ನನ್ನ ಸುತ್ತ ಆಯುಧಗಳನ್ನು ಹಿಡಿದು ಓಡಾಡುವುದನ್ನು ಇಷ್ಟ ಪಡುವುದಿಲ್ಲ: ಓವೈಸಿ
ನವದೆಹಲಿ, ಫೆಬ್ರವರಿ 8: ನಾನು ಸ್ವತಂತ್ರ ಪಕ್ಷಿ, ನನ್ನ ಸುತ್ತ ಯಾರೂ ಆಯುಧಗಳನ್ನು ಹಿಡಿದು ಓಡಾಡುವುದು ನನಗೆ ಇಷ್ಟವಾಗುವುದಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆ ಸಂದರ್ಭದಲ್ಲಿ ಮೃತಪಟ್ಟವರಿಗಿಂತ ಇದು ಹೆಚ್ಚೇನಲ್ಲ ಎಂದು ಹೇಳಿದರು.
ನಾನು ಸಾವಿಗೆ ಹೆದರಲ್ಲ. ಹೀಗಾಗಿ ನನಗೆ ಕೇಂದ್ರ ನೀಡುತ್ತಿರುವ ಝೆಡ್ ಮಾದರಿಯ ಭದ್ರತೆ ಬೇಡ, ಅದನ್ನು ನಾನು ನಿರಾಕರಿಸುತ್ತೇನೆ. ನನ್ನನ್ನು 'ಎ' ವರ್ಗದ ನಾಗರಿಕನನ್ನಾಗಿ ಗುರುತಿಸಿ. ನಾನು ಇನ್ನೂ ಸುಮ್ಮನಿರಲು ಸಾಧ್ಯವಿಲ್ಲ, ದಯಮಾಡಿ ನನಗೆ ನ್ಯಾಯ ಕೊಡಿ. ಯಾರು ನನ್ನ ವಾಹನದ ಮೇಲೆ ಗುಂಡು ಹಾರಿಸಿದರೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಅಲ್ಲದೆ ಆ ದುಷ್ಕರ್ಮಿಗಳನ್ನು ಭಯೋತ್ಪಾದನಾ ವಿರೋಧಿ ಕೇಸ್ ದಾಖಲಿಸಿ ಎಂದು ಒತ್ತಾಯಿಸಿದರು.

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ಗುಂಡು ಹಾರಿಸಿದ ಘಟನೆ ದೆಹಲಿ-ಮೀರತ್ ಇ-ವೇನಲ್ಲಿ ಛಜರ್ಸಿ ಟೋಲ್ ಬಳಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಓವೈಸಿಗೆ ಭದ್ರತೆಗೆ ಕೇಂದ್ರ ಸರ್ಕಾರ ಝಡ್ ಮಾದರಿಯ ಭದ್ರತೆ ನೀಡಲು ಆದೇಶ ನೀಡಿದ್ದು, ಸಿಆರ್ ಪಿಎಫ್‍ನ Z ಕೆಟಗರಿ ಭದ್ರತೆ ಇರಲಿದೆ. ಪ್ರಾಣ ಬೆದರಿಕೆ ಇರುವವರಿಗೆ 4-6 NSG ಕಮಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ 22 ಸಿಬ್ಬಂದಿ ಇರುವುದು 'Z Z category ಭದ್ರತೆಯಾಗಿದೆ. ಇದನ್ನು ದೆಹಲಿ ಪೊಲೀಸ್ ಅಥವಾ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಅಥವಾ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ಸಿಬ್ಬಂದಿ ಕಾರ್ ಜೊತೆಗೆ ಭದ್ರತೆಗೆ ಒದಗಿಸುತ್ತಾರೆ.
ಉತ್ತರಪ್ರದೇಶದ ಮೀರತ್‍ನಲ್ಲಿ ಚುನಾವಣಾ ಪ್ರಚಾರ ಮುಗಿಸಿ ದೆಹಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಓವೈಸಿ ವಾಹನದ ಮೇಲೆ 3-4 ಸುತ್ತು ಗುಂಡು ಹಾರಿಸಲಾಗಿತ್ತು. ಈ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ಬಳಿಕ ಓರ್ವನನ್ನು ಬಂಧಿಸಲಾಗಿತ್ತು. ಈ ಸಂಬಂಧ ಟ್ವೀಟ್ ಮಾಡಿದ್ದ ಓವೈಸಿ, ಎಲ್ಲರೂ ಸುರಕ್ಷಿತವಾಗಿರುವುದಾಗಿ ಮಾಹಿತಿ ನೀಡಿದ್ದರು. ಅಲ್ಲದೆ ಗುಂಡು ಹಾರಿಸಿದ ವ್ಯಕ್ತಿ ಆಯುಧಗಳನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿರುವುದಾಗಿ ತಿಳಿಸಿದ್ದರು. ನಾನು ಮೀರತ್ ನಿಂದ ದೆಹಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಟೋಲ್ ಬಳಿ ಇಬ್ಬರು ದುಷ್ಕರ್ಮಿಗಳು ನನ್ನ ವಾಹನದ ಮೇಲೆ 4 ಸುತ್ತು ಗುಂಡು ಹಾರಿಸಿದ್ದಾರೆ. ಇವರ ಜೊತೆ ಇನ್ನೂ 3-4 ಮಂದಿ ಇದ್ದರು.
