ಜನರ ಮನಸು ಗೆಲ್ಲುವವರೆಗೂ ಶಾಂತಿ ಇಲ್ಲ: ಕೇಂದ್ರಕ್ಕೆ ಫಾರೂಕ್ ಎಚ್ಚರಿಕೆ
ನವದೆಹಲಿ, ಮೇ 30: ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಲು ಸಾಲು ಹತ್ಯೆಗಳು ಸಂಭವಿಸುತ್ತಿರುವ ಘಟನೆಗೆ ತೀಕ್ಷ್ಣವಾಗಿ ಸ್ಪಂದಿಸಿರುವ ನ್ಯಾಷನಲ್ ಕಾನ್ಫೆರೆನ್ಸ್ ಮುಖ್ಯಸ್ಥ ಹಾಗು ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ಧಾರೆ. ರಾಷ್ಟ್ರರಾಜಧಾನಿ ನಗರಿಯಲ್ಲಿ ಭಾನವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕಾಶ್ಮೀರ ಕಣಿವೆ ಪ್ರದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಗಳಿಗೆ ಕೇಂದ್ರ ಸರಕಾರವೇ ಕಾರಣ ಎಂದು ಗುಡುಗಿದ್ಧಾರೆ.
"ಕಾಶ್ಮೀರದಲ್ಲಿ ದಿನನಿತ್ಯವೂ ಸಾವು ಸಂಭವಿಸುತ್ತಿದೆ. ಹತ್ಯೆ ಆಗದ ದಿನ ಇಲ್ಲವೇ ಇಲ್ಲ ಎನ್ನುವಂತಾಗಿದೆ" ಎಂದು ಫಾರೂಕ್ ಅಬ್ದುಲ್ಲಾ ಇದೇ ವೇಳೆ ವಿಷಾದಿಸಿದರು.
ಜನರ ಹೃದಯ ಗೆಲ್ಲದಿದ್ದರೆ...
"ನೀವು ಜಮ್ಮು ಮತ್ತು ಕಾಶ್ಮೀರದ ಜನರ ಹೃದಯ ಗೆಲ್ಲುವರೆಗೂ ನನಗೆ ಶಾಂತಿ ಇಲ್ಲ, ಕಾಶ್ಮೀರದಲ್ಲಿ ಶಾಂತಿ ಇರುವುದಿಲ್ಲ... ಜಮ್ಮು ಕಾಶ್ಮೀರದ ಹೆಚ್ಚುನ ಭಾಗದಲ್ಲಿ ಸೇನಾ ಯೋಧರೇ ತುಂಬಿದ್ದಾರೆ. ಸೇನೆ ಮೂಲಕ ಯಾವಾಗಲೂ ಜನರ ಮನಸು ಗೆಲ್ಲಲು ಆಗುವುದಿಲ್ಲ. ಪ್ರೀತಿ ವಿಶ್ವಾಸ ಇರಬೇಕು. ಇದನ್ನು ಕೇಂದ್ರ ಸರಕಾರ ಅರಿತುಕೊಳ್ಳಬೇಕು" ಎಂದು ನ್ಯಾಷನಲ್ ಕಾನ್ಫೆರೆನ್ಸ್ ಮುಖ್ಯಸ್ಥರು ಅಭಿಪ್ರಾಯಪಟ್ಟರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಹಿಂಸಾಚಾರ ಹೆಚ್ಚುತ್ತಿದೆ. ಆಯ್ದ ಜನರನ್ನು ಗುರಿಯಾಗಿಸಿ ಉಗ್ರರು ಸರಣಿ ಹತ್ಯೆಗಳನ್ನು ನಡೆಸಿದ್ದಾರೆ. ಭದ್ರತಾ ಪಡೆಗಳೂ ಕೂಡ ತಮ್ಮ ಕಾರ್ಯಾಚರಣೆಯನ್ನು ಇನ್ನಷ್ಟು ತೀಕ್ಷ್ಣಗೊಳಿಸಿದ್ದು ಅನೇಕ ಉಗ್ರರನ್ನು ಸಂಹರಿಸಿರುವುದು ತಿಳಿದುಬಂದಿದೆ. ಮೇ 26ರಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ನೀಡಿದ ಮಾಹಿತಿ ಪ್ರಕಾರ ಈ ಕೇಂದ್ರಾಡಳಿತ ಪ್ರದೇಶದಲ್ಲಿ ಈ ವರ್ಷ ಲಷ್ಕರ್-ಎ-ತೈಯಬಾ ಮತ್ತು ಜೈಷ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಗಳಿಗೆ ಸೇರಿದರೆನ್ನಲಾದ 26 ಉಗ್ರರನ್ನು ಕೊಲ್ಲಲಾಗಿದೆಯಂತೆ.

