ದೆಹಲಿ ಹಿಂಸಾಚಾರ: ಮೃತರಿಗೆ 10, ಮನೆ-ಅಂಗಡಿ ಹಾನಿಗೆ 5 ಲಕ್ಷ ಪರಿಹಾರ
ನವದೆಹಲಿ, ಫೆಬ್ರವರಿ.27: ಕಳೆದ ಮೂರು ದಿನಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಅರವಿಂದ್ ಕೇಜ್ರಿವಾಲ್ ಹಿಂಸಾಚಾರದಲ್ಲಿ ಗಾಯಗೊಂಡು ದಿವ್ಯಾಂಗರಾದವರಿಗೆ ತಲಾ 5 ಲಕ್ಷ ರೂಪಾಯಿ, ಗಾಯಗೊಂಡವರಿಗೆ ತಲಾ 2 ಲಕ್ಷ ರೂಪಾಯಿ, ಮನೆ ಕಳೆದುಕೊಂಡವರಿಗೆ 5 ಲಕ್ಷ ರೂಪಾಯಿ ಹಾಗೂ ಅಂಗಡಿ ಹಾನಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ಪರ ಮತ್ತು ವಿರೋಧಿ ಗುಂಪುಗಳ ನಡುವೆ ನಡೆದ ಹಿಂಸಾಚಾರದಲ್ಲಿ ಈವರೆಗೂ 34 ಮಂದಿ ಪ್ರಾಣ ಬಿಟ್ಟಿದ್ದು, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಗಾಯಾಳುಗಳ ಚಿಕಿತ್ಸೆಗೆ ಪರಿಷ್ಟೆ ಯೋಜನೆ:
ದೆಹಲಿ ಹಿಂಸಾಚಾರದಲ್ಲಿ ಗಾಯಗೊಂಡವರು ಫರಿಷ್ಟೆ ಯೋಜನೆ ಅಡಿ ಖಾಸಗಿ ಆಸ್ಪತ್ರೆಗಳಲ್ಲೂ ಉಚಿತವಾಗಿ ಚಿಕಿತ್ಸೆ ಪಡೆಯಲು ಅನುಕೂಲವಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ
ಹಿಂಸಾಚಾರಕ್ಕೆ ಪ್ರಚೋದಿಸಿದವರ ವಿರುದ್ಧ ಶಿಸ್ತುಕ್ರಮ:
ದೆಹಲಿಯಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ನಾಯಕರ ವಿರುದ್ಧ ಪೊಲೀಸರು ಶಿಸ್ತುಕ್ರಮ ತೆಗೆದುಕೊಳ್ಳಬೇಕು. ರಾಷ್ಟ್ರೀಯ ರಕ್ಷಣಾ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಹಿಂಸೆಗೆ ಕುಮ್ಮಕ್ಕು ನೀಡುವವರು ಯಾವುದೇ ಪಕ್ಷದವರಾದರೂ ಸರಿ. ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಒಂದು ವೇಳೆ ಆಮ್ ಆದ್ಮಿ ಪಕ್ಷದ ನಾಯಕರು ಅಂಥ ಕೆಲಸ ಮಾಡಿದ್ದಲ್ಲಿ ಅವರ ವಿರುದ್ಧ ಎರಡು ಪಟ್ಟು ಶಿಕ್ಷೆಗೆ ಗುರಿಪಡಿಸಿ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದರು.












Click it and Unblock the Notifications