Real Estate: ಬಿಡದಿ 7481 ಎಕ್ರೆ ಭೂಸ್ವಾಧೀನಕ್ಕೆ ವಿರೋಧ; ರಾಹುಲ್ ಗಾಂಧಿಗೆ ಬಿಜೆಪಿ ವಿಜಯೇಂದ್ರ ಪತ್ರ
ಬೆಂಗಳೂರು: ರಾಜ್ಯ ಸರ್ಕಾರ ರೈತರ ವಿರೋಧದ ನಡುವೆಯು ಬಿಡದಿಯಲ್ಲಿನ ಉದ್ದೇಶಿತ ಟೌನ್‌ಶಿಪ್ ಯೋಜನೆಯ ಸಾಕಾರಕ್ಕೆ ಅಧಿಸೂಚನೆ ಹೊರಡಿಸಿದೆ. ಇನ್ನೇನು ಒತ್ತಾಯಪೂರ್ವಕವಾಗಿ ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾಗಲಿದೆ. ರೈತರ ಹಿತಾಸಕ್ತಿಗಳ ವಿರುದ್ಧವಾಗಿ, ಬಿಡದಿ ಬಳಿಯ ಫಲವತ್ತಾದ ಭೂಮಿಯನ್ನು ರಿಯಲ್ ಎಸ್ಟೇಟ್ ಹೆಸರಿನಲ್ಲಿ ಕಬಳಿಸುವ ಹುನ್ನಾರ ನಡೆದಿದೆ ಎಂದಿರುವ ರಾಜ್ಯ ಬಿಜೆಪಿಯು ಲೋಕಸಭಾ ಪ್ರತಿ ಪಕ್ಷ ರಾಹುಲ್ ಗಾಂಧಿ ಮಧ್ಯ ಪ್ರವೇಶಕ್ಕೆ ಪತ್ರ ಬರೆದಿದೆ.
ರಾಹುಲ್ ಗಾಂಧಿಗೆ ಪತ್ರ ಬರೆದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 'ರಾಜ್ಯ ಕಾಂಗ್ರೆಸ್ ಸರ್ಕಾರವು ಸರ್ಕಾರ ಕೈಗೆತ್ತಿಕೊಂಡಿರುವ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಕೂಡಲೇ ತಾವು ಮಧ್ಯಪ್ರವೇಶಿಸಬೇಕು. ಇದೆಲ್ಲ ಇಲ್ಲಿಗೆ ನಿಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸುವಂತೆ ಒತ್ತಾಯಿಸಿದ್ದಾರೆ. ಈ ಕೂಡಲೇ ತಾವು ಮಧ್ಯಪ್ರವೇಶಿಸಿ ಕಣ್ಣೀರು ಹಾಕುತ್ತಿರುವ ರೈತ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಅವರು ಕೋರಿದ್ದಾರೆ.

ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ರಾಜ್ಯದ ರೈತರ ಅಳಲನ್ನು ಕೇಳಿಸಿಕೊಳ್ಳುತ್ತಿಲ್ಲ. ಹೀಗಾಗಿ ನಿಮಗೆ ಪತ್ರವನ್ನು ಬರೆಯುತ್ತಿದ್ದೇನೆ. ಕರ್ನಾಟಕದ ಬೆಂಗಳೂರು ದಕ್ಷಿಣ ಜಿಲ್ಲೆಯ (ಹಿಂದಿನ ರಾಮನಗರ ಜಿಲ್ಲೆ) ಬಿಡದಿಯಲ್ಲಿ ಫಲವತ್ತಾದ ಭೂಮಿಯನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಸಾವಿರಾರು ಶೋಷಿತ ಅನ್ನದಾತರ ಕುಟುಂಬಗಳ ಧ್ವನಿಯಾಗಿ ನಿಮ್ಮ ಗಮನಕ್ಕೆ ಕೆಲವು ವಿಷಯಗಳನ್ನು ತರುತ್ತಿದ್ದೇವೆ. ಇದಕ್ಕೆ ನ್ಯಾಯಯುತ ಪ್ರತಿಕ್ರಿಯೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ನೀವು ದೇಶದಾದ್ಯಂತ ರೈತರ ಭೂಮಿ ಉಳಿಸುವ ಹಾಗೂ ಕಾರ್ಪೊರೇಟ್ ಕಪಿಮುಷ್ಟಿಯಿಂದ ದೇಶವನ್ನು ರಕ್ಷಿಸುವ ಹೆಸರಿನಲ್ಲಿ ಘೋಷಣೆ ಕೂಗುತ್ತೀರಿ. ಯಾತ್ರೆ ನಡೆಸುತ್ತೀರಿ. ಆದರೆ ಕಾಂಗ್ರೆಸ್ ಸರ್ಕಾರವಿರುವ ಕರ್ನಾಟಕದಲ್ಲಿ, ನಿಮ್ಮ ಮುಖ್ಯಮಂತ್ರಿಗಳು ನಾಡಿನ ಅನ್ನದಾತ ರೈತರ ಹಿತ ನಿರ್ಲಕ್ಷಿಸುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ಭಾವಿಸುತ್ತೇನೆ. ಬಿಡದಿ ಸಮಗ್ರ ನಗರ (Greater Bengaluru Integrated Township-GBIT) ಯೋಜನೆ ಹೆಸರಿನಲ್ಲಿ ನಡೆಯುತ್ತಿರುವ ಈ ಸರ್ಕಾರಿ ಭೂಕಬಳಿಕೆ'ಯ ಬಗ್ಗೆ ನಿಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದಿದ್ದಾರೆ.
