'ಕೇಜಿ ಲೆಕ್ಕದಲ್ಲಿ ಹಣ ತೂಕ ಹಾಕಿ ಕೈ ಹೈ ಕಮಾಂಡ್ ಗೆ ತಲುಪಿಸಿದ್ದಾರೆ'
Recommended Video

ನವದೆಹಲಿ, ಸೆಪ್ಟೆಂಬರ್ 19: "ಲೆಕ್ಕಕ್ಕೆ ತೋರಿಸದ ನಗದು, ಹವಾಲ ವ್ಯವಹಾರ ಮತ್ತು ಭ್ರಷ್ಟಾಚಾರದ ಡೀಲ್ ಇವೆಲ್ಲ ಕಾಂಗ್ರೆಸ್ ಪಕ್ಷದ ಆಧಾರ ಸ್ತಂಭ. ಕಾಂಗ್ರೆಸ್ ಹಾಗೂ ಭ್ರಷ್ಟಾಚಾರ ಒಂದಕ್ಕೊಂದು ಸಮಾನಾರ್ಥಕ ಪದಗಳು" ಎಂದು ಬಿಜೆಪಿ ನಾಯಕ ಸಂಬಿತ್ ಪಾತ್ರ ವಿರೋಧ ಪಕ್ಷವಾದ ಕಾಂಗ್ರೆಸ್ ವಿರುದ್ಧ ಬುಧವಾರ ನವದೆಹಲಿಯಲ್ಲಿ ಗಂಭೀರವಾದ ಆರೋಪ ಮಾಡಿದ್ದಾರೆ.
"ಕರ್ನಾಟಕದಿಂದ ಎಐಸಿಸಿಗೆ ಹಣ ವರ್ಗಾವಣೆ ಮಾಡುವುದಕ್ಕೆ ಹವಾಲ ಜಾಲ ನೆರವು ನೀಡಿದೆ ಅನ್ನೋದಿಕ್ಕೆ ಸಾಕ್ಷ್ಯವಿದೆ. ಸ್ವತಃ ಕಾಂಗ್ರೆಸ್ ಪಕ್ಷ ಹವಾಲ ಜಾಲವನ್ನು ನಡೆಸುತ್ತಿದೆ. ಇನ್ನು ಡಿ.ಕೆ.ಶಿವಕುಮಾರ್ ಅವರ ಚಾಲಕ ಆದಾಯ ತೆರಿಗೆ ಇಲಾಖೆ ಬಳಿ ನೀಡಿರುವ ಹೇಳಿಕೆ ಬಿಜೆಪಿ ಹತ್ತಿರ ಇದೆ. ಹಣವನ್ನು ಹೇಗೆ ಕೇಜಿಗಳಲ್ಲಿ ಅಳೆದು, ಎಐಸಿಸಿಗೆಗೆ ಕಳುಹಿಸಲಾಗುತ್ತಿತ್ತು ಎಂಬುದನ್ನು ಆತ ವಿವರಿಸಿದ್ದಾನೆ" ಎಂದು ಪಾತ್ರ ತಿಳಿಸಿದ್ದಾರೆ.
ದೆಹಲಿಯ ಅಪಾರ್ಟ್ ಮೆಂಟ್ ನಲ್ಲಿ ಸಚಿವರ ಆಪ್ತರ 8 ಕೋಟಿ ರುಪಾಯಿ ಕಪ್ಪು ಹಣ ವಶಪಡಿಸಿಕೊಂಡ ನಂತರ ಡಿ.ಕೆ.ಶಿವಕುಮಾರ್ ವಿರುದ್ಧ ದೂರು ದಾಖಲಾಗಿತ್ತು. ಜಾರಿ ನಿರ್ದೇಶನಾಲಯದಿಂದ ಎಂಟು ಕೋಟಿ ರುಪಾಯಿ ವಶಪಡಿಸಿಕೊಂಡು, ದೂರು ದಾಖಲಿಸಿದ ನಂತರ ಬಿಜೆಪಿಯ ಸಂಬಿತ್ ಪಾತ್ರ ಇಂಥ ಗಂಭೀರ ಆರೋಪ ಮಾಡಿದ್ದಾರೆ.

ಆರೋಪ ಮಾಡಿರುವ ಪ್ರಕಾರ, ಡಿ.ಕೆ.ಶಿವಕುಮಾರ್ ಆದೇಶದ ಮೇರೆಗೆ ಹಣವನ್ನು ಸಾಗಿಸಲಾಗಿದೆ. ಪ್ರಕರಣದ ವಿಚಾರಣೆ ವೇಳೆ ಇನ್ನೂ ಹಲವು ವಿಚಾರ ಬಯಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಇನ್ನಷ್ಟು ಮಂದಿಯ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳು ತಿಳಿಸುವಂತೆ, ಹಣವನ್ನು ಹವಾಲ ಜಾಲದ ಮೂಲಕ ದೆಹಲಿಗೆ ಸಾಗಾಟ ಮಾಡಲಾಗಿದೆ. ಆ ನಂತರ ಅದನ್ನು ಸಚಿವರ ಆದೇಶದ ಪ್ರಕಾರವೇ ಹಂಚಲಾಗಿದೆ. ಸರಕಾರದಲ್ಲಿ ಸಚಿವರಾಗಿರುವವರ ವಿರುದ್ಧ ಸರಕಾರಿ ಅಧಿಕಾರಿಯೊಬ್ಬರು ಹೇಳಿಕೆ ನೀಡಿರುವುದರಿಂದ ಈ ಪ್ರಕರಣವು ಮತ್ತಷ್ಟು ಪ್ರಮುಖವಾಗಿದೆ. ಇನ್ನು ಈ ಸುದ್ದಿ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ತಲ್ಲಣ ಸೃಷ್ಟಿಸಿದೆ.












Click it and Unblock the Notifications