ಅಪನಗದೀಕರಣ ವ್ಯವಸ್ಥಿತ ಹಣಕಾಸು ಅಪರಾಧ ಹಗರಣ: ರಾಹುಲ್ ಗಾಂಧಿ
ನವದೆಹಲಿ, ನವೆಂಬರ್ 8: ಕೇಂದ್ರ ಸರ್ಕಾರವು ವಿವಾದಾತ್ಮಕ ಅಪನಗದೀಕರಣ ನಿರ್ಧಾರ ತೆಗೆದುಕೊಂಡು ಗುರುವಾರ (ನ.8) ಎರಡು ವರ್ಷ ಭರ್ತಿಯಾದ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದಂತೆ ವಿವಿಧ ವಿರೋಧ ಪಕ್ಷಗಳು ದೇಶದೆಲ್ಲೆಡೆ ಪ್ರತಿಭಟನೆ ನಡೆಸಿವೆ.
ರಾಜಕೀಯ ಪಕ್ಷಗಳ ಮುಖಂಡರು ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಈ ದಿನವನ್ನು ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಕಟುವಾಗಿ ಟೀಕಿಸಲು ಬಳಸಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರವು ಉದ್ದೇಶಪೂರ್ವಕವಾಗಿ ಮತ್ತು ಯೋಜನಾಬದ್ಧವಾಗಿ ಹೆಣೆದ ಅಪರಾಧದ ಸಂಚು ಎಂದು ಅವರು ಆರೋಪಿಸಿದ್ದಾರೆ.
|
ರೂಪಿತ ಆರ್ಥಿಕ ಹಗರಣ
'ಎರಡು ವರ್ಷ ಹಿಂದೆ ತೆಗೆದುಕೊಂಡ ನಿರ್ಧಾರ ಎಚ್ಚರಿಕೆ ತಪ್ಪಿ ರೂಪಸಿದ್ದಾಗಿರಲಿಲ್ಲ. ಮುಗ್ಧ ಉದ್ದೇಶದೊಂದಿಗೆ ಜಾರಿಗೆ ಮಾಡಲಾದ ಆರ್ಥಿಕ ನೀತಿಯೂ ಅಲ್ಲ. ಆದರೆ ಇದು ಎಚ್ಚರಿಕೆಯಿಂದ ಯೋಜಿಸಿದ, ಆರ್ಥಿಕ ಅಪರಾಧ ಹಗರಣ' ಎಂದು ರಾಹುಲ್ ಗಾಂಧಿ ವಿಶ್ಲೇಷಿಸಿದ್ದಾರೆ.

ಮಾನ್ಯುಮೆಂಟಲ್ ಬ್ಲಂಡರ್
ಇದು 'ಮಾನ್ಯುಮೆಂಟಲ್ ಬ್ಲಂಡರ್' ಮತ್ತು ನಮ್ಮ ಅದಕ್ಷ ಹಣಕಾಸು ಸಚಿವರು ಸೇರಿದಂತೆ ಈ ನೀತಿಯ ರಾಜಕೀಯ ವಕ್ತಾರರು ಈಗ ಸಮರ್ಥಿಸಿಕೊಳ್ಳಲಾಗದ, ಅಪರಾಧಿ ನೀತಿಯನ್ನು ಸಮರ್ಥಿಸಿಕೊಳ್ಳುವ ಅಸಾಧ್ಯಕರ ಕಾರ್ಯವನ್ನು ಹೆಗಲಿಗೇರಿಸಿಕೊಂಡಿದ್ದಾರೆ ಎಂದು ಮೋದಿ ಸರ್ಕಾರದ ಸಚಿವರ ವಿರುದ್ಧ ಕಿಡಿಕಾರಿದ್ದಾರೆ.
| Array |
ಜನರು ಜೀವ ಕಳೆದುಕೊಂಡರು
ಹಳೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು, ಹೊಸ ನೋಟುಗಳನ್ನು ಪಡೆದುಕೊಳ್ಳಲು ದಿನಗಟ್ಟಲೆ ಜನರು ಸರದಿಯಲ್ಲಿ ನಿಲ್ಲುವಂತಾಗಿತ್ತು. ಹೀಗೆ ಸರದಿಗಳಲ್ಲಿ ನಿಂತು 120ಕ್ಕೂ ಹೆಚ್ಚು ಭಾರತೀಯರು ಜೀವ ಕಳೆದುಕೊಂಡಿದ್ದಾರೆ. ನಾವು ಅದನ್ನು ಎಂದಿಗೂ ಮರೆಯಬಾರದು. ಲಕ್ಷಾಂತರ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ನೆಲಕಚ್ಚಿದವು. ಸಣ್ಣಪುಟ್ಟ ವಲಯಗಳೆಲ್ಲವೂ ನಾಶವಾದವು ಎಂದು ರಾಹುಲ್ ಆರೋಪಿಸಿದ್ದಾರೆ.

ಯಾವ ಭರವಸೆಯೂ ಈಡೇರಿಲ್ಲ
ಉದ್ದೇಶಿತ ಫಲಿತಾಂಶವನ್ನು ನೀಡುವಲ್ಲಿ ಅಪನಗದೀಕರಣ ವಿಫಲವಾಗಿದೆ. ನಕಲಿ ನೋಟುಗಳು ಮತ್ತು ಭಯೋತ್ಪಾದನೆ, ಕಪ್ಪುಹಣದ ಸಮಸ್ಯೆಯನ್ನು ಶಾಶ್ಚತವಾಗಿ ನಿರ್ಮೂಲನೆ ಮಾಡುವುದು, ಡಿಜಿಟಲ್ ವ್ಯವಹಾರಕ್ಕೆ ಬಲವಂತವಾಗಿ ಬದಲಾಯಿಸುವುದರ ಮೂಲಕ ಉಳಿತಾಯ ಹೆಚ್ಚಳ ಮಾಡುವುದು... ಈ ಎಲ್ಲ ಉದ್ದೇಶಗಳಲ್ಲಿಯೂ ಒಂದೇ ಒಂದನ್ನು ಕೂಡ ಈಡೇರಿಸುವುದು ಸರ್ಕಾರದಿಂದ ಸಾಧ್ಯವಾಗಿಲ್ಲ ಎಂದು ಟೀಕಿಸಿದ್ದಾರೆ.












Click it and Unblock the Notifications