ಬೆಂಗಳೂರು ನಗರದ ಸಂಚಾರ ದಟ್ಟಣೆ ಮತ್ತು ಜನಸಂದಣಿ ಒತ್ತಡ ಕಡಿಮೆ ಮಾಡಲು, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಬಿಡದಿ ಮತ್ತು ಹಾರೋಹಳ್ಳಿ ನಡುವೆ ಸುಮಾರು 7,481 ಎಕರೆ ಪ್ರದೇಶದಲ್ಲಿ "ವರ್ಕ್-ಲಿವ್-ಪ್ಲೇ" (Work-Live-Play) ಮಾದರಿಯ ಬೃಹತ್ ಉಪನಗರ (Satellite Township) ಅಭಿವೃದ್ಧಿಪಡಿಸಲು ಮುಂದಾಗಿದೆ. ಈ ಯೋಜನೆಗೆ ಅಂದಾಜು 18,000 ಕೋಟಿ ರೂ. ವೆಚ್ಚವನ್ನು ನಿಗದಿಪಡಿಸಲಾಗಿದೆ. ಎರಡನೇ ಪ್ರಮುಖ ವಾಣಿಜ್ಯ ಕೇಂದ್ರ ನಿರ್ಮಿಸಲಾಗುತ್ತಿದೆ. ಜೂನ್ 11 ರಂದು ಭೂಸ್ವಾಧೀನದ ಅಂತಿಮ ಅಧಿಸೂಚನೆ ಹೊರಡಿಸಿದೆ.
ಫಲವತ್ತಾದ ಕೃಷಿ ಭೂಮಿಯನ್ನೇ ಆಯ್ಕೆ ಮಾಡಿಕೊಂಡು ಈ ಯೋಜನೆಯನ್ನು ಮುಂದುವರಿಸುವ ಅಗತ್ಯ ಮತ್ತು ಸಮರ್ಥನೆ ಏನು? ಈ ಹಿನ್ನೆಲೆ ರೈತರ ಪರವಾಗಿ ನೀವು ಸ್ಪಂದಿಸುವ ನಂಬಿಕೆ ಇದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
470+ ದಿನಗಳ ಹೋರಾಟಕ್ಕೆ ಬೆಲೆಯಿಲ್ಲವೇ?
ಬಿಡದಿಯ25 ಹಳ್ಳಿಗಳ ಅನ್ನದಾತರು ಕಳೆದ 470ಕ್ಕೂ ಅಧಿಕ ದಿನಗಳಿಂದ ನಿರಂತರವಾಗಿ ಶಾಂತಿಯುತ ಧರಣಿ ನಡೆಸುತ್ತಿದ್ದಾರೆ. 3,500ಕ್ಕೂ ಹೆಚ್ಚು ಸಣ್ಣ ಹಿಡುವಳಿದಾರರು ಲಿಖಿತ ಆಕ್ಷೇಪಣೆ ಸಲ್ಲಿಸಿದ್ದಾರೆ. ಹೀಗಿದ್ದರೂ ನಿಮ್ಮ ಮುಖ್ಯಮಂತ್ರಿಗಳು ಯಾವುದೇ ಸಾರ್ವಜನಿಕ ಸಭೆ ನಡೆಸದೇ ರೈತರ ಒಪ್ಪಿಗೆ ಸಂಪೂರ್ಣವಾಗಿ ಬದಿಗೊತ್ತಿ, ಅಂತಿಮ ಅಧಿಸೂಚನೆ ಹೊರಡಿಸಿದ್ದಾರೆ.