ಇದೇ ಗುರುವಾರದಂದು ಕುಪ್ವಾರ ಜಿಲ್ಲೆಯಲ್ಲಿ ಮೂವರು ಲಷ್ಕರೆ ಉಗ್ರರನ್ನು ಭದ್ರತಾ ಪಡೆಗಳು ಕೊಂದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಶ್ಮೀರ ವಲಯದ ಐಜಿಪಿ ವಿಜಯ್ ಕುಮಾರ್, "ಈ ವರ್ಷ ಇಲ್ಲಿಯವರೆಗೆ 26 ವಿದೇಶಿ ಉಗ್ರರನ್ನು ಸಂಹರಿಸಿದ್ದೇವೆ" ಎಂದು ಮಾಹಿತಿ ನೀಡಿದ್ದರು.
2019ರಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯದಿಂದ ಲಡಾಖ್ ಅನ್ನು ಪ್ರತ್ಯೇಕಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡಲಾಗಿದೆ. ಅದಾಗಿ ಎರಡು ವರ್ಷ ಬೂದಿಮುಚ್ಚಿದ ಕೆಂಡಂತಿದ್ದ ಕಾಶ್ಮೀರ ಕಣಿವೆಯಲ್ಲಿ ಇತ್ತೀಚೆಗೆ ಹಿಂಸಾಚಾರ, ಎನ್‌ಕೌಂಟರ್‌ಗಳು ಹೆಚ್ಚಿವೆ. ಪಾಕಿಸ್ತಾನದ ಗಡಿ ಮೂಲಕ ಒಳನುಸುಳಿ ಬರವ ಉಗ್ರರ ಸಂಖ್ಯೆ ಹೆಚ್ಚುತ್ತಿದೆ. ಕಾಶ್ಮೀರ ಪಂಡಿತರು ಸೇರಿ ನಿರ್ದಿಷ್ಟ ವರ್ಗದ ಜನರನ್ನು ಗುರಿಯಾಗಿಸಿ ಉಗ್ರರು ಹತ್ಯೆ ನಡೆಸಿದ್ದಾರೆ. 1990ರ ಪರಿಸ್ಥಿತಿ ನೆನಪಿಸುವ ರೀತಿಯಲ್ಲಿ ಉಗ್ರರು ಕಾರ್ಯಾಚರಿಸುತ್ತಿರುವಂತೆ ತೋರುತ್ತಿದೆ. ಭದ್ರತಾ ಪಡೆಗಳೂ ಕೂಡ ಉಗ್ರರನ್ನು ಹುಡುಕಿ ಹುಡುಕಿ ಬೇಟೆಯಾಡುತ್ತಿದೆ.

ಇನ್ನೊಂದೆಡೆ, ಕಾಶ್ಮೀರದಲ್ಲಿ ಪಂಡಿತ ಸಮುದಾಯದವರಿಗೆ ಮರುನೆಲೆ ಕಲ್ಪಿಸುವ ಕೇಂದ್ರ ಸರಕಾರದ ಯೋಜನೆ ನಿರೀಕ್ಷಿತ ಫಲ ಕೊಡದೇ ಹೋಗುವ ಸಂಭವ ಇದೆ. ಉಗ್ರರ ದಾಳಿಗೆ ಈಗಾಗಲೇ ಕಾಶ್ಮೀರಿ ಪಂಡಿತರು ಹೆದರುತ್ತಿದ್ದು, ತಮಗೆ ಸೂಕ್ತ ಭದ್ರತೆ ಒದಗಿಸುತ್ತಿಲ್ಲ ಎಂದು ಕೇಂದ್ರ ಸರಕಾರದ ವಿರುದ್ಧ ದೂರುತ್ತಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications