ದೆಹಲಿ ಮೆಟ್ರೋದಲ್ಲಿ ಪತ್ರಕರ್ತೆ ಮೇಲೆ ಲೈಂಗಿಕ ಹಲ್ಲೆ
ನವದೆಹಲಿ, ನವೆಂಬರ್ 17 : ದೆಹಲಿಯ ಮೆಟ್ರೋದಲ್ಲಿ ಹಾಡಹಗಲೇ ದುರುಳನೊಬ್ಬ ಯುವತಿಯ ಮೇಲೆ ಲೈಂಗಿಕ ಹಲ್ಲೆ ನಡೆಸಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ನವೆಂಬರ್ 13ರಂದು ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಯುವತಿ ಪತ್ರಕರ್ತೆಯಾಗಿದ್ದು, ಮೆಟ್ರೋದಲ್ಲಿ ಮೆಟ್ಟಿಲಿನಿಂದ ಇಳಿಯುತ್ತಿದ್ದಾಗ ಅಲ್ಲೇ ಕಾಯುತ್ತಿದ್ದ ವ್ಯಕ್ತಿಯೊಬ್ಬ ಆಕೆಯ ಮೇಲೆ ಲೈಂಗಿಕ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಧೈರ್ಯದಿಂದ ಯುವತಿ ಆತನನ್ನು ಹಿಡಿಯಲು ಯತ್ನಿಸಿದಾಗ ಆತ ಅಲ್ಲಿಂದ ಪರಾರಿಯಾಗಿದ್ದಾನೆ.

ಮಹಿಳೆಯರಿಗೆ ದೆಹಲಿ ಎಷ್ಟೊಂದು ಅಸುರಕ್ಷಿತವಾಗಿದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಆ ಸಮಯದಲ್ಲಿ ಆ ಸ್ಥಳದಲ್ಲಿ ಯಾರೂ ಇರದಿರುವ ದುರ್ಲಾಭವನ್ನು ಪಡೆದು ಆತ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ.
#WATCH: 25-year-old journalist molested at ITO Metro station in #Delhi on 13 November; accused arrested.(Source: CCTV) pic.twitter.com/xbkDVKBu0K
— ANI (@ANI) November 17, 2017
"ಆತ ಅಚಾನಕ್ಕಾಗಿ ನನ್ನನ್ನು ಸ್ಪರ್ಶಿಸಿದ ಎಂದು ಮೊದಲು ಅಂದುಕೊಂಡೆ. ಆದರೆ, ಆತ ನನ್ನನ್ನು ಬಲವಂತವಾಗಿ ಮುಟ್ಟಲು ಬಂದ ಮತ್ತು ಹಿಡಿದುಕೊಂಡ. ಏನಾಗುತ್ತಿದೆಯೆಂದು ತಿಳಿಯಲು ಕೆಲ ಕ್ಷಣ ಬೇಕಾಯಿತು. ಅಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ಇರಲಿಲ್ಲ. ಇಲ್ಲದಿದ್ದರೆ ಆತನನ್ನು ಖಂಡಿತ ಹಿಡಿಯುತ್ತಿದ್ದೆ" ಎಂದು 25 ವರ್ಷದ ಯುವತಿ ಹೇಳಿದ್ದಾಳೆ.
ತನ್ನ ಮೇಲೆ ಲೈಂಗಿಕ ಹಲ್ಲೆ ನಡೆಸಿದ ವ್ಯಕ್ತಿಯನ್ನು ಯುವತಿ ಹೊಡೆದಿದ್ದಾರೆ. ಯುವತಿ ಆತನನ್ನು ಹಿಡಿಯಲು ಯತ್ನಿಸಿದಾಗ ಪತ್ರಕರ್ತೆಯ ಮುಖಕ್ಕೆ ಆತ ಬಲವಾಗಿ ಹೊಡೆದಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದಾನೆ.
ಅಚ್ಚರಿಯ ಸಂಗತಿಯೆಂದರೆ, ಘಟನೆ ನಡೆದ ಸ್ಥಳದಿಂದ ಕೇವಲ 100 ಮೀಟರ್ ಅಂತರದಲ್ಲಿ ಪೊಲೀಸ್ ಠಾಣೆಯಿದೆ ಮತ್ತು 2 ಕಿ.ಮೀ. ದೂರದಲ್ಲಿ ಪಾರ್ಲಿಮೆಂಟಿದೆ. ಪೊಲೀಸ್ ಸ್ಟೇಷನ್ ಹತ್ತಿರದಲ್ಲಿದ್ದರೂ ಅಲ್ಲಿ ಪೊಲೀಸರಾಗಲಿ, ಮೆಟ್ರೋದ ಭದ್ರತಾ ಸಿಬ್ಬಂದಿಯಾಗಲಿ ಇರಲಿಲ್ಲ.
ತಾನು ಮೆಟ್ರೋ ಬೀಟ್ ಪತ್ರಕರ್ತೆಯಾಗಿ ಹಲವಾರು ಲೇಖನಗಳನ್ನು ಬರೆದಿದ್ದರೂ, ಈ ಘಟನೆಯ ನಂತರ ಒಬ್ಬೇಒಬ್ಬ ಮೆಟ್ರೋ ಅಧಿಕಾರಿ ಕೂಡ ತನ್ನನ್ನು ಸಂಪರ್ಕಿಸಿಲ್ಲ ಎಂದು ಯುವತಿ ನೋವಿನಿಂದ ನುಡಿಯುತ್ತಾರೆ.












Click it and Unblock the Notifications