ದೆಹಲಿ: ಕೊರೊನಾ ಸೋಂಕಿನಿಂದ ಮಾಜಿ ಸಚಿವ ಡಾ ಎ ಕೆ ವಾಲಿಯಾ ವಿಧಿವಶ
ನವದೆಹಲಿ, ಏಪ್ರಿಲ್ 22: ಕೊರೊನಾವೈರಸ್ ಸೋಂಕಿನಿಂದ ಬಳಲುತ್ತಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಡಾ. ಎ ಕೆ ವಾಲಿಯಾ ಅವರುಗುರುವಾರ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ನವದೆಹಲಿಯಲ್ಲಿ ಪ್ರಮಾಣಿಕ ನಾಯಕರು ಎಂದೇ ಹೆಸರಾಗಿದ್ದ ಡಾ ಎ ಕೆ ವಾಲಿಯಾ ಅವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1993ರಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಅವರು, ಮೂರು ಬಾರಿ ಗೀತಾ ಕಾಲೋನಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ನಂತರದಲ್ಲಿ ಲಕ್ಷ್ಮಿ ನಗರ್ ಕ್ಷೇತ್ರದಿಂದ ಒಂದು ಬಾರಿ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದರು.
ದೆಹಲಿಯಲ್ಲಿ ಜನಿಸಿದ್ದ ಎ ಕೆ ವಾಲಿಯಾ 1972ರಲ್ಲಿ ಇಂದೋರ್ ಎಂಜಿಎಂ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದುಕೊಂಡರು. ವೈದ್ಯರಾದ ಎ ಕೆ ವಾಲಿಯಾ ಅವರು ಪೂರ್ವ ದೆಹಲಿಯ ಲಕ್ಷ್ಮಿ ನಗರ ಪ್ರದೇಶದಲ್ಲಿ ಆಸ್ಪತ್ರೆ ನಡೆಸುತ್ತಿದ್ದರು.

ದೆಹಲಿ ಸರ್ಕಾರದಲ್ಲಿ ಸಚಿವರಾಗಿ ಸೇವೆ:
ನವದೆಹಲಿಯಲ್ಲಿ ಶೀಲಾ ದೀಕ್ಷಿತ್ ಸರ್ಕಾರದ ಅವಧಿಯಲ್ಲಿ ಡಾ ಎ ಕೆ ವಾಲಿಯಾ ಅವರು ಆರೋಗ್ಯ ಮತ್ತು ನಗರಾಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಯಮುನಾ ತೀರ ಅಭಿವೃದ್ಧಿ ಮಂಡಳಿ ಚೇರ್ ಮನ್ ಆಗಿ ಕೂಡಾ ಸೇವೆ ಸಲ್ಲಿಸಿದ್ದರು.
ಕಳೆದ 2017ರಲ್ಲಿ ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ನೀಡಲು ನಿರಾಕರಿಸಿದ ಹಿನ್ನೆಲೆ ಎ ಕೆ ವಾಲಿಯಾ ಅವರು ಪಕ್ಷವನ್ನು ತೊರೆದಿದ್ದ ಅವರು, ಹಣಕ್ಕಾಗಿ ಟಿಕೆಟ್ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ಆದರೆ ಚುನಾವಣಾ ಫಲಿತಾಂಶದ ನಂತರ ಮತ್ತೆ ವಾಲಿಯಾ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.












Click it and Unblock the Notifications