ಹಸಿರು ಭೂಮಿ ಕಾಂಕ್ರೀಟ್ ಜಂಗಲ್
ಬೆಂಗಳೂರು ನಗರಕ್ಕೆ ಪ್ರತಿದಿನ ಹಾಲು, ತರಕಾರಿ ಮತ್ತು ಹಣ್ಣುಗಳನ್ನು ಪೂರೈಸುವ, ತೆಂಗು, ಅಡಿಕೆ ಮತ್ತು ಬಾಳೆ ಬೆಳೆಯುವ ಅತ್ಯಂತ ಫಲವತ್ತಾದ ಭೂಮಿ ಇಲ್ಲಿದೆ. ಅತ್ಯಧಿಕ ಇಳುವರಿ ನೀಡುವ ಭೂಮಿಯಾಗಿದೆ. ಸಾವಿರಾರು ಗ್ರಾಮೀಣ ಮಹಿಳೆಯರು ಈ ಕೃಷಿ ಮತ್ತು ಸ್ಥಳೀಯ ಅಡಿಕೆ ತಟ್ಟೆ ತಯಾರಿಕಾ ಘಟಕ ನಂಬಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಹತ್ತಿರದಲ್ಲೇ ಇರುವ 1,000 ಎಕರೆ ವಿಸ್ತೀರ್ಣದ ಐತಿಹಾಸಿಕ ಬೈರಮಂಗಲ ಕೆರೆಯ ಪರಿಸರ ವ್ಯವಸ್ಥೆಯನ್ನು ನಾಶ ಮಾಡಿ, ಅಲ್ಲಿ "Work-Live-Play" ಹೆಸರಿನ ಕಾಂಕ್ರೀಟ್ ಜಂಗಲ್ ನಿರ್ಮಿಸಲು ಹೊರಟಿರುವುದು ಯಾವ ರೀತಿಯಲ್ಲಿ ಸಮರ್ಥನೀಯ? ಎಂದು ಬಿಜೆಪಿ ಪ್ರಶ್ನಿಸಿದೆ.
ಯೋಜನೆಯಿಂದ ಗ್ರಾಮೀಣ ಮಹಿಳೆಯರು ಅಭದ್ರ
ಈ ಯೋಜನೆಯಿಂದಾಗಿ ಗ್ರಾಮೀಣ ಭಾಗದ ಮಹಿಳಾ ಕಾರ್ಮಿಕರು ತಮ್ಮ ಕೃಷಿ ಮೂಲದ ಉದ್ಯೋಗ ಕಳೆದುಕೊಂಡು ನಗರದ ಅಸಂಘಟಿತ ಮತ್ತು ಅಭದ್ರ ವಲಯಕ್ಕೆ ತಳ್ಳಲ್ಪಡುತ್ತಿದ್ದಾರೆ. ಬಡವರ ಭೂಮಿಯನ್ನು ಅತ್ಯಂತ ಕಡಿಮೆ ಮಾರ್ಗಸೂಚಿದರಕ್ಕೆ (Guidance Value) ಕಿತ್ತುಕೊಂಡು, ರಿಯಲ್ ಎಸ್ಟೇಟ್ ಉದ್ಯಮಿಗಳ ಹಿತಾಸಕ್ತಿ ಕಾಯಲಾಗುತ್ತದೆ ಎಂದು ವಿಜಯೇಂದ್ರ ದೂರಿದ್ದಾರೆ.
ಈ ಕಾರಣದಿಂದ ರಾಜ್ಯದ ರೈತರ ಸಲುವಾಗಿ ತಾವು ಮಧ್ಯಪ್ರವೇಶಿಸಿ, ರಾಜ್ಯದ ಮುಖ್ಯಮಂತ್ರಿಗಳಿಗೆ, ರೈತರ ಹಿತಾಸಕ್ತಿಗಳ ವಿರುದ್ಧವಾಗಿ ನಡೆಸಲಾಗುತ್ತಿರುವ ಈ ಬಲವಂತದ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವಂತೆ ಸೂಚಿಸಬೇಕು ಎಂದು ಎಂದು ಪತ್ರದಲ್ಲಿ ಕೋರಿದ್ದಾರೆ.















Click it and Unblock the Notifications