ಮೋದಿ ಜತೆ ಇದ್ದಿದ್ದಕ್ಕೆ ವಿಕೆ ಸಿಂಗ್ ಗೆ ಕುತ್ತು
ನವದೆಹಲಿ, ಸೆ.20: ಜನರಲ್ ವಿಕೆ ಸಿಂಗ್ ಮೇಲೆ ಯುಪಿಎ ಹಗೆ ಸಾಧಿಸಲು ಹೊರಟಿದ್ದೆಯೇ? ನರೇಂದ್ರ ಮೋದಿ ಅವರ ಜತೆ ಮೆರವಣಿಗೆಯಲ್ಲಿ ಕಾಣಿಸಿಕೊಂಡಿದ್ದೇ ವಿಕೆ ಸಿಂಗ್ ಅವರ ಮೇಲೆ ರಾಜಕೀಯ ದ್ವೇಷ ಸಾಧನೆಗೆ ದಾರಿ ಮಾಡಿಕೊಟ್ಟಿದೆ.
ವಿಕೆ ಸಿಂಗ್ ಅವರ ಕಾಲದ ಆಡಳೀತದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಅನುಮತಿ ನೀಡುವಂತೆ ಗೃಹ ಸಚಿವಾಲಯವನ್ನು ಭಾರತೀಯ ಸೇನೆ ಹೇಳಿಕೊಂಡಿದೆ.
ಜನರಲ್ ವಿಕೆ ಸಿಂಗ್ ಅವರು ಭಾರತೀಯ ಸೇನೆ ಮುಖ್ಯಸ್ಥರಾಗಿದ್ದ ಕಾಲದಲ್ಲಿ ಗುಪ್ತವಾಗಿ ಒಂದು ಘಟಕ ಸ್ಥಾಪಿಸಿದ್ದರು ಅದರ ನಿರ್ವಹಣೆ ಅದಕ್ಕೆ ತಗುಲಿದ ಖರ್ಚು ವೆಚ್ಚಗಳ ಲೆಕ್ಕ ಸಿಗುತ್ತಿಲ್ಲ ಎಂದು ಸೇನೆ ಅಧಿಕಾರಿಗಳು ಹೇಳಿದ್ದಾರೆ.

ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳ ಫೋನ್ ಟ್ಯಾಪ್ ಮಾಡಲಾಗಿತ್ತು ಎಂಬುದನ್ನು ತಾಂತ್ರಿಕ ವಿಭಾಗ ಒಪ್ಪಿಕೊಂಡಿದೆ. ಈ ಬಗ್ಗೆ ವರದಿಯನ್ನು ಗೃಹ ಸಚಿವಾಲಯಕ್ಕೆ ಸಲ್ಲಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಸಲು ಅನುಮತಿ ಕೋರಲಾಗಿದೆ ಎಂದು ಸೇನೆ ಅಧಿಕಾರಿಗಳು ಹೇಳಿದ್ದಾರೆ.
ಜನರಲ್ ವಿಕೆ ಸಿಂಗ್ ಸ್ಥಾಪಿಸಿದ ರಹಸ್ಯ ಘಟಕದ ಬಗ್ಗೆ ಜನರಲ್ ವಿಕ್ರಮ್ ಸಿಂಗ್ ರಚಿಸಿರುವ ಬೋರ್ಡ್ ಆಫ್ ಆಫೀಸರ್ಸ್ (BOO) ಪರವಾಗಿ ಜನರಲ್ (ಮಿಲಿಟರಿ ಆಪರೇಷನ್) ಲೆಫ್ಟಿನೆಂಟ್ ಜನರಲ್ ವಿನೋದ್ ಭಾಟಿಯಾ ವರದಿ ತಯಾರಿಸಿದ್ದಾರೆ.
ವಿಕೆ ಸಿಂಗ್ ಹೇಳಿಕೆ: ಮೋದಿ ಜತೆ ಕಾಣಿಸಿಕೊಂಡಿದ್ದು ತಪ್ಪೇ. ಮಾಜಿ ಯೋಧರ ಮೆರವಣಿಗೆ ಸಮಾರಂಭದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಮುಖ್ಯ ಅತಿಥಿಯಾಗಿ ಬಂದಿದ್ದರು. ಅವರ ಜತೆ ನಾನು ಕಾಣಿಸಿಕೊಂಡಿದ್ದಕ್ಕೆ ಈಗ ಈ ರೀತಿ ತನಿಖೆ ನಡೆಸಲು ಸರ್ಕಾರ ಮುಂದಾಗಿದೆ.
ಬೇಕಾದ ತನಿಖೆ ನಡೆಸಲಿ, ರಹಸ್ಯ ಘಟಕದ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದ್ದೇ ಇತ್ತು. ನಾನು ಮಾಡಿದ್ದೆಲ್ಲ ದೇಶಕ್ಕಾಗಿ, ನನ್ನ ಸ್ವಂತಕ್ಕಾಗಿ ಏನ್ನನ್ನೂ ಮಾಡಿಲ್ಲ. ಈ ಪ್ರಕರಣ ತನಿಖೆ ನಡೆಸುವವರ ಕೊರಳಿಗೆ ಉರುಳಾದರೂ ಅಚ್ಚರಿಪಡಬೇಕಾಗಿಲ್ಲ ಎಂದು ಜನರಲ್ ವಿಕೆ ಸಿಂಗ್ ಹೇಳಿದ್ದಾರೆ.
ಇದೊಂದು ರಾಜಕೀಯ ಕುತಂತ್ರವಾಗಿದೆ. ಮೋದಿ ಜನಪ್ರಿಯತೆ ಸಹಿಸಲು ಕಾಂಗ್ರೆಸ್ಸಿಗೆ ಆಗುತ್ತಿಲ್ಲ. ಈ ಹಿಂದೆ ಕೂಡಾ ಈ ರೀತಿ ಕಾಂಗ್ರೆಸ್ ನಡೆದುಕೊಂಡಿದೆ. ರಾಬರ್ಟ್ ವಾದ್ರಾ ವಿರುದ್ಧದ ಕಡತಗಳನ್ನು ರೀ ಓಪನ್ ಮಾಡಿದ ಹರ್ಯಾಣ ಐಎಎಸ್ ಆಧಿಕಾರಿ ಅಶೋಕ್ ಖೆಮ್ಕಾ ಏನಾದರು. ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರಿಗೂ ಇದೇ ರೀತಿ ತೊಂದರೆ ನೀಡಲಾಗಿತ್ತು ಎಂದು ಬಿಜೆಪಿ ನಾಯಕ ಬಲ್ಬೀರ್ ಪೂಂಜ್ ಕಿಡಿಕಾರಿದ್ದಾರೆ.












Click it and Unblock the Notifications