"ಸಿಎಎ ವಿರುದ್ಧ ಪ್ರತಿಭಟನೆ ತಪ್ಪಲ್ಲ, ರಸ್ತೆ ಬಂದ್ ಮಾಡುವುದು ಸರಿಯಲ್ಲ"
ನವದೆಹಲಿ, ಫೆಬ್ರವರಿ.17: ಕೇಂದ್ರ ಸರ್ಕಾರದ ವಿರುದ್ಧ ಶಾಹಿನ್ ಬಾಗ್ ನಲ್ಲಿ ನಡೆಯುತ್ತಿರುವ ಪ್ರತಿಭಟನಾಕಾರರಿಗೆ ರಸ್ತೆ ಬಂದ್ ಮಾಡದಂತೆ ಸುಪ್ರೀಂಕೋರ್ಟ್ ಖಡಕ್ ಸಂದೇಶ ರವಾನಿಸಿದೆ. ಹೋರಾಟಗಾರರ ಜೊತೆ ಶಾಂತಿ ಮಾತುಕತೆ ನಡೆಸಲು ಮಧ್ಯಸ್ಥಿಕೆ ವಹಿಸುವಂತೆ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರಿಗೆ ಕೋರ್ಟ್ ಸೂಚಿಸಿದೆ.
ನವದೆಹಲಿಯಲ್ಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನೋಂದಣಿ ವಿರೋಧಿ ಪ್ರತಿಭಟನೆಯನ್ನು ನೆಪದಲ್ಲಿ ಶಾಹಿನ್ ಬಾಗ್ ರಸ್ತೆ ಬಂದ್ ಮಾಡಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಸಾರ್ವಜನಿಕ ಅರ್ಜಿಯನ್ನು ಸಲ್ಲಿಸಿದ್ದು, ಸೋಮವಾರ ಸುಪ್ರೀಂಕೋರ್ಟ್ ಅರ್ಜಿ ವಿಚಾರಣೆ ನಡೆಸಿತು.
ರಾಷ್ಟ್ರ ರಾಜಧಾನಿಯಲ್ಲಿನ ಶಾಹಿನ್ ಬಾಗ್ ಪ್ರತಿಭಟನೆಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಿರಿ. ನಗರದ ರಸ್ತೆಗಳಲ್ಲಿ ಮಾತ್ರ ಪ್ರತಿಭಟನೆಗಳನ್ನು ನಡೆಸುವಂತಿಲ್ಲ. ಕಲಿಂದ್ ಗಂಜ್ ಮತ್ತು ಶಾಹಿನ್ ಬಾಗ್ ನಡುವೆ ರಸ್ತೆ ಸಂಚಾರವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಿರಿ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

ಇವತ್ತು ನೀವಾದರೆ, ನಾಳೆ ಮತ್ತೊಬ್ಬರು ಇದನ್ನೇ ಮಾಡುತ್ತಾರೆ
ಸಾರ್ವಜನಿಕ ರಸ್ತೆಗಳು ಸಂಚಾರಕ್ಕೆ ಇರುವುದೇ ಹೊರತೂ ಪ್ರತಿಭಟನೆಗಳನ್ನು ನಡೆಸುವುದಕ್ಕೆ ಅಲ್ಲವೇ ಅಲ್ಲ. ಅಂಥ ರಸ್ತೆಗಳಲ್ಲಿ ನೀವು ಇಂದು ಪ್ರತಿಭಟನೆ ನಡೆಸಿದರೆ, ನಾಳೆ ಮತ್ತೊಬ್ಬರು ನಿಮ್ಮ ದಾರಿಯನ್ನೇ ಅನುಸರಿಸುತ್ತಾರೆ. ಇದರಿಂದ ಅವ್ಯವಸ್ಥೆಗಳು ಹೆಚ್ಚಾಗುತ್ತವೆಯೇ ವಿನಃ ಸಮಸ್ಯೆ ಬಗೆಹರಿಸುವುದಿಲ್ಲ. ನಗರದ ರಸ್ತೆಗಳನ್ನೆಲ್ಲ ಬಂದ್ ಮಾಡುತ್ತಾ ಕುಳಿತರೆ ಸಾರ್ವಜನಿಕರು ಎಲ್ಲಿ ಓಡಾಟಬೇಕು ಎಂದು ಸುಪ್ರೀಂಕೋರ್ಟ್ ಪ್ರಶ್ನೆ ಮಾಡಿದೆ.

