ಕನಕಪುರ ಬಂಡೆ ಬುಡಕ್ಕೆ ಬಾಂಬ್: ಡಿಕೆಶಿ ವಿರುದ್ಧ ಕಾಣದ 'ಕೈ' ತಂತ್ರ?
ನವದೆಹಲಿ, ಜನವರಿ.14: ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ(ಕೆಪಿಸಿಸಿ)ಗೆ ಯಾರು ಸಾರಥಿ ಎಂಬುದೇ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ರಾಜ್ಯದ ಹಲವು ಕಾಂಗ್ರೆಸ್ ನಾಯಕರ ನಡುವೆ ಪೈಪೋಟಿ ನಡೆಯುತ್ತಿದೆ.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೆಸರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವವರ ಪೈಕಿ ಮುಂಚೂಣಿಯಲ್ಲಿದೆ. ಆದರೆ, ಕನಕಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧವೇ ಕಾಂಗ್ರೆಸ್ ಹೈಕಮಾಂಡ್ ನಲ್ಲಿ ಪಿತೂರಿ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಭಂಗ ಅನುಭವಿಸಿದ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್, ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದಾರಾಮಯ್ಯ ರಾಜೀನಾಮೆ ಸಲ್ಲಿಸಿದ್ದರು.

ಸೋನಿಯಾ ಗಾಂಧಿ ಭೇಟಿಗೆ ನಿಗದಿಯಾದ ಸಮಯ
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವ ಕುರಿತು ಚರ್ಚೆ ನಡೆಸಲು ಎಐಸಿಸಿ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಸಮಯ ನಿಗದಿಗೊಳಿಸಿದ್ದಾರೆ. ಸಂಜೆ 4.30ಕ್ಕೆ ಸೋನಿಯಾ ಗಾಂಧಿರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಲಿದ್ದಾರೆ. ಜಾತಿವಾರು, ಪ್ರಾದೇಶಿಕವಾರು, ಹಾಗೂ ಪಕ್ಷ ಸಂಘಟನೆಯ ದೃಷ್ಟಿಯಿಂದ ರಾಜ್ಯದಲ್ಲಿ ಪಕ್ಷದ ಸಾರಥ್ಯವನ್ನು ಯಾರಿಗೆ ವಹಿಸುವುದು ಸೂಕ್ತ ಎಂಬುದರ ಬಗ್ಗೆ ಸಲಹೆ ನೀಡಲಿದ್ದಾರೆ.

ಹೈಕಮಾಂಡ್ ನಲ್ಲೇ ಎರಡು ಬಣಗಳ ನಡುವೆ ಜಿದ್ದಾಜಿದ್ದಿ?
ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲೇ ಎರಡು ಬಣಗಳಾಗಿದ್ದು, ಯಾರಿಗೆ ಕೆಪಿಸಿಸಿ ಪಟ್ಟ ಕಟ್ಟಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಎಐಸಿಸಿ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕನಕಪುರ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ಕೆ.ಶಿವಕುಮಾರ್ ಹಾಗೂ ಬಬಲೇಶ್ವರ ವಿಧಾನಸಭಾ ಕ್ಷೇತ್ರ ಶಾಸಕ ಎಂ.ಬಿ.ಪಾಟೀಲ್ ಪರ ಒಲವು ಹೊಂದಿದ್ದಾರೆ ಎನ್ನಲಾಗಿದೆ.

'ಬಂಡೆ' ಬುಡಕ್ಕೆ ಬಾಂಬ್ ಇಟ್ಟರಾ ಸ್ವಪಕ್ಷೀಯರು?
ಕನಕನಪುರ ಶಾಸಕ ಡಿ.ಕೆ.ಶಿವಕುಮಾರ್ ಗೆ ಕೆಪಿಸಿಸಿ ಸ್ಥಾನ ನೀಡುವುದಕ್ಕೆ ರಾಜ್ಯ ಕಾಂಗ್ರೆಸ್ ನಲ್ಲೇ ವಿರೋಧ ವ್ಯಕ್ತವಾಗಿದೆ. ಹೈಕಮಾಂಡ್ ಮಟ್ಟದ ನಾಯಕರನ್ನ ಭೇಟಿ ಮಾಡಿದ ಕೆಲವು ನಾಯಕರು ಡಿಕೆಶಿಗೆ ಕೆಪಿಸಿಸಿ ಹುದ್ದೆ ನೀಡದಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇದರ ನಡುವೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡಾ ಡಿಕೆಶಿಗೆ ಪಟ್ಟ ಕಟ್ಟಲು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಡಿಕೆಶಿ ಬದಲು ಎಂ.ಬಿ.ಪಾಟೀಲರಿಗೆ ಕೆಪಿಸಿಸಿ ಪಟ್ಟ?
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಗಿಂತ ಎಂ.ಬಿ.ಪಾಟೀಲ್ ರನ್ನು ನೇಮಿಸುವ ಬಗ್ಗೆ ಚರ್ಚಿಸಲಾಗುತ್ತಿದೆ. ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಎಂ.ಬಿ.ಪಾಟೀಲ್ ಪರ ಎಐಸಿಸಿ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಒಲವು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಕಾರಣ ಈ ಹಿಂದೆ ನಡೆದ ವಿಧಾನಸಭಾ ಚುನಾವಣೆ ವೇಳೆ ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಃ ಸೋನಿಯಾ ಗಾಂಧಿ ಅವರೇ ಎಂ.ಬಿ.ಪಾಟೀಲ್ ಪರ ಪ್ರಚಾರ ಮಾಡಿದ್ದರು. ಇದೀಗ ಡಿಕೆಶಿ ಬದಲು ಎಂ.ಬಿ.ಪಾಟೀಲರಿಗೆ ಕೆಪಿಸಿಸಿ ಸ್ಥಾನ ನೀಡುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.












Click it and Unblock the Notifications