ಉತ್ತರ ಪ್ರದೇಶದಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಕಾರಿನ ಮೇಲೆ ನಡೆದ ಗುಂಡಿನ ದಾಳಿಯ ಬಳಿಕ, ಕೇಂದ್ರ ಸರ್ಕಾರ ಝಡ್ ಶ್ರೇಣಿಯ ಭದ್ರತೆ ನೀಡಲು ಮುಂದಾಗಿದೆ. ಆದರೆ ಒವೈಸಿ ಕೇಂದ್ರ ಸರ್ಕಾರದಿಂದ ಭದ್ರತಾ ಸವಲತ್ತು ಪಡೆಯಲು ನಿರಾಕರಿಸಿದ್ದಾರೆ.
ಈ ಕುರಿತು ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಒವೈಸಿ ಅವರ ಜೀವಕ್ಕೆ ಅಪಾಯವಿದೆ ಎಂಬುದನ್ನು ನಮ್ಮ ಸರ್ಕಾರ ಮನಗಂಡಿದೆ. ಈ ದೃಷ್ಟಿಯಿಂದ ಅವರಿಗೆ ಝಡ್ ಶ್ರೇಣಿಯ ಭದ್ರತೆ ನೀಡಲು ನಾವು ಸಿದ್ಧರಿದ್ದೇವೆ. ಆದರೆ ಒವೈಸಿ ಭದ್ರತೆ ಪಡೆದುಕೊಳ್ಳಲು ನಿರಾಕರಿಸಿದ್ದಾರೆ. ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ನಾನು ಅವರಲ್ಲಿ ಇನಂತ ಮಾಡುತ್ತೇನೆ ಎಂದು ಹೇಳಿದರು.
ನಾವು ಒವೈಸಿ ಅವರಿಗೆ ಝಡ್ ಶ್ರೇಣಿಯ ಬುಲೆಟ್ ಪ್ರೂಫ್ ಕಾರನ್ನು ನೀಡಲು ಸಿದ್ಧರಿದ್ದೇವೆ. ಅವರು ತಮ್ಮ ನಿರ್ಧಾರವನ್ನು ಮರುಪರಿಶೀಲಿಸಿ ಭದ್ರತೆಯನ್ನು ಪಡೆದುಕೊಳ್ಳಬೇಕು ಎಂದು ಅಮಿತ್ ಶಾ ಮನವಿ ಮಾಡಿದರು.
ಪ್ರಕರಣಕ್ಕೆ ಸಂಬಂಧಿಸಿಂತೆ ಉತ್ತರ ಪ್ರದೇಶ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಪಿಸ್ತೂಲುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಒಂದು ಕಾರನ್ನು ಕೂಡ ಸುಪರ್ದಿಗೆ ಪಡೆಯಲಾಗಿದೆ. ಬಂಧಿತರನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದೆ. ವಿಚಾರಣೆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ ಎಂದು ಅಮಿತ್ ಶಾ ಲೋಕಸಭೆಗೆ ಮಾಹಿತಿ ನೀಡಿದರು.
ಇನ್ನು ಒವೈಸಿ ಅವರು ತೆರಳುವ ಮಾರ್ಗದ ಬಗ್ಗೆ ಪೊಲೀಸರಿಗೆ ಮೊದಲೇ ಮಾಹಿತಿ ನೀಡಿರಲಿಲ್ಲ. ಇದು ಕೂಡ ಅವರ ಮೇಲೆ ಸುಲಭವಾಗಿ ದಾಳಿ ನಡೆಸಲು ಅನುವು ಮಾಡಿಕೊಟ್ಟಿತು. ಸಂಸದರು ತಮ್ಮ ಪೂರ್ವನಿಗದಿತ ಕಾರ್ಯಕ್ರಮಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡುವುದಾಗಿ ಅಮಿತ್ ಶಾ ಹೇಳಿದರು.












Click it and Unblock the Notifications