ಸಂಧಾನ ಮಾತುಕತೆಯ ಜವಾಬ್ದಾರಿ ಸಂಜಯ್ ಹೆಗ್ಡೆ ಹೆಗಲಿಗೆ
ಶಾಹಿನ್ ಬಾಗ್ ನಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರರ ಜೊತೆಗೆ ಶಾಂತಿ ಮಾತುಕತೆ ನಡೆಸುವಂತೆ ಹಿರಿಯ ವಕೀಲ ಸಂಜಯ್ ಹೆಗ್ಡೆ ಮತ್ತು ಸಾಧನಾ ರಾಮಚಂದ್ರನ್ ಅವರಿಗೆ ಸುಪ್ರೀಂಕೋರ್ಟ್ ಸಲಹೆ ನೀಡಿದೆ. ಶಾಹಿನ್ ಬಾಗ್ ನಿಂದ ಬೇರೆ ಕಡೆಯಲ್ಲಿ ಬೇಕಾದರೆ ಪ್ರತಿಭಟನೆ ಮುಂದುವರಿಸಲಿ. ಆದರೆ, ನಗರದ ಯಾವುದೇ ರಸ್ತೆಗಳನ್ನು ಬಂದ್ ಮಾಡುವಂತಿಲ್ಲ, ಈ ಕುರಿತು ಸಂಧಾನ ನಡೆಸುವಂತೆ ಕೋರ್ಟ್ ಸೂಚಿಸಿದೆ.

ಸುಪ್ರೀಂಕೋರ್ಟ್ ನಿಂದಲೂ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನ
ನಾವು ಮೊದಲಿಗೆ ಶಾಹಿನ್ ಬಾಗ್ ಪ್ರತಿಭಟನೆ ವಿಚಾರವನ್ನು ಇತ್ಯರ್ಥಪಡಿಸುವ ಪ್ರಯತ್ನ ಮಾಡುತ್ತದೆ. ಅದು ಸಾಧ್ಯವಾಗದಿದ್ದರೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಈ ವಿಚಾರವನ್ನು ಹಸ್ತಾಂತರಿಸಲಾಗುತ್ತದೆ. ಸಾಧ್ಯವಾದಷ್ಟು ಇಲ್ಲಿಯೇ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಸಿಎಎ ವಿರೋಧಿ ಹೋರಾಟಗಾರರ ವಿರುದ್ಧ ದೂಷಣೆ
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಪ್ರತಿಭಟನೆಯನ್ನೇನೋ ಮಾಡಲಾಗುತ್ತಿದೆ. ಆದರೆ, ಇದರಲ್ಲಿ ಮಹಿಳೆಯರು ಮತ್ತು ಪುಟ್ಟ ಮಕ್ಕಳನ್ನು ಗುರುಣಿಯಂತೆ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ. ಕಳೆದ ಡಿಸೆಂಬರ್.15ರಿಂದಲೂ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಹಿಳೆಯರು ಮತ್ತು ಮಕ್ಕಳನ್ನೂ ಕೂಡಾ ಕೂರಿಸಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ರಸ್ತೆ ಬಂದ್ ಮಾಡಿರುವುದನ್ನು ಪ್ರಶ್ನೆಸಿ ಹಿರಿಯ ವಕೀಲ ಅಮಿತ್ ಸಹಾನಿ ಸುಪ್ರೀಂಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.












Click it and Unblock the Notifications