ದೆಹಲಿ ಬಾಲಕಿ ಅಪಹರಣ, ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿ ಅರೆಸ್ಟ್
ನವದೆಹಲಿ ಆಗಸ್ಟ್ 23: ದೆಹಲಿಯ ಯಮುನಾ ಖಾದರ್‌ನ ಅರಣ್ಯ ಪ್ರದೇಶದಲ್ಲಿ ಎಂಟು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿ ಕೊಂದ ಆರೋಪದ ಮೇಲೆ 36 ವರ್ಷದ ಕಟುಕನನ್ನು ಬಂಧಿಸಲಾಗಿದೆ. ಆರೋಪಿ ಎಷ್ಟು ಕ್ರೂರಿ ಎಂದರೆ ಅತ್ಯಾಚಾರದ ಬಳಿಕ ಬಾಲಕಿಯ ಕತ್ತು ಸೀಳಿ ಆಕೆಯ ಮುಖವನ್ನು ವಿರೂಪಗೊಳಿಸಿದ್ದಾನೆ.
ರಿಜ್ವಾನ್ ಅಲಿಯಾಸ್ ಬಾದ್‌ಶಾ ಬಿಹಾರದಲ್ಲಿ ಹುಟ್ಟಿದ್ದು, 20 ವರ್ಷಗಳ ಹಿಂದೆ ಕೆಲಸಕ್ಕಾಗಿ ದೆಹಲಿಗೆ ಬಂದಿದ್ದ. ಈತ ತುರ್ಕಮನ್ ಗೇಟ್ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮಾದಕ ವ್ಯಸನಿಯಾಗಿರುವ ರಿಜ್ವಾನ್ ಮದ್ಯಪಾನ ಮಾಡಲು ಧೂಮಪಾನ ಮಾಡಲು ಯಮುನಾ ಖಾದರ್ ಬಳಿ ಹೋಗುತ್ತಿದ್ದನು.
ಆಗಸ್ಟ್ 4-5 ರ ಮಧ್ಯರಾತ್ರಿಯಲ್ಲಿ ದರಿಯಾಗಂಜ್ ನಿವಾಸಿಯೊಬ್ಬರು ತಮ್ಮ ಹೆಂಡತಿ ಮತ್ತು ನಾಲ್ವರು ಮಕ್ಕಳೊಂದಿಗೆ ತಮ್ಮ ಮನೆಯಲ್ಲಿ ಮಲಗಿದ್ದರು. ಅವರು ಬೆಳಿಗ್ಗೆ 4 ಗಂಟೆ ಸುಮಾರಿಗೆ ಎಚ್ಚರಗೊಂಡಾಗ, ಅವರ ಒಬ್ಬ ಹೆಣ್ಣು ಮಗಳು ಮನೆಯಿಂದ ಕಾಣೆಯಾಗಿದ್ದಳು. ಆಕೆಯನ್ನು ನೆರೆಹೊರೆಯಲ್ಲಿ ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ದೂರು ದಾಖಲಿಸಿದ್ದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 363ರ ಅಡಿಯಲ್ಲಿ ಅಪಹರಣ ಪ್ರಕರಣ ದಾಖಲಿಸಲಾಗಿತ್ತು. ಪೊಲೀಸರು ಬಾಲಕಿ ಪತ್ತೆ ಕಾರ್ಯ ಆರಂಭಸಿದ್ದರು. ಆಗಸ್ಟ್ 18ರಂದು ನಾಪತ್ತೆಯಾಗಿದ್ದ ಬಾಲಕಿಯ ಶವ ಯಮುನಾ ಖಾದರ್ ಪ್ರದೇಶದಲ್ಲಿ ತೀವ್ರ ಗಾಯಗಳೊಂದಿಗೆ ಪತ್ತೆಯಾಗಿತ್ತು.

ಬಾಲಕಿ ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಪ್ರಕರಣದ ತನಿಖೆಗಾಗಿ 50 ಪೊಲೀಸ್ ಸಿಬ್ಬಂದಿಯ ತಂಡವನ್ನು ರಚಿಸಲಾಗಿತ್ತು ಎಂದು ಉಪ ಪೊಲೀಸ್ ಆಯುಕ್ತ (ಕೇಂದ್ರ) ಶ್ವೇತಾ ಚೌಹಾಣ್ ಹೇಳಿದ್ದಾರೆ.
ಅಕ್ಕಪಕ್ಕದ ಎಲ್ಲ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿತ್ತಾದರೂ ಆರೋಪಿಯ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಯಮುನಾ ಖಾದರ್ ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ಸುಮಾರು 200 ಜನರನ್ನು ವಿಚಾರಣೆಗೆ ಒಳಪಡಿಸಿದಾಗ ಅಪರಾಧಿಯ ಬಗ್ಗೆ ಸುಳಿವು ಸಿಕ್ಕಿದೆ.
ಆರೋಪಿ ರಿಜ್ವಾನ್ ಬಂಧನ
ಆರೋಪಿ ರಿಜ್ವಾನ್ ಅಲಿಯಾಸ್ ಬಾದ್‌ಶಾ ಎಂಬಾತ ಆಗಾಗ್ಗೆ ಯಮುನಾ ಖಾದರ್‌ಗೆ ಭೇಟಿ ನೀಡುತ್ತಿದ್ದನು. ಇತರ ವಿಷಯಗಳೊಂದಿಗೆ ಸಂತ್ರಸ್ತೆಯ ಜೊತೆ ಸ್ನೇಹ ಬೆಳೆಸಿದ್ದ ಎಂಬ ರಹಸ್ಯ ಮಾಹಿತಿ ಸಿಕ್ಕಿತ್ತು. ಘಟನೆಯ ದಿನದಂದು, ರಿಜ್ವಾನ್ ಯಮುನಾ ಖಾದರ್‌ಗೆ ಬಂದಿದ್ದರು ಎಂದು ತಿಳಿದುಬಂದಿದೆ. ಬಳಿಕ ರಿಜ್ವಾನ್ ನನ್ನು ಹುಡುಕಲಾಯಿತು. ನಿರಂತರ ವಿಚಾರಣೆಯಲ್ಲಿ ಆತ ಅಪರಾಧವನ್ನು ಒಪ್ಪಿಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

ಯಮುನಾ ಖಾದರ್ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಂತ್ರಸ್ತೆಯ ತಾಯಿಯೊಂದಿಗೆ ಆತ್ಮೀಯತೆ ಬೆಳೆಸಿಕೊಂಡು ಅಪ್ರಾಪ್ತ ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ್ದನ್ನು ರಿಜ್ವಾನ್ ಬಹಿರಂಗಪಡಿಸಿದ್ದಾನೆ ಎಂದು ಡಿಸಿಪಿ ತಿಳಿಸಿದ್ದಾರೆ. ಸಂತ್ರಸ್ತೆ ತಾಯಿಯೊಂದಿಗೆ ಆರೋಪಿ ಅನ್ಯೋನ್ಯವಾಗಿದ್ದನು. ಹೀಗಾಗಿ ಆತನ ಮೇಲೆ ಅನುಮಾನ ವ್ಯಕ್ತವಾಗಿಲ್ಲ. ಆದರೆ ವಿಚಾರಣೆ ಬಳಿಕ ಈತನೇ ಆರೋಪಿ ಎಂಬುದು ತಿಳಿದು ಬಂದಿದೆ.
ಸಂತ್ರಸ್ತೆ ಕುಟುಂಬದೊಂದಿಗೆ ಅನ್ಯೋನ್ಯವಾಗಿದ್ದ ಆರೋಪಿ
ಘಟನೆಯ ದಿನ ತಾನು ಸಂತ್ರಸ್ತೆಯ ನೆರೆಹೊರೆಯಲ್ಲಿ ತಂಗಿದ್ದರು ಎಂದು ರಿಜ್ವಾನ್ ಹೇಳಿದ್ದಾರೆ. ರಾತ್ರಿಯವರೆಗೆ ಕಾದು ಸಂತ್ರಸ್ತೆಯ ಕುಟುಂಬದ ಎಲ್ಲಾ ಸದಸ್ಯರು ನಿದ್ರಿಸುತ್ತಿದ್ದಾಗ ಆಕೆಯನ್ನು ಅಪಹಾರಿಸಿದ್ದಾನೆ ಎಂದು ಡಿಸಿಪಿ ಹೇಳಿದರು.
ಪೊಲೀಸರ ಪ್ರಕಾರ, ರಿಜ್ವಾನ್ ಕುಟುಂಬದ ಗುಡಿಸಲನ್ನು ಪ್ರವೇಶಿಸಿದಾಗ, ಯುವತಿ ತನ್ನ ಕುಟುಂಬದೊಂದಿಗೆ ಮಲಗಿದ್ದನ್ನು ನೋಡಿದ್ದಾನೆ. ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಪಕ್ಕದ ಯಮುನಾ ಖಾದರ್ ಅರಣ್ಯ ಪ್ರದೇಶದ ಏಕಾಂತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ನಂತರ ಆಕೆಯ ಕತ್ತು ಸೀಳಿ ಮುಖ ವಿರೂಪಗೊಳಿಸಿದ್ದಾನೆ. ಅಪರಾಧ ಕೃತ್ಯಕ್ಕೆ ಬಳಸಿದ್ದ ಚಾಕು ವಶಪಡಿಸಿಕೊಳ್ಳಲಾಗಿದೆ ಎಂದು ಚೌಹಾಣ್ ಹೇಳಿದ್ದಾರೆ.












Click it and Unblock the Notifications