ಫೆ. 14ರ ನಂಟು ಕಳಚಿಕೊಂಡ ಕೇಜ್ರಿವಾಲ್, ಫೆ.16ಕ್ಕೆ ಮುಹೂರ್ತ
ನವದೆಹಲಿ, ಫೆಬ್ರವರಿ 12: ಸತತ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಅರವಿಂದ್ ಕೇಜ್ರಿವಾಲ್ ಸಜ್ಜಾಗಿದ್ದಾರೆ. ಫೆಬ್ರವರಿ 14ರ ಜೊತೆ ನಂಟು ಹೊಂದಿದ್ದ ಕೇಜ್ರಿವಾಲ್ ಈ ಬಾರಿ ಬೇರೆ ದಿನಾಂಕದಂದು ಪದಗ್ರಹಣ ಸಮಾರಂಭ ನಿಗದಿಯಾಗಿದೆ. ಫೆಬ್ರವರಿ 16ರಂದು ಕೇಜ್ರಿವಾಲ್ ಹಾಗೂ ಎಎಪಿ ಕ್ಯಾಬಿನೆಟ್ ಸದಸ್ಯರೆಲ್ಲರೂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಮುಖಂಡ ಮನೀಷ್ ಸಿಸೋಡಿಯಾ ಹೇಳಿದ್ದಾರೆ.
ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಮತ್ತೊಮ್ಮೆ ಅಧಿಕಾರ ಗದ್ದುಗೆಗೇರಿದೆ. ದೆಹಲಿ ವಿಧಾನಸಭೆ ಚುನಾವಣೆ 2020ರಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಪ್ರಾದೇಶಿಕ ಪಕ್ಷ ಎಎಪಿ ಎದುರು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಶರಣಾಗಿವೆ. ಸತತ ಎರಡನೇ ಬಾರಿಗೆ ಬಿಜೆಪಿ ವಿರೋಧ ಪಕ್ಷ ಸ್ಥಾನವೂ ಸಿಗದಂಥ ಪರಿಸ್ಥಿತಿಗೆ ದೂಡಲ್ಪಟ್ಟಿದೆ. ಇನ್ನು ದೇಶದ ಪುರಾತನ ಪಕ್ಷ ಕಾಂಗ್ರೆಸ್ ಖಾತೆ ತೆರೆಯಲು ವಿಫಲವಾದರೆ, ಸ್ಪರ್ಧಿಸಿದ್ದ 70 ಅಭ್ಯರ್ಥಿಗಳ ಪೈಕಿ 63 ಮಂದಿ ಠೇವಣಿ ಕಳೆದುಕೊಂಡಿದ್ದಾರೆ.
ಎಎಪಿ 62 ಹಾಗೂ ಬಿಜೆಪಿ 8 ಸ್ಥಾನಗಳಿಸಿದೆ. 2015ರಲ್ಲಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 67 ಸ್ಥಾನಗಳನ್ನು ಆಮ್ ಆದ್ಮಿ ಪಕ್ಷ ಗೆದ್ದುಕೊಂಡಿತ್ತು. ಬಿಜೆಪಿ ಮೂರು ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಆದರೆ, ಲೋಕಸಭೆ ಚುನಾವಣೆಯಲ್ಲಿ ಮಾಡಿದ ಕಮಾಲ್ ವಿಧಾನಸಭೆಯಲ್ಲಿ ತೋರುವಲ್ಲಿ ಬಿಜೆಪಿ ವಿಫಲವಾಗಿದೆ.

ಮೊದಲ ಬಾರಿಗೆ ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿ 48 ದಿನಗಳ ಆಡಳಿತದ ನಂತರ ಫೆಬ್ರವರಿ 14, 2014ರಂದು ರಾಜೀನಾಮೆ ಸಲ್ಲಿಸಿದರು. ನಂತರ ಎಎಪಿ ಅಧಿಕಾರ ಬಂದ ಬಳಿಕ 2015ರಲ್ಲಿ ರಾಮ್ ಲೀಲಾ ಮೈದಾನದಲ್ಲಿ ಕೇಜ್ರಿವಾಲ್ ಪ್ರಮಾಣ ವಚನ ಸ್ವೀಕರಿಸಿದ್ದು ಫೆಬ್ರವರಿ 14ರಂದು ಎಂಬುದು ವಿಶೇಷ. ಫೆಬ್ರವರಿ 14, 2018ರಂದು ಮೂರುವರ್ಷಗಳ ಅಧಿಕಾರ ಅವಧಿ ಕಂಡ ಕೇಜ್ರಿವಾಲ್ ಈಗ ಮತ್ತೊಮ್ಮೆ ಫೆಬ್ರವರಿ 14ದಿನದಂದೇ ಎಎಪಿ 3.0ಕ್ಕೆ ಚಾಲನೆ ನೀಡುವ ಸಾಧ್ಯತೆಯಿತ್ತು. ಆದರೆ, ಫೆ.14ರ ಬದಲಿಗೆ ಫೆ.16ರಂದು ಬೆಳಗ್ಗೆ 10 ಗಂಟೆಗೆ ಪ್ರಮಾಣ ವಚನ ಸಮಾರಂಭ ನಡೆಯಲಿದೆ.












Click it and Unblock the Notifications