ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವ ವೇಳೆ ರಾಷ್ಟ್ರಪತಿಗೆ ದೃಷ್ಟಿ ತೆಗೆದ ಜೋಗತಿ ಮಂಜಮ್ಮ

|
Google Oneindia Kannada News

ನವದೆಹಲಿ, ನವೆಂಬರ್ 10: ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿಯವರಿಗೆ ಜಾನಪದ ಕ್ಷೇತ್ರದ ಸಾಧನೆಗಾಗಿ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಲಾಗಿದೆ.

ನವೆಂಬರ್ 9ರಂದು ರಾಷ್ಟ್ರಪತಿ ಭವನದಲ್ಲಿ ಜೋಗತಿ ಮಂಜಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್‌ರವರ ಕೈಯಿಂದ ಪ್ರಶಸ್ತಿಯನ್ನು ಪಡೆಯುವ ಮೊದಲು ಜೋಗತಿ ಮಂಜಮ್ಮ ರಾಷ್ಟ್ರಪತಿಗೆ ದೃಷ್ಟಿ ತೆಗೆದಿದ್ದಾರೆ. ಜೋಗತಿ ಮಂಜಮ್ಮ ರಾಷ್ಟ್ರಪತಿ ಕೈಯಿಂದ ಪ್ರಶಸ್ತಿಯನ್ನು ಸ್ವೀಕರಿಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗಿದೆ.

ಕರ್ನಾಟಕ ಜಾನಪದ ಅಕಾಡೆಮಿಯ ಮೊದಲ ತೃತೀಯ ಲಿಂಗಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರು ಜಾನಪದ ಕ್ಷೇತ್ರದಲ್ಲಿ ಸಾಧನೆಗೈದಿದ್ದಾರೆ. ಇವರ ಕೊಡುಗೆಯನ್ನು ಗುರುತಿಸಿ ಮಂಗಳವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ರವರು ಮಂಜಮ್ಮ ಜೋಗತಿಯವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಪಡೆಯುವ ಮುನ್ನಾ ರಾಷ್ಟ್ರಪತಿ ಬಳಿ ಹೋದ ಮಂಜಮ್ಮ ತನ್ನ ಸೀರೆಯ ಸೆರಗಿನಿಂದ ರಾಮನಾಥ್ ಕೋವಿಂದ್​ಗೆ ದೃಷ್ಟಿ ತೆಗೆದಿದ್ದಾರೆ.

Jogati Manjamma Blesses President Ramnath Kovind Before Receiving Padma Shri Award

ಆಗ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ರವರು ಮಂಜಮ್ಮಗೆ ನೀವು ಏನು ಮಾಡಿದಿರಿ ಎಂದು ಕೇಳಿದಾಗ, ನೀವು ಮೂರು ದಿನಗಳಿಂದ ಪ್ರಶಸ್ತಿ ನೀಡುತ್ತಿರುವುದರಿಂದ ಕಣ್ಣು ಬಿದ್ದಿರುತ್ತದೆ, ಅದಕ್ಕೆ ದೃಷ್ಟಿ ತೆಗೆದೆ ಎಂದು ಉತ್ತರಿಸಿದ್ದಾರೆ. ಅದಕ್ಕೆ ರಾಮನಾಥ್ ಕೋವಿಂದ್ ಧನ್ಯವಾದಗಳು ಎಂದರು ಎಂದು ಮಂಜಮ್ಮ ಜೋಗತಿ ಹೇಳಿದ್ದಾರೆ.

ರಾಮನಾಥ್ ಕೋವಿಂದ್​ಗೆ ಮಂಜಮ್ಮ ಜೋಗತಿ ಅವರು ದೃಷ್ಟಿ ತೆಗೆಯುತ್ತಿದ್ದಂತೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಇತರರು ಜೋರಾಗಿ ಚಪ್ಪಾಳೆ ತಟ್ಟಿದರು.

ಜೋಗತಿ ಮಂಜಮ್ಮ ಬಗ್ಗೆ
ಬಳ್ಳಾರಿ ಜಿಲ್ಲೆಯ ತೆಗ್ಗಿನಮಠ ಎಂಬ ಊರಿನಲ್ಲಿ ಜನಿಸಿದ ಮಂಜಮ್ಮ ಕಲಾಲೋಕಕ್ಕೆ ಚಿರಪರಿಚಿತರು. ಹನುಮಂತಯ್ಯ ಶೆಟ್ಟಿ ಮತ್ತು ಜಯಲಕ್ಷ್ಮಿ ದಂಪತಿಯ ಸುಪುತ್ರರಾಗಿ ಜನ್ಮನಾಮ ಬಿ. ಮಂಜುನಾಥ ಶೆಟ್ಟಿ ಪಡೆದುಕೊಂಡಿದ್ದರು. ಎಲ್ಲ ಮಕ್ಕಳಂತೆ ಆಡು, ಓದು, ಕುಣಿತದ ಸಡಗರದ ಬಾಲ್ಯ ಹೊಂದಿದ್ದರು. ಆದರೆ, ಏಳನೇ ತರಗತಿಯ ವೇಳೆಗೆ ಶರೀರದಲ್ಲಿ ವಿಚಿತ್ರ ಏರುಪೇರು, ದೇಹದಲ್ಲಿ ದಿಢೀರಾಗಿ ಹೆಣ್ಣಿನ ಲಕ್ಷಣಗಳು ಗೋಚರಿಸಿದಾಗ ಹೆಣ್ಣಾಗಿ ಬದುಕಬೇಕೆಂಬ ಹಂಬಲ ಸಹಜವಾಗಿ ಮೂಡಿದೆ.

