ ನಿಲುವಿನಲ್ಲಿ ಬದಲಾವಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಂಥ ಘಟಾನುಘಟಿ ನಾಯಕರ ಎದುರು ಪ್ರತಿಸ್ಪರ್ಧಿಯಾಗಿ ನಿಲ್ಲುವ ಸಾಮರ್ಥ್ಯ ರಾಹುಲ್ ಗಾಂಧಿ ಅವರಿಗಿದೆಯೇ ಎಂಬ ಕುರಿತು ಕಾಂಗ್ರೆಸ್ಸಿನ ಕೆಲ ಹಿರಿಯರಿಗೂ ಅನುಮಾನ ಇದ್ದಂತಿದೆ! ಆದ್ದರಿಂದ ಚುನಾವಣೆಗೂ ಮುನ್ನ ಅಭ್ಯರ್ಥಿ ಘೋಷಣೆ ಮಾಡದೇ ಉಳಿಯುವ ಯೋಚನೆಯಲ್ಲಿ ಕಾಂಗ್ರೆಸ್ ಇದ್ದಂತಿದೆ!

ರಾಹುಲ್ ಗಾಂಧಿ ಬಗ್ಗೆ ಮೈತ್ರಿ ಪಕ್ಷಗಳ ಭಾವನೆ ಏನು?
ಪ್ರಧಾನಿ ಪಟ್ಟಕ್ಕೇರುವಷ್ಟು ಪ್ರಬುದ್ಧತೆ ರಾಹುಲ್ ಗಾಮಧಿ ಅವರಿಗಿದೆ ಎಂಬ ನಂಬಿಕೆ ಮೈತ್ರಿ ಪಕ್ಷಗಳಿಗೆ ಇದ್ದಂತಿಲ್ಲ. ಆದ್ದರಿಂದಲೇ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಒಪ್ಪಿಕೊಳ್ಳಲು ಅವರು ಸಿದ್ಧರಿಲ್ಲ. ರಾಹುಲ್ ಗಾಂಧಿ ಹೊರತಾಗಿ ಕಾಂಗ್ರೆಸ್ಸಿನಲ್ಲಿರುವ ಯಾವುದಾದರೂ ಹಿರಿಯರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದರೆ ಮೈತ್ರಿ ಪಕ್ಷಗಳು ಒಪ್ಪಬಹುದು. ರಾಹುಲ್ ಅವರ ವಯಸ್ಸು ಮತ್ತು ರಾಜಕೀಯ ಅನುಭವ, ಅದೂ ಅಲ್ಲದೆ ಇದುವರೆಗೆ ಅವರ ನೇತೃತ್ವದಲ್ಲಿ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ಸಿನ ಕಳಪೆ ಪ್ರದರ್ಶನ... ಈ ಎಲ್ಲವುಗಳ ಬಗ್ಗೆಯೂ ಮೈತ್ರಿ ಸರ್ಕಾರಕ್ಕೆ ಅರಿವಿದೆ.

ಮೈತ್ರಿಯೂ ಅನಿವಾರ್ಯ
7 ದಶಕಗಳ ಕಾಲ ದೇಶವನ್ನು ಆಳಿದ್ದ ಕಾಂಗ್ರೆಸ್ಸಿಗೆ ಈಗ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಅದಕ್ಕೆಂದೇ ಹಲವು ರಾಜ್ಯಗಳಲ್ಲಿ ಇತರ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಹಾಗೆ ಮೈತ್ರಿ ಮಾಡಿಕೊಂಡರೆ ಕೈಜೋಡಿಸಿದ ಪಕ್ಷಗಳ ಮುಲಾಜಿಗೆ ಬೀಳಬೇಕಾಗುತ್ತದೆ. ಆಗ 'ಇವರೇ ಪ್ರಧಾನಿಯಾಗಬೇಕು' ಎಂಬ ಖಡಕ್ ಷರತ್ತುಗಳನ್ನು ಹಾಕುವ ಸ್ಥಿತಿಯಲ್ಲಿ ಕಾಂಗ್ರೆಸ್ ಇರುವುದಿಲ್ಲ. ಆದ್ದರಿಂದ ಈಗಲೇ, 'ಪ್ರಧಾನಿ ಅಭ್ಯರ್ಥಿಯನ್ನು ಚುನಾವಣಾ ಫಲಿತಾಂಶದ ನಂತರ ನಿರ್ಧರಿಸೋಣ' ಎಂಬ ಜಾಣನಡೆಯನ್ನು ಕಾಂಗ್ರೆಸ್ ಇಡುತ್ತಿದೆ!

ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ!
ಇದೇ ಡಿಸೆಂಬರ್ ನಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಸಹ ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವ ಇರಾದೆ ಕಾಂಗ್ರೆಸ್ಸಿನದ್ದು.ಈ ಮೂರೂ ರಾಜ್ಯಗಳಲ್ಲಿ ಪ್ರಸ್ತುತ ಬಿಜೆಪಿ ನೇತೃತ್ವದ ಸರ್ಕಾರಗಳು ಅಸ್ತಿತ್ವದಲ್ಲಿದ್ದು, ಅದನ್ನು ಅಧಿಕಾರದಿಂದ ಕೆಳಗಿಳಿಸುವುದೇ ಕಾಂಗ್ರೆಸ್ಸಿನ ಗುರಿಯಾಗಿದೆ.












Click it and Unblock the Notifications