ಹಲವು ಪಾತ್ರದಲ್ಲಿ ಮಿಂಚಿದ ರಂಗಕಲಾವಿದೆ
ಶ್ರೀರೇಣುಕಾ ಚರಿತ್ರೆ ನಾಟಕದ ಮುಖ್ಯ ಹಾಡುಗಾರ್ತಿ, ಗೌಡಶಾನಿ, ಕಾಮಧೇನು, ಪರಶುರಾಮ ಸೇರಿ 7 ಪಾತ್ರಗಳ ನಿರ್ವಹಣೆ. ಸಾವಿರಾರು ಪ್ರದರ್ಶನದಲ್ಲಿ ಕಲಾಪ್ರೇಮಿಗಳ ಹೃನ್ನನ ಸೆಳೆದ ಕಲಾವಂತಿಕೆ. ಕಾಳವ್ವ ಜೋಗತಿಯವರ ಅಗಲಿಕೆಯ ನಂತರ ರೇಣುಕಾದೇವಿಯ ಪಾತ್ರದಲ್ಲೂ ಬೆಳಗುವಿಕೆ. ಮರಿಯಮ್ಮನಹಳ್ಳಿಯ ಮಾರುಕಲಾರಂಗದ ಬಯಲಾಟಗಳಲ್ಲಿ ನರ್ತಕಿಯಾಗಿ ಜನಜನಿತ.

Jogati Manjamma Blesses President Ramnath Kovind Before Receiving Padma Shri Award

ಮೋಹಿನಿ ಭಸ್ಮಾಸುರ, ಹೇಮರೆಡ್ಡಿ ಮಲ್ಲಮ್ಮ, ಮೋಹನ್‌ಲಾಲಾ ಮುಂತಾದ ಪಾತ್ರಗಳಲ್ಲಿ ಮಿಂಚಿದ ರಂಗಕಲಾವಿದೆ. ವಾದ್ಯಗಾರ್ತಿಯಾಗಿಯೂ ಮೋಡಿ ಮಾಡಿದ ಕಲಾನಿಪುಣೆ.

ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಜಾನಪದಶ್ರೀ ಪ್ರಶಸ್ತಿ, ಜಾನಪದಲೋಕ ಪ್ರಶಸ್ತಿ, ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗಳು ಮತ್ತಿತರ ಗೌರವಗಳೆಲ್ಲವೂ ಕಲೆಯ ಕೈಹಿಡಿದು ಗೆದ್ದ ಮಂಜಮ್ಮ ಅವರ ಸೇವೆಗೆ ಸಂದ ಸತ್ಫಲಗಳು. ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯೆಯಾಗಿ ಕಲಾಸಂಘಟನೆಗೆ 'ಕಾಣೆ' ನೀಡಿದ ಮಂಜಮ್ಮ ಜೋಗತಿ ಪ್ರಸ್ತುತ ಜಾನಪದ ಅಕಾಡೆಮಿಯ ಅಧ್ಯಕ್ಷೆಯಾಗಿ ಜನಪದ ಕಲೆಯ ಪೋಷಣೆ ಮತ್ತು ರಕ್ಷಣೆಯ ಕಾರ್ಯದಲ್ಲಿ ತಲ್ಲೀನರು.

ಛಲ, ಪರಿಶ್ರಮ, ಬದ್ಧತೆಗಳು ಬದುಕನ್ನು ನಳನಳಿಸಿ, ಗೆಲ್ಲಿಸಿ, ಗೌರವಿಸಬಲ್ಲದೆಂಬ ಲೋಕನುಡಿಗೆ ಮಂಜುಮ್ಮ ಜೋಗತಿಯವರ ಈ ಕಲಾಪೂರ್ಣ ಬದುಕೇ ತಾಜಾ ಉದಾಹರಣೆ ಮಾತ್ರವಲ್ಲ, ಸಾಧನಾಹಂಬಲಿಗರಿಗೆ ಎಂದೆಂದಿಗೂ ಪ್ರೇರಣೆಯೂ ಕೂಡ.

ಸಮಾಜದಲ್ಲಿ ಹತ್ತು ಹಲವು ಸವಾಲುಗಳನ್ನು ಎದುರಿಸಿದ ಸಾಧಿಸಿದ ಮಂಜಮ್ಮನವರಿಗೆ ಹಲವು ಪ್ರಶಸ್ತಿಗಳು ಲಭಿಸಿವೆ. ಜಾನಪದ ಕ್ಷೇತ್ರಕ್ಕೆ ಇವರ ಕೊಡುಗೆಯನ್ನು ಗುರುತಿಸಿ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆಯರನ್ನಾಗಿ ಮಾಡಲಾಗಿದೆ.

English summary
Jogati Manjamma Blesses President Ram Nath Kovind Before Receiving Padma Shri Award; Video Goes Viral On